ADVERTISEMENT

ನಿರ್ಗತಿಕರ ಆಶ್ರಯ ಕೇಂದ್ರ ನಿರ್ಮಾಣ ಯಾವಾಗ?

ಬಾಡಿಗೆ ಕಟ್ಟಡ ಹಿಡಿಯುವ ಪ್ರಯತ್ನ ವಿಫಲ

ಬಿ.ಜೆ.ಧನ್ಯಪ್ರಸಾದ್
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಚಿಕ್ಕಮಗಳೂರಿನ ತೊಗರಿಹಂಕಲ್ ವೃತ್ತದಲ್ಲಿನ ಸಂಚಾರ ಪೊಲೀಸ್‌ ಚೌಕದ ಬುಡದಲ್ಲಿ ನಿರ್ಗತಿಕನೊಬ್ಬ ಬುಧವಾರ ಪವಡಿಸಿದ್ದ ಪರಿ.
ಚಿಕ್ಕಮಗಳೂರಿನ ತೊಗರಿಹಂಕಲ್ ವೃತ್ತದಲ್ಲಿನ ಸಂಚಾರ ಪೊಲೀಸ್‌ ಚೌಕದ ಬುಡದಲ್ಲಿ ನಿರ್ಗತಿಕನೊಬ್ಬ ಬುಧವಾರ ಪವಡಿಸಿದ್ದ ಪರಿ.   

ಚಿಕ್ಕಮಗಳೂರು: ನಗರದಲ್ಲಿ ನಿರ್ಗತಿಕರ ಆಶ್ರಯ ಕೇಂದ್ರ ಇಲ್ಲ. ಕೆಎಸ್‌ಆರ್‌ಟಿಸಿ ನಿಲ್ದಾಣ, ಅಂಗಡಿಗಳ ಆಸು‍ಪಾಸು, ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳೇ ಭಿಕ್ಷಕರು, ನಿರ್ಗತಿಕರ ‘ವಾಸ್ತವ್ಯ’ ತಾಣಗಳಾಗಿವೆ.

ಪ್ರಮುಖ ರಸ್ತೆಗಳ ಟ್ರಾಫಿಕ್‌ ಸಿಗ್ನಲ್‌ ದೀಪಗಳು, ಅಂಗಡಿಗಳ ಬಳಿ ಭಿಕ್ಷುಕರು, ನಿರ್ಗತಿಕರ ಅಲೆದಾಡುತ್ತಾರೆ. ಕೆಎಸ್‌ಆರ್‌ಟಿಸಿ ನಿಲ್ದಾಣ, ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಪವಡಿಸಿರುತ್ತಾರೆ. ಅವರನ್ನು ದಾಟಿಕೊಂಡೇ ಓಡಾಡಬೇಕು. ಆಹಾರ ತಿಂದು ಪೊಟ್ಟಣಗಳನ್ನು ಅಲಿಯೇ ಬಿಸಾಕುತ್ತಾರೆ. ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ರಸ್ತೆ ಮಧ್ಯದ ಸಂಚಾರ ಪೊಲೀಸರ ಚೌಕದಲ್ಲೇ ನಿರ್ಗತಿಕರು ಮಲಗಿದ್ದರೂ ಪೊಲೀಸರು ಅವರನ್ನು ಎಬ್ಬಿಸುವ ಗೋಜಿಗೆ ಹೋಗಲ್ಲ. ಅವರನ್ನು ಸಾಗಾಕುವ ಉಸಾಬರಿ ಯಾರಿಗೆ ಬೇಕು ಎಂಬುದು ಅವರ ಜಾಣ್ಮೆ.
‘ಭಿಕ್ಷಕರು, ನಿರ್ಗತಿಕರು ಆಶ್ರಯಕ್ಕೆ ಕೇಂದ್ರವೊಂದು ಇರಬೇಕು. ರಾತ್ರಿ ತಂಗಲು ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಉಪಾಹಾರ–ಊಟ ನೀಡಬೇಕು ಎಂಬ ನಿಯಮ ಇದೆ. ಕೇಂದ್ರ ಆರಂಭಿಸಲು ಕಾರ್ಯೋನ್ಮುಖರಾಗಿದ್ದೇವೆ’ ಎಂದು ನಗರಸಭೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್‌) ಯೋಜನೆ ಸಮುದಾಯ ಸಂಘಟಕ ಬಿ.ಎಂ.ಮೊಗಣ್ಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಾತ್ಕಾಲಿಕವಾಗಿ ಬಾಡಿಗೆ ಕೇಂದ್ರದಲ್ಲಿ ಆರಂಭಿಸಲು ಪ್ರಯತ್ನಿಸಿದೆವು. ಆದರೆ, ಆಗಿಲ್ಲ. ರಾಮನಹಳ್ಳಿಯ ಕ್ವಾರ್ಟ್ರಸ್‌ನಲ್ಲಿ, ಲಕ್ಷ್ಮೀಶನಗರದ ಸಮುದಾಯ ಭವನದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆಕ್ಷೇಪ ವ್ಯಕ್ತವಾಗಿದ್ದರಿಂದ ಕೈಬಿಡಲಾಯಿತು’ ಎಂದು ಅವರು ತಿಳಿಸಿದರು.

ನಗರಸಭೆ ಸಮೀಕ್ಷೆಯಂತೆ 18 ಭಿಕ್ಷಕರು–ನಿರ್ಗತಿಕರು ಇದ್ದಾರೆ. ಆದರೆ, ಸ್ವಯಂಸೇವಾ ಸಂಸ್ಥೆಯೊಂದರ ಲೆಕ್ಕಚಾರದ ಪ್ರಕಾರ 50ಕ್ಕೂ ಹೆಚ್ಚು ಮಂದಿ ಇದ್ದಾರೆ.

‘ನಮ್ಮೂರು ಸಖರಾಯಪಟ್ಟಣ. ಅಪ್ಪ–ಅಮ್ಮ ಇಲ್ಲ. ಟ್ರಾಕ್ಟರ್‌ನಿಂದ ಕಾಲಿಗೆ ಏಟು ಬಿದ್ದಿದೆ. ಊರಿನಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ. ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತೇನೆ. ಏಳೆಂಟು ವರ್ಷಗಳಿಂದ ಬಸ್ ಸ್ಟ್ಯಾಂಡ್‌ನಲ್ಲೇ ವಾಸ. ಸಂಬಂಧಿಕರು ಹತ್ತಿರ ಸೇರಿಸಲ್ಲ’ ಎಂದು ನಿರ್ಗತಿಕ ಗೋವಿಂದ ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.