
ಆಲ್ದೂರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ 108 ಆಂಬುಲೆನ್ಸ್ ವಾಹನವು ಕಳೆದ 25 ದಿನಗಳಿಂದ ಕೆಟ್ಟು ನಿಂತಿದ್ದು, ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರವು ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಆರೋಗ್ಯ ಕೇಂದ್ರ ಆಗಿರುವುದರಿಂದ ಈ ಕೇಂದ್ರಕ್ಕೆ ಆಲ್ದೂರು ಹೋಬಳಿ ಅಲ್ಲದೇ ವಸ್ತಾರೆ, ಆವತಿ ಹೋಬಳಿ ವ್ಯಾಪ್ತಿಯ ಜನರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಹೋಗಬೇಕಾದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ತುರ್ತು ಕ್ಲಿಷ್ಟಕರ ಹೆರಿಗೆ ಸಂದರ್ಭಗಳಲ್ಲಿ ಮತ್ತು ತೀವ್ರ ಅಪಘಾತ ಉಂಟಾದ ಸಮಯದಲ್ಲಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಇಲ್ಲವೇ ಮೂಡಿಗೆರೆಗೆ ಸಾಗಿಸಲು ಆಂಬುಲೆನ್ಸ್ ಸೇವೆ ಸಕಾಲಕ್ಕೆ ದೊರೆಯುತ್ತಿಲ್ಲ. ಇದರಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸುವಂಥಾಗಿದ್ದು, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆಂಬುಲೆನ್ಸ್ ಕೆಟ್ಟು ನಿಂತು 25 ದಿನ ಕಳೆದರೂ ಗಮನಹರಿಸದೇ ಇರುವುದು ದುದೈವದ ಸಂಗತಿ ಎಂದು ಸ್ಥಳೀಯರಾದ ಮೂರ್ತಿ ಕೆ, ಎ.ಟಿ.ಮಹೇಶ್, ನಾಗರಾಜ್ ಎ.ಆರ್, ಜೀವನ್, ಕೃಪಾಕ್ಷ ಕೋಟ್ಯಾನ್, ಭೀಮ್ ಆರ್ಮಿ ಸುರೇಶ್, ಕರವೇ ಹೋಬಳಿ ಅಧ್ಯಕ್ಷ ಮಹಮ್ಮದ್ ಆಲಿ, ತೀರ್ಥ ಕುಮಾರ್ ಅವರು ಅಸಮಾಧಾನ ಹೊರಹಾಕಿದರು.
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸಮಸ್ಯೆ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಕೂಡಲೇ ಕೆಟ್ಟು ನಿಂತಿರುವ ಆಂಬುಲೆನ್ಸ್ ದುರಸ್ತಿಗೊಳಿಸಿ ಸೇವೆಯನ್ನು ಪುನರಾರಂಭಿಸಲಾಗುವುದು- ಅಶ್ವತ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
‘ಹೋಬಳಿಯಲ್ಲಿ ಕಾರ್ಮಿಕ ವರ್ಗವೇ ಹೆಚ್ಚಾಗಿದ್ದು, ಆಂಬುಲೆನ್ಸ್ ಸೇವೆ ಇಲ್ಲದಿದ್ದಾಗ ಬಡ ಮತ್ತು ಮಧ್ಯಮ ವರ್ಗದ ಜನರು ರೋಗಿಯನ್ನು ಸಾಗಿಸಲು ಬಾಡಿಗೆ ನೀಡಿ ಬಳಿಕ ಚಿಕಿತ್ಸೆಗೂ ಹಣವನ್ನು ವ್ಯಯ ಮಾಡಬೇಕು. ಶೀಘ್ರವಾಗಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟಕ್ಕೆ ನಡೆಸಲಾಗುವುದು. ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ’ ಎಂದು ಸಿಪಿಐ ಪಕ್ಷದ ಆಲ್ದೂರು ಕಾರ್ಯದರ್ಶಿ ಸುರೇಶ್ ತಿಳಿಸಿದರು.
‘25 ದಿನಗಳಿಂದ ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಅದರ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಾಗಿದ್ದು, ಈ ರೀತಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಸೇವೆಯನ್ನು ಪುನರಾರಂಭ ಮಾಡದಿದ್ದರೆ ಅವರ ಜೀವನ ನಿರ್ವಹಣೆ ಹೇಗೆ ಸಾಧ್ಯ? ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಕೂಡ ಇದ್ದು ಇದರ ಕುರಿತು ಸಹ ಆರೋಗ್ಯ ಇಲಾಖೆ ಗಮನಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಎ.ಯು.ಇಬ್ರಾಹಿಂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.