ADVERTISEMENT

ಎಚ್‍.ಎನ್ ವ್ಯಾಲಿ ನೀರಿಗೆ ಪೂಜೆ

ಬಂಡಹಳ್ಳಿ ಕಾಲುವೆ ಬಳಿ ವಿಶೇಷ ಪೂಜೆ ಸಲ್ಲಿಸಿ, ಎರಡು ಕುರಿಗಳ ಬಲಿ ನೀಡಿದ ರೈತಸಂಘದ ಪದಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:03 IST
Last Updated 14 ಮಾರ್ಚ್ 2020, 13:03 IST
ಎಚ್‍.ಎನ್ ವ್ಯಾಲಿ ನೀರಿಗೆ ಪೂಜೆ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು
ಎಚ್‍.ಎನ್ ವ್ಯಾಲಿ ನೀರಿಗೆ ಪೂಜೆ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು   

ಚಿಕ್ಕಬಳ್ಳಾಪುರ: ನಗರದ ಕಂದವಾರ ಕೆರೆಗೆ ಹರಿಯುತ್ತಿರುವ ಹೆಬ್ಬಾಳ–ನಾಗವಾರ ಕೆರೆಗಳ ಸಂಸ್ಕರಿತ ನೀರಿಗೆ ರೈತಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರು ಶುಕ್ರವಾರ ಬಂಡಹಳ್ಳಿ ಕಾಲುವೆ ಬಳಿ ವಿಶೇಷ ಪೂಜೆ ಸಲ್ಲಿಸಿ, ಕುರಿ ಬಲಿ ನೀಡಿದರು.

ನಗರದ ವಾಪಸಂದ್ರದಲ್ಲಿರುವ ರೈತ ಸಂಘದ ಕಚೇರಿಯಿಂದ ತಂಬಿಟ್ಟು ಆರತಿ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ನಡೆಸಿದ ರೈತಸಂಘದ ಕಾರ್ಯಕರ್ತರು, ರೈತರು ಎಚ್.ಎನ್‌.ವ್ಯಾಲಿ ನೀರಿಗೆ ಪೂಜೆ ಸಲ್ಲಿಸಿ, ಎರಡು ಕುರಿಗಳನ್ನು ಬಲಿ ನೀಡಿದರು.

ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಮಳೆ ಜೂಜಾಟ, ಅಂತರ್ಜಲ ಕುಸಿತದಿಂದಾಗಿ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ತಲೆದೋರುತ್ತಿದ್ದು, ನೀರಿಲ್ಲದೆ ರೈತರು ಕೃಷಿಯಿಂದ ವಿಮುಖರಾಗುವ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಸುಮಾರು 26 ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಅನೇಕ ಸಂಘಟನೆಗಳು ನಾನಾ ರೀತಿಯ ಹೋರಾಟಗಳನ್ನು ನಡೆಸುತ್ತ ಬಂದಿವೆ‘ ಎಂದು ಹೇಳಿದರು.

ADVERTISEMENT

‘ಎಲ್ಲರ ಹೋರಾಟದ ಪ್ರತಿಫಲವಾಗಿ ಕೊನೆಗೂ ಜಿಲ್ಲೆಯ ಕೆರೆಗಳಿಗೆ ಮೊದಲ ಹಂತವಾಗಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರು ತುಂಬುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈವರೆಗೆ ನೀರಿಗಾಗಿ ನಡೆದ ಹೋರಾಟದಲ್ಲಿ ರೈತ ಸಂಘದ ಪಾತ್ರ ಬಹಳ ಪ್ರಮುಖ ಪಾತ್ರವಹಿಸಿದೆ ಎಂಬ ಹೆಮ್ಮೆ ಇದೆ. ಆದ್ದರಿಂದ, ಪ್ರಥಮವಾಗಿ ಜಿಲ್ಲೆಗೆ ಹರಿಯುತ್ತಿರುವ ನೀರಿಗೆ ಪೂಜೆ ಸಲ್ಲಿಸಿ ಸ್ವಾಗತಿಸುತ್ತಿದ್ದೇವೆ. ಈ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ’ ಎಂದು ಎಂದು ಸಂತಸ ವ್ಯಕ್ತಪಡಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ್, ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಪದಾಧಿಕಾರಿಗಳಾದ ರಮಣರೆಡ್ಡಿ, ರಾಮಾಂಜಿನಪ್ಪ, ಲಕ್ಷಣರೆಡ್ಡಿ, ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಕಿಶೋರ, ಕೃಷ್ಣಪ್ಪ, ವೇಣುಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.