ADVERTISEMENT

ಆರೋಗ್ಯ ಸ್ನೇಹಿ ಅರಿಶಿಣ ಗಣೇಶ ಪೂಜಿಸಿ: ಆರ್.ಲತಾ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 12:41 IST
Last Updated 6 ಆಗಸ್ಟ್ 2020, 12:41 IST
.
.   

ಚಿಕ್ಕಬಳ್ಳಾಪುರ: ‘ಈ ಬಾರಿಯ ಗಣೇಶ ಚತುರ್ಥಿ ಹಬ್ಬದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ರೋಗ ನಿರೋಧಕ ಶಕ್ತಿ ಉಳ್ಳ ಅರಿಶಿಣದಿಂದ ಮನೆಯಲ್ಲಿಯೇ ಗಣೇಶನ ಮೂರ್ತಿ ತಯಾರಿಸಿ ಪೂಜಿಸಿ, ಮನೆಯಲ್ಲಿಯೇ ವಿಸರ್ಜಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದರು.

‘ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಈ ಬಾರಿ ‘ಪರಿಸರ ಸ್ನೇಹಿ ಜತೆಗೆ ಆರೋಗ್ಯ ಸ್ನೇಹಿ' ಗಣೇಶೋತ್ಸವಕ್ಕೆ ಸಜ್ಜಾಗಬೇಕು. ಹಾಗಾಗಿ, ಜನರು ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿಣದಿಂದ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಬೇಕು’ ಎಂದು ತಿಳಿಸಿದರು.

‘ಪರಿಸರದ ಮೇಲೆ ಭಾರಿ ಪರಿಣಾಮ ಬೀರುವಂತಹ ಪಿಓಪಿ ಗಣೇಶ ಹಾಗೂ ರಾಸಾಯನಿಕ ಬಣ್ಣಗಳನ್ನೊಳಗೊಂಡ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೋಂಕಿನ ಕಾರಣಕ್ಕೆ ಈ ಬಾರಿ ಗೌರಿ ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ಅವಕಾಶವಿಲ್ಲ. ಮೆರವಣಿಗೆಯನ್ನು ಮತ್ತು ಕೆರೆ ಕುಂಟೆಗಳಲ್ಲಿ ಮೂರ್ತಿ ವಿಸರ್ಜನೆ ನಿಷೇಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರು ರೋಗ ನಿರೋಧಕ ಶಕ್ತಿಯುಳ್ಳ ಸಗಣಿ, ಅರಿಶಿನ ಬಳಕೆಯಿಂದ ಮಾಡಿದ ಅಥವಾ ಗೋಧಿ, ರಾಗಿ ಹಿಟ್ಟಿಗೆ ಅರಿಶಿನ ಸೇರಿಸಿ ಸಣ್ಣ ಸಣ್ಣ ಗಣೇಶನ ಪ್ರತಿಮೆಗಳನ್ನು ಮನೆಯಲ್ಲಿಯೇ ತಯಾರಿಸಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದರು.

‘ಹಬ್ಬದ ಸಂಭ್ರಮದಲ್ಲಿ ಜನದಟ್ಟಣೆ ಸೇರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸದಾ ಅಂತರಕ್ಕೆ ಒತ್ತು ನೀಡಬೇಕು. ಆಗ, ಮಾತ್ರ ಕೋವಿಡ್‌ ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.