ADVERTISEMENT

ಚುನಾವಣೆ ಕಣದಲ್ಲಿ ‘ನೆಂಟ’ರ ಮಾತು

ಜೆಡಿಎಸ್ ಅಭ್ಯರ್ಥಿಯಾಗಿ ಎನ್.ರಾಧಾಕೃಷ್ಣ ಉಪ ಚುನಾವಣೆ ಕಣಕ್ಕೆ, ವಿರೋಧಿ ಪಾಳೆಯಗಳಲ್ಲಿ ‘ಕುಟುಂಬ ರಾಜಕಾರಣ’ ಆರೋಪ

ಈರಪ್ಪ ಹಳಕಟ್ಟಿ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಎನ್.ರಾಧಾಕೃಷ್ಣ ಅವರು ಇಳಿಯುತ್ತಿದ್ದಂತೆ ‘ಕುಟುಂಬ ರಾಜಕಾರಣ’ದ ಚರ್ಚೆ ಮುನ್ನೆಲೆಗೆ ಬಂದಿದೆ. ಸದ್ಯ ಕ್ಷೇತ್ರದಲ್ಲಿ ಯಾರು, ಯಾರಿಗೆಲ್ಲ ‘ನೆಂಟ’ರು ಎಂಬ ವ್ಯಂಗ್ಯ, ಆಕ್ರೋಶ ಭರಿತ ಟೀಕೆಗಳು ವ್ಯಕ್ತವಾಗಲು ಆರಂಭಿಸಿವೆ.

ಜೆಡಿಎಸ್ ಶಾಸಕಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ತಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ನಗರಕ್ಕೆ ಬಂದಾಗ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿ, ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಕಟು ಟೀಕೆ ಮಾಡಿ ಹೋದ ಬೆನ್ನಲ್ಲೇ, ಚುನಾವಣೆ ಕಣದಲ್ಲಿ ‘ನೆಂಟ’ರ ಮಾತು ಜೋರಾಗಿ ಕೇಳಿಬರುತ್ತಿವೆ.

ಕುಮಾರಸ್ವಾಮಿ

ಕುಮಾರಸ್ವಾಮಿ ಅವರು, ‘ಸುಧಾಕರ್ ಅವರು ಒಮ್ಮೆ ನಮ್ಮ ಮನೆಗೆ ಬಂದು ನಾನು ನಿಮ್ಮ ನೆಂಟ ಎಂದಿದ್ದರು. ಇನ್ನೊಂದು ಕಡೆ ಅದೇ ನೆಂಟನಿಗೆ ವಿಷ ಹಾಕಿದರು. ಭೂಮಿ ಮೇಲೆ ತಾನೊಬ್ಬನೇ ಬುದ್ಧಿವಂತ ಎಂದು ತಿಳಿದುಕೊಂಡಿರುವವರು ಯಾವೆಲ್ಲ ಸಂದರ್ಭಗಳಲ್ಲಿ ಯಾರಿಗೆಲ್ಲ ಟೋಪಿ ಹಾಕಿದ್ದಾರೆ ಎಂಬುದು ಗೊತ್ತಿದೆ. ಅದನ್ನೆಲ್ಲ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ’ ಎಂದು ಆಕ್ರೋಶ ಹೊರಹಾಕಿದ್ದರು.

ADVERTISEMENT

ಅದರ ಬೆನ್ನಲ್ಲೇ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದವರ ಪೈಕಿ ರಾಧಾಕೃಷ್ಣ ಅವರ ನಾಮಪತ್ರ ಕ್ರಮಬದ್ಧಗೊಂಡು, ಬಚ್ಚೇಗೌಡರ ನಾಮಪತ್ರ ತಿರಸ್ಕೃತಗೊಳ್ಳುತ್ತಿದ್ದಂತೆ ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲೂ ತಮ್ಮ ಸಂಬಂಧಿಯನ್ನೇ ಕಣಕ್ಕಿಳಿಸಿ, ಬಚ್ಚೇಗೌಡರಿಗೆ ಅನ್ಯಾಯ ಮಾಡಿ ಕುಟುಂಬ ರಾಜಕಾರಣ ಮುಂದುವರಿಸುತ್ತಿದ್ದಾರೆ ಎಂಬ ಆರೋಪಗಳು ವಿರೋಧಿ ಪಾಳೆಯಗಳಲ್ಲಿ ವ್ಯಕ್ತವಾಗುತ್ತಿವೆ.

ಕೆ.ಪಿ.ಬಚ್ಚೇಗೌಡ

ಈ ಕುರಿತು ಎನ್.ರಾಧಾಕೃಷ್ಣ ಅವರನ್ನು ಪ್ರಶ್ನಿಸಿದರೆ, ‘ಅನಿತಾ ಕುಮಾರಸ್ವಾಮಿ ಅವರ ತಾಯಿ ಮತ್ತು ನಮ್ಮ ಅತ್ತೆ ಸಹೋದರಿಯರು. ಹೀಗಾಗಿ, ಕುಮಾರಸ್ವಾಮಿ ಅವರು ನನಗೆ ವರಸೆಯಲ್ಲಿ ಸಹೋದರನಾಗಬೇಕು. ಅವರಿಗೆ ನಾನು ದೂರದಿಂದ ಸಂಬಂಧಿಯೇ ವಿನಾ ಅವರ ಕುಟುಂಬದಿಂದ ಬಂದವನಲ್ಲ. ಹಾಗೇ ನೋಡಿದರೆ ನಾನೊಬ್ಬನೇ ಅಲ್ಲ; ಸುಧಾಕರ್, ಬಚ್ಚೇಗೌಡ ಅವರೂ ಕುಮಾರಸ್ವಾಮಿ ಅವರಿಗೆ ಸಂಬಂಧಿಗಳಾಗಬೇಕು’ ಎಂದು ಹೇಳಿದರು.

‘ನಾನು ಇದೇ ಜಿಲ್ಲೆಯವನು. ಮೊದಲಿನಿಂದಲೂ ಈ ಭಾಗದ ಒಡನಾಟ ಇಟ್ಟುಕೊಂಡಿರುವೆ. ರೈತಾಪಿ ಕುಟುಂಬದಿಂದ ಬಂದಿರುವ ನನಗೆ ರೈತರ ನೋವುಗಳ ಬಗ್ಗೆ ಅರಿವಿದೆ. ಬಚ್ಚೇಗೌಡ ಅವರು ಉಪ ಚುನಾವಣೆಗೆ ಸ್ಪರ್ಧಿಸಲು ಒಪ್ಪದ ಕಾರಣ ಆಕಾಂಕ್ಷಿಯಾಗಿದ್ದ ನನಗೆ ಅವಕಾಶ ನೀಡಿದ್ದಾರೆ. ಇದರಲ್ಲಿ ಕುಟುಂಬದ ರಾಜಕಾರಣವಾಗಲಿ, ನೆಂಟರು ಎಂದಾಗಲಿ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ತಿಳಿಸಿದರು.

ಮಾಜಿ ಶಾಸಕ, ಜೆಡಿಎಸ್ ಮುಖಂಡ ಕೆ.ಪಿ.ಬಚ್ಚೇಗೌಡ ಅವರನ್ನು ವಿಚಾರಿಸಿದರೆ, ‘ಇದೇ ಜಿಲ್ಲೆಯವರಾದ ಅನಿತಾ ಕುಮಾರಸ್ವಾಮಿ ಅವರು ನನ್ನ ಸೋದರ ಮಾವನ ಕಡೆಯಿಂದ ನಮಗೂ ನೆಂಟರಾಗಬೇಕು. ಸುಧಾಕರ್ ಅವರು ಕೂಡ ನಾವು ನೆಂಟರು ಎಂದು ಹೇಳಿಕೊಂಡು ಮನೆಗೆ ಹೋಗಿದ್ದ ಕಥೆಯನ್ನು ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ. ನಾವು ಅವರಿಗೆ ಹತ್ತಿರದ ಸಂಬಂಧಿಗಳಲ್ಲ. ಜಾತಿ ಕಾರಣಕ್ಕೆ ಎಲ್ಲೋ ಒಂದು ಕಡೆ ಸಂಬಂಧ ಬೆಸೆದಿರಬಹುದು’ ಎಂದರು.

‘ಮಕ್ಕಳು, ಮೊಮ್ಮಕ್ಕಳನ್ನು ಚುನಾವಣೆಗೆ ಇಳಿಸುವುದು ಕುಟುಂಬ ರಾಜಕಾರಣ. ಹೊರಗಿನವರಿಗೆ ಟಿಕೆಟ್ ಕೊಡುವುದು ಹೇಗೆ ಕುಟುಂಬ ರಾಜಕಾರಣವಾಗುತ್ತದೆ? ಅಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ, ಮಗ ಅನರ್ಹ ಶಾಸಕ, ಚಿಕ್ಕಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮತ್ತೊಬ್ಬ ಚಿಕ್ಕಪ್ಪ ಬ್ಯಾಂಕ್ ನಿರ್ದೇಶಕ. ಇದಕ್ಕೆ ಕುಟುಂಬ ರಾಜಕಾರಣ ಎನ್ನುವುದಿಲ್ಲವೆ?’ ಎಂದು ಬಚ್ಚೇಗೌಡ ಅವರು ಸುಧಾಕರ್ ಅವರ ಬಗ್ಗೆ ಟೀಕೆ ಮಾಡಿದರು.

ಪ್ರತಿಕ್ರಿಯೆಗಾಗಿ ಸುಧಾಕರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಇದು ಕುಟುಂಬ ರಾಜಕಾರಣವಲ್ಲವೆ?

ಹಗಲುರಾತ್ರಿ ಶ್ರಮಿಸಿ 30 ವರ್ಷ ಪಕ್ಷ ಕಟ್ಟಿದ್ದ, ಆಪ್ತ ಸ್ನೇಹಿತನಾದ ನನಗೆ ಈ ಹಿಂದೆ ಬಚ್ಚೇಗೌಡರು ಕೆಲ ಬಾರಿ ಟಿಕೆಟ್‌ ಬಿಟ್ಟುಕೊಡಲಿಲ್ಲ. ಕುಮಾರಸ್ವಾಮಿ ಅವರೂ ನೆರವಿಗೆ ಬರಲಿಲ್ಲ. ಆದರೆ ಬಚ್ಚೇಗೌಡ ಅವರು ಇದೀಗ ರಾಧಾಕೃಷ್ಣ ಅವರಿಗೆ ಸುಲಭವಾಗಿ ಅವಕಾಶ ಬಿಟ್ಟುಕೊಟ್ಟಿರುವುದು ನೋಡಿದರೆ, ನಮ್ಮ ಸಂಬಂಧಿಗಳೇ ಸ್ಪರ್ಧಿಸಲಿ ಎಂಬ ಅವರ ಆಸೆ ತೋರಿಸುತ್ತದೆ. ಇದು ಕುಟುಂಬ ರಾಜಕಾರಣವಲ್ಲವೆ?


–ಕೆ.ವಿ.ನಾಗರಾಜ್, ಬಿಜೆಪಿ ಮುಖಂಡ

**

ನಾನು ವೈಯಕ್ತಿಕವಾಗಿ ಬೆಳೆದದ್ದಕ್ಕೆ ಮಾನ್ಯತೆ ಬಂದಿದೆ ವಿನಾ ಕುಮಾರಸ್ವಾಮಿ ಅವರ ಸಂಬಂಧಿ ಎಂಬ ಕಾರಣಕ್ಕಲ್ಲ. ಕುಮಾರಸ್ವಾಮಿ ಸಂಬಂಧಿ ಎಂದು ನಾನು ಮತ ಯಾಚನೆ ಮಾಡುತ್ತಿಲ್ಲ.


–ಎನ್.ರಾಧಾಕೃಷ್ಣ, ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.