ADVERTISEMENT

ಭದ್ರಾ ಅಭಯಾರಣ್ಯ: ಕಟ್ಟಡ ನಿರ್ಮಾಣಕ್ಕೆ ಪರಿಸರಾಸಕ್ತರು ಆಕ್ಷೇಪ

ಪ್ರವಾಸಿಗರ ಭೇಟಿ ಸಂಖ್ಯೆ ನಿಗದಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 6:09 IST
Last Updated 15 ಫೆಬ್ರುವರಿ 2023, 6:09 IST
ಭದ್ರಾ ಅಭಯಾರಣ್ಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದು
ಭದ್ರಾ ಅಭಯಾರಣ್ಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದು   

ಚಿಕ್ಕಮಗಳೂರು: ಅಭಯಾರಣ್ಯದೊಳಗೆ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ನಿಯಮ ಇದ್ದರೂ, ಅದನ್ನು ಗಾಳಿಗೆ ತೂರಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪರಿಸರಾಸಕ್ತರು ಆಕ್ಷೇಪ ಎತ್ತಿದ್ದಾರೆ.

ಅಭಯಾರಣ್ಯದ ಹೊರಭಾಗದಲ್ಲಿ ಮಾತ್ರ ಕಟ್ಟಡ ನಿರ್ಮಾಣ, ಇತರ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಯಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆದೇಶ ಇದ್ದರೂ ಕಡೆಗಣಿಸಲಾಗಿದೆ. ಹಲವು ವೈಶಿಷ್ಟ್ಯಗಳ ಭದ್ರಾ ಅಭಯಾರಣ್ಯದಲ್ಲಿ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ದೂರಿದ್ದಾರೆ.

ಸಿಬ್ಬಂದಿ ವಸತಿಗೃಹ ಕಟ್ಟಡಗಳನ್ನು ಅಭಯಾರಣ್ಯದೊಳಗೆ ನಿರ್ಮಿಸಲಾಗುತ್ತಿದೆ. ಈ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶವಷ್ಟೇ ಅಲ್ಲ, ‘ಕೋರ್ ಕ್ರಿಟಿಕಲ್ ಟೈಗರ್ ಹ್ಯಾಬಿಟಾಟ್‌’ ಎಂದು ಪರಿಗಣಿತವಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಅರಣದಲ್ಲಿ ನಿರ್ಮಿಸಿರುವ ಚರಂಡಿಗಳು ಸಣ್ಣಪ್ರಾಣಿಗಳು ದಾಟಲು ಸಾಧ್ಯವಾಗದಷ್ಟು ಅಗಲ ಇವೆ ಎಂದು ದೂರಿದ್ದಾರೆ.

ADVERTISEMENT

ಬೇಟೆ ನಿಗ್ರಹ ಶಿಬಿರಗಳು ನೆಪ ಮಾತ್ರಕ್ಕೆ ಇವೆ. ಸಿಬ್ಬಂದಿ ಕೊರತೆ ಇದೆ. ಅಭಯಾರಣ್ಯದಲ್ಲಿ ಹುಲಿಗಳ ಓಡಾಟವನ್ನು ಚಿತ್ರೀಕರಿಸುವ ಕ್ಯಾಮೆರಾಗಳು ಕಳವಾಗಿವೆ. ಜಿಂಕೆಗಳ ಸಂತತಿ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭದ್ರಾ ನದಿ, ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು 76 ದೋಣಿಗಳಿಗೆ ಅನುಮತಿ ಇದೆ. ಆದರೆ, ಆ ಸಂಖ್ಯೆ 200ಕ್ಕಿಂತ ಜಾಸ್ತಿಯಾಗಿದೆ. ದೋಣಿ ಗಸ್ತು ಕೈಗೊಳ್ಳಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭದ್ರಾ ಅಭಯಾರಣ್ಯದ ಪ್ರದೇಶದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಭೇಟಿ ಸಂಖ್ಯೆ ನಿಗದಿಪಡಿಸಬೇಕು. ಕೊರತೆಗಳನ್ನು ನಿವಾರಿಸಬೇಕು. ಅರಣ್ಯದಲ್ಲಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳುವುದನ್ನು ಕೈಬಿಡಬೇಕು ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಷನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್‌ಕ್ಯಾಟ್-‘ಸಿ’ನ ಶ್ರೀದೇವ್ ಹುಲಿಕೆರೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.