ADVERTISEMENT

ರಾಜ್ಯ ಬಜೆಟ್‌: ಗುಡಿಬಂಡೆ ತಾಲ್ಲೂಕಿಗೆ ಸಿಗುವುದೇ ಅನುದಾನ?

ಜೆ.ವೆಂಕಟರಾಯಪ್ಪ
Published 15 ಫೆಬ್ರುವರಿ 2024, 6:02 IST
Last Updated 15 ಫೆಬ್ರುವರಿ 2024, 6:02 IST
ಕಡೇಹಳ್ಳಿ ಅನಂದ
ಕಡೇಹಳ್ಳಿ ಅನಂದ   

ಗುಡಿಬಂಡೆ: ತಾಲ್ಲೂಕಿನಲ್ಲಿ ಈಗಲೂ ಶೇ 80ರಷ್ಟು ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಇಲ್ಲ. ಇದಕ್ಕಾಗಿ ಕೊಂಡರೆಡ್ಡಿಹಳ್ಳಿ ಬಳಿ 10 ಎಕರೆ ಸಾರಿಗೆ ಡಿಪೊ ನಿರ್ಮಾಣಕ್ಕೆ ಜಮೀನು ಮಂಜೂರಾಗಿ 10 ವರ್ಷವಾದರೂ ಇನ್ನೂ ಪ್ರಾರಂಭವಾಗಿಲ್ಲ. ಈ ಬಾರಿಯಾದರೂ ಅನುದಾನ ಸಿಕ್ಕಿ ಕಾಮಗಾರಿ ಆರಂಭವಾಗಬಹುದೇ ಎಂದು ಜನತೆ ನಿರೀಕ್ಷೆಯಲ್ಲಿ ಇದ್ದಾರೆ.

ಗುಡಿಬಂಡೆ ತಾಲ್ಲೂಕಿಗೆ ಈವರೆಗಿನ ರಾಜ್ಯ ಬಜೆಟ್‌ನಲ್ಲಿ ಯಾವುದೇ ವಿಶೇಷತೆ ಕಾಣುತ್ತಿಲ್ಲ. ತಾಲ್ಲೂಕು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿರುವುದರಿಂದ ಜನಪ್ರತಿನಿಧಿಗಳು ಮಲತಾಯಿಧೋರಣೆ ಅನುಸರಿಸಿಕೊಂಡು ಬರುತ್ತಿದ್ದಾರೆ. ಇಂದಿಗೂ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಿಲ್ಲ. ಕೈಗಾರಿಕೆ ಇಲ್ಲ. ಶೈಕ್ಷಣಿಕವಾಗಿ ಅತೀ ಹಿಂದುಳಿದಿದ್ದು, ಮೂರನೇ ಸಲ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಈ ವರ್ಷದ ಬಜೆಟ್‌ನಲ್ಲಿ ಗುಡಿಬಂಡೆ ತಾಲ್ಲೂಕು ಅಭಿವೃದ್ಧಿಗಾಗಿ ಪಣತೊಡಬಹುದೇ ಎಂದು ಜನರ ಕಾಯುತ್ತಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣದ ಬೇಡಿಕೆ ಇದೆ. ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಒಂದು ಮಾರುಕಟ್ಟೆ ನಿರ್ಮಾಣವಾಗಿಲ್ಲ. ಎಚ್.ಎನ್.ವ್ಯಾಲಿ ನೀರು ತಾಲ್ಲೂಕಿನಲ್ಲಿ ಮೂರು ಕೆರೆಗಳಿಗೆ ಮಾತ್ರ ಸೀಮಿತವಾಗಿದೆ.

ADVERTISEMENT

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯಲ್ಲಿನ ಜನರು ಕೃಷಿಯನ್ನೇ ನಂಬಿದ್ದಾರೆ. ಕುಶಾವತಿ ನದಿ ಬತ್ತಿಹೊಗಿ, ಶಾಶ್ವತ ನೀರಾವರಿ ಯೋಜನೆ ಕನಸು ನನಸಾಗಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆ ಸ್ಥಾಪನೆಯಾಗಬೇಕಿದೆ.

ಗುಡಿಬಂಡೆ ತಾಲ್ಲೂಕು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಬರಡು ಪ್ರದೇಶವಾಗಿದ್ದ ಈ ಪ್ರದೇಶಕ್ಕೆ ಕೃಷಿ ಅಭಿವೃದ್ಧಿಗಾಗಿ ಕೃಷ್ಣ ನದಿ ಬಿ ಸ್ಕೀಂ ಜಾರಿಗೆ ಬಂದು, ದಶಕಗಳಾದರೂ 15 ಕಿ.ಮಿ ದೂರದಲ್ಲಿನ ಅಂದ್ರ ಗಡಿಯವರೆಗೆ ನೀರು ಹರಿಯುತ್ತಿದೆ. ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ಈ ವಿಚಾರ ಹಲವಾರು ಸಲ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಸಾಲ ಮನ್ನಾ ಮಾಡಿ
ಸಹಕಾರ ಸಂಘ ಇತರೆ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಬಡ್ಡಿಮನ್ನಾ ಎಂದು ಸರ್ಕಾರ ಹೇಳುತ್ತಿದೆ. ಗುಡಿಬಂಡೆ ತಾಲ್ಲೂಕು ಬರಗಾಲಕ್ಕೆ ತುತ್ತಾಗಿ ಸಂಪೂರ್ಣ ಬೆಳೆ ನಾಶವಾಗಿದೆ. ಪ್ರತಿ ರೈತರ ಸಾಲಮನ್ನಾ ಜತೆಗೆ ಪರಿಹಾರ ವಿಮೆಯನ್ನು ಬಿಡುಗಡೆ ಮಾಡಲು ಬಜೆಟ್‌ನಲ್ಲಿ ಹಣ ಒದಗಿಸಬೇಕು. ಕಡೇಹಳ್ಳಿ ಅನಂದ ರೈತ ಮುಖಂಡ ಸಾರಿಗೆ ಡಿಪೋ ಮಾಡಿ ಗುಡಿಬಂಡೆ ತಾಲ್ಲೂಕು ಗ್ರಾಮಾಂತರ ಪ್ರದೇಶದಲ್ಲಿನ ಜನರಿಗೆ ಸಾರಿಗೆ ಮರಿಚಿಕೆಯಾಗಿದೆ. ಸಾರಿಗೆ ಸೌಲಭ್ಯ ಕಲ್ಪಿಸಲು ಸಾರಿಗೆ ಡಿಪೋ ನಿರ್ಮಾಣಕ್ಕಾಗಿ 10 ಎಕರೆ ಜಮೀನು ಮಂಜೂರಾಗಿದೆ. ಇಂದಿಗೂ ಅನುದಾನ ಇಲ. ಈ ಬಜೆಟ್‌ನಲ್ಲಿ ಇದಕ್ಕೆ ಮೋಕ್ಷ ಕಾಣಬಹುದು ಎಂದು ಜನರ ನಿರೀಕ್ಷೆಯಾಗಿದೆ. ಜಿ.ವಿ.ಗಂಗಪ್ಪ ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.