ADVERTISEMENT

ಹಸಿರು ಪರಿಸರದ ನಡುವೆ ತೇಜಸ್ವಿ ಓದಿನ ಮನೆ: ತಂಪು ಗಾಜಿನ ಮನೆ ಲೋಕಾರ್ಪಣೆ

ತೇಜಸ್ವಿ ಜನ್ಮದಿನದ ಪ್ರಯುಕ್ತ ಇಂದು ಅಭಿಮಾನಿಗಳಿಗೆ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:56 IST
Last Updated 7 ಸೆಪ್ಟೆಂಬರ್ 2023, 13:56 IST
ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನದಲ್ಲಿ ಸಿದ್ದಗೊಂಡಿರುವ ಓದಿನ ಮನೆಯ  ನೋಟ
ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನದಲ್ಲಿ ಸಿದ್ದಗೊಂಡಿರುವ ಓದಿನ ಮನೆಯ  ನೋಟ   

ಕೊಟ್ಟಿಗೆಹಾರ: ಕಣ್ಣು ಹಾಯಿಸಿದಷ್ಟು ದೂರ ಹಬ್ಬಿರುವ ಹಸಿರ ರಾಶಿ, ಹಕ್ಕಿಗಳ ಕಲರವ, ಹೂವು, ಬಳ್ಳಿಗಳ ಮನಮೋಹಕ ದೃಶ್ಯ, ಈ ಅಪೂರ್ವ ದೃಶ್ಯಗಳನ್ನು ನೋಡುತ್ತಾ ಗಾಜಿನ ಮನೆಯಲ್ಲಿ ಕುಳಿತು ಪುಸ್ತಕ ಓದುವ ಅನುಭವ ಅವರ್ಣನೀಯ. ಅಂತಹ ಅನನ್ಯ ಅನುಭವದ ಭಾಗ್ಯ ಓದುಗರಿಗೆ ಶುಕ್ರವಾರದಿಂದ ಮುಕ್ತವಾಗಲಿದೆ. ಇದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ನಿರ್ಮಿಸಿದರುವ ‘ತೇಜಸ್ವಿ ಓದಿನ ಮನೆ’.

ಪ್ರತಿಷ್ಠಾನವು ತೇಜಸ್ವಿ ಅವರ ಅಭಿಮಾನಿ ಓದುಗರಿಗಾಗಿ ಈ ಓದಿನ ಮನೆಯನ್ನು ನಿರ್ಮಿಸಿದೆ. ತೇಜಸ್ವಿ ಅವರ ಎಲ್ಲ ಪುಸ್ತಕಗಳನ್ನು ಇಲ್ಲಿ ಕುಳಿತು ಓದಬಹುದಾಗಿದೆ. ಯಾವುದೇ ಸದ್ದಿಲ್ಲದೆ, ಗಾಜಿನ ಗೋಡೆಗಳಾಚೆ ಕಾಣುವ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಪುಸ್ತಕ ಓದಬಹುದಾಗಿದೆ. ಪುಸ್ತಕ ಓದಿನ ಜೊತೆಗೆ ಸವಿಯಲು ಹಬೆಯಾಡುವ ಕಾಫಿಯೂ ಸಿಗಲಿದೆ.

ತೇಜಸ್ವಿ ಪ್ರತಿಷ್ಠಾನಕ್ಕೆ ಬರುವ ಅವರ ಅಭಿಮಾನಿಗಳು ಓದುಗರಿಗೆ ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಓದಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಕೊಠಡಿಯನ್ನು ನಿರ್ಮಿಸಲಾಗಿದೆ.
-ಸಿ.ರಮೇಶ್ ಸದಸ್ಯ ಕಾರ್ಯದರ್ಶಿ ತೇಜಸ್ವಿ ಪ್ರತಿಷ್ಠಾನ

ಶುಕ್ರವಾರ ತೇಜಸ್ವಿ ಅವರ 85 ನೇ ಜನ್ಮದಿನದ ಅಂಗವಾಗಿ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಅಂದು ಓದಿನ ಮನೆ  ಉದ್ಘಾಟನೆಗೊಳ್ಳಲಿದೆ. ಡಾ.ಸಬಿತಾ ಬನ್ನಾಡಿ ಅವರು ತೇಜಸ್ವಿ ತೋರಿದ ಲೋಕದೃಷ್ಟಿ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರತಿಷ್ಠಾನದ ಪದಾಧಿಕಾರಿಗಳು, ತೇಜಸ್ವಿ ಒಡನಾಡಿಗಳು, ಅಭಿಮಾನಿಗಳು  ಭಾಗವಹಿಸಲಿದ್ದಾರೆ.

ADVERTISEMENT

ಸೆ. 9 ರಂದು ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ತೇಜಸ್ವಿ ಅವರ ಕೃತಿ ಆಧಾರಿತ ‘ಅಣ್ಣನ ನೆನಪು’  ರಂಗಪ್ರದರ್ಶನ ನಡೆಯಲಿದೆ. ತೇಜಸ್ವಿ ಪ್ರತಿಷ್ಠಾನದಲ್ಲಿ ರಿಯಾಯಿತಿ ದರದಲ್ಲಿ ತೇಜಸ್ವಿ ಅವರ ಪುಸ್ತಕಗಳ ಮಾರಾಟ ಸೆ. 8ರಿಂದ ಅ.8 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.