ADVERTISEMENT

ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ

ಮಾನವ ಸರಪಣಿ ನಿರ್ಮಿಸಿ ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 1:05 IST
Last Updated 20 ಜನವರಿ 2021, 1:05 IST
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಕೊಪ್ಪ ತಾಲ್ಲೂಕು ಕಚೇರಿ ಎದುರು ಕೊಪ್ಪ- ಎನ್.ಆರ್.ಪುರ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಮಾನವ ಸರಪಣಿ ನಿರ್ಮಿಸಿ ಪ್ರತಿಭಟಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಕೊಪ್ಪ ತಾಲ್ಲೂಕು ಕಚೇರಿ ಎದುರು ಕೊಪ್ಪ- ಎನ್.ಆರ್.ಪುರ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಮಾನವ ಸರಪಣಿ ನಿರ್ಮಿಸಿ ಪ್ರತಿಭಟಿಸಿದರು.   

ಕೊಪ್ಪ: ‘ಪ್ರಸ್ತುತ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಆರಂಭಗೊಂಡಿದ್ದು, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಎದುರಿನ ಕೊಪ್ಪ- ಎನ್.ಆರ್.ಪುರ ರಸ್ತೆಯಲ್ಲಿ ಮಾನವ ಸರಪಣಿ ನಿರ್ಮಿಸಿ ಪ್ರತಿಭಟಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಸುಭಾಷ್ ಮಾತನಾಡಿ, ‘ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಆದರೆ ಹಾಸ್ಟೆಲ್‌ಗಳನ್ನು ಸರಿಯಾಗಿ ತೆರೆದಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವತ್ತ ಸಹ ಸರ್ಕಾರ ಮುಂದಾಗಿಲ್ಲ’ ಎಂದು ದೂರಿದರು.

‘ವಿದ್ಯಾರ್ಥಿಗಳಿಗೆ ಈ ವರ್ಷದ ಪಠ್ಯದ ಬಗ್ಗೆ ಇಲಾಖೆ ಸರಿಯಾದ ಮಾಹಿತಿ ನೀಡಿಲ್ಲ. ವಿದ್ಯಾರ್ಥಿ ವೇತನ ವನ್ನೂ ಬಿಡುಗಡೆಗೊಳಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದು, ಅತಂತ್ರರಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪದವಿ ಕಾಲೇಜು ಬಳಿಯಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಪರಮೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ಕಾರ್ಯಕರ್ತರಾದ ಕಿಶೋರ್, ವಿನಯ್, ಸುಮಿತ್, ಅಮೃತೇಶ್, ಅರ್ಚನಾ, ಅಪೂರ್ವಾ, ಅಕ್ಷತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.