ADVERTISEMENT

ಕಡೂರು: ತಾಲ್ಲೂಕಿನ 50 ಕೆರೆಗಳು ಸಂಪೂರ್ಣ ಖಾಲಿ

ಬಾಲು ಮಚ್ಚೇರಿ
Published 22 ಡಿಸೆಂಬರ್ 2023, 5:45 IST
Last Updated 22 ಡಿಸೆಂಬರ್ 2023, 5:45 IST
ನೀರಿಲ್ಲದೆ ಭಣಗುಡುತ್ತಿರುವ ತಾಲ್ಲೂಕಿನ ಕೆರೆ
ನೀರಿಲ್ಲದೆ ಭಣಗುಡುತ್ತಿರುವ ತಾಲ್ಲೂಕಿನ ಕೆರೆ   

ಕಡೂರು: ತಾಲ್ಲೂಕಿನಲ್ಲಿ ಈಗಾಗಲೇ ಶೇ 50ರಷ್ಟು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಉಳಿದ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಮಳೆಯಾಗದಿದ್ದಲ್ಲಿ ಇನ್ನೆರಡು ತಿಂಗಳಲ್ಲಿ ಜಾನುವಾರುಗಳಿಗೆ ನೀರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ.

ತಾಲೂಕಿನಲ್ಲಿ ಒಟ್ಟು 288 ಕೆರೆಗಳಿದ್ದು, ಬೀರೂರು ಹೋಬಳಿಯ ವ್ಯಾಪ್ತಿಯಲ್ಲಿರುವ ಒಂದು ಕೆರೆ ಮಾತ್ರ ಪೂರ್ತಿ ಭರ್ತಿಯಾಗಿದೆ. 4 ಕೆರೆಗಳಲ್ಲಿ ಶೇ75ರಷ್ಟು ಮಾತ್ರ ನೀರಿದೆ. 29 ಕೆರೆಗಳಲ್ಲಿ ಶೇ 50 ಮತ್ತು 115 ಕೆರೆಗಳಲ್ಲಿ ಶೇ 25 ರಷ್ಟು ನೀರಿದೆ. 139 ಕೆರೆಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿ ಬಣಗುಡುತ್ತಿದೆ.

ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಂರ್ತಜಲ ಮಟ್ಟವೂ ಕುಸಿದಿದೆ. ಐದು ವರ್ಷಗಳ ಹಿಂದೆ ತಾಲ್ಲೂಕು ಬರಕ್ಕೆ ತುತ್ತಾಗಿತ್ತು. ನಂತರ ಉತ್ತಮ ಮಳೆಯಿಂದಾಗಿ ಚೇತರಿಕೆಯ ಹಾದಿಯಲ್ಲಿತ್ತು. ಅಂತರ್ಜಲ ಮಟ್ಟ 7.71 ಮೀಟರ್‌ಗೆ ಏರಿತ್ತು. ಈಗ  ಮತ್ತೆ 9 ಮೀಟರ್‌ನಷ್ಟು ಕೆಳಕ್ಕೆ ಇಳಿದಿದೆ. ಕೊಳವೆ ಬಾವಿಯಲ್ಲೂ ನೀರುಕಡಿಮೆಯಾಗತೊಡಗಿದೆ. ಕೊಳವೆ ಬಾವಿಯನ್ನೇ  ನೆಚ್ಚಿಕೊಂಡು ತರಕಾರಿ ಬೆಳೆಯುವ ರೈತರು ಚಿಂತೆಗೀಡಾಗಿದ್ದಾರೆ. ಹೊಸದಾಗಿ ಅಡಿಕೆ ಗಿಡ ನಾಟಿ ಮಾಡಿದವರೂ ನೀರಿಲ್ಲದೆ ಚಿಂತಾಕ್ರಾಂತರಾಗಿದ್ದಾರೆ.

ADVERTISEMENT
ಮೇವು ಬೆಳೆಯಲು ನೀರಿಲ್ಲ. ಕೆರೆಗಳಲ್ಲಿರುವ ನೀರು ಬೇಸಿಗೆ ತನಕ ಜಾನುವಾರುಗಳಿಗೆ ಕುಡಿಯಲು ಆದರೆ ಸಾಕು ಎಂಬ ಪರಿಸ್ಥಿತಿ ನಮ್ಮದಾಗಿದೆ
- ಶಂಕರಾನಾಯ್ಕ ಎಂ.ಕೋಡಿಹಳ್ಳಿ
ಕೊಳವೆ ಬಾವಿಯನ್ನೇ ನಂಬಿ ಅಡಿಕೆ ಹಾಕಿದ್ದೇನೆ. ಆದರೆ ಈ ವರ್ಷ ಮಳೆ ವಿಫಲವಾಗಿ ಕೊಳವೆ ಬಾವಿ ನೀರು ಕಡಿಮೆಯಾಗಿದೆ. ಬೇಸಿಗೆ ಕಳೆಯುವುದು ಹೇಗೆ ಎಂಬ ಚಿಂತೆಯಾಗಿದೆ
-ಗೋವಿಂದಾ ನಾಯ್ಕ.ಎಂ‌.ಕೋಡಿಹಳ್ಳಿ

‘ಕುಡಿಯುವ ನೀರಿನ ಸಮಸ್ಯೆ’

ತಾಲೂಕಿನ 52 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಂದಾಜು ಮಾಡಿದೆ.  ಮೇವಿನ ಕೊರತೆ ನೀಗಿಸಲು ಪಶು ಪಾಲನಾ ಇಲಾಖೆ ರೈತರಿಗೆ ಮೇವಿನ ಬೀಜಗಳನ್ನು ವಿತರಿಸಿದೆ. ಆದರೆ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆ ಇರುವುದರಿಂದ ಮೇವು ಬೆಳೆಯುವುದು ಸವಾಲಾಗಿದೆ. ಮೇವಿನ ಕೊರತೆಯು ಪರೋಕ್ಷವಾಗಿ ಹೈನುಗಾರಿಕೆಯ ಮೇಲೆ ಅಡ್ಡಪರಿಣಾಮ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.