ADVERTISEMENT

ನರಸಿಂಹರಾಜಪುರ: ನೀರಿನ ಕೊರತೆ ಸೊರಗುತ್ತಿದೆ ಮೆಣಸಿನ ಬಳ್ಳಿ

ಕೊಳವೆ ಬಾವಿಗಳಲ್ಲಿ ನೀರಿಲ್ಲ, ಹೊಸದಾಗಿ ಕೊರೆದರೂ ವಿಫಲ

ಕೆ.ವಿ.ನಾಗರಾಜ್
Published 26 ಫೆಬ್ರುವರಿ 2024, 5:16 IST
Last Updated 26 ಫೆಬ್ರುವರಿ 2024, 5:16 IST
ನರಸಿಂಹರಾಜಪುರ ತಾಲ್ಲೂಕು ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಕಾಳು ಮೆಣಸಿನ ಬಳ್ಳಿ ಸೊರಗಿರುವುದು
ನರಸಿಂಹರಾಜಪುರ ತಾಲ್ಲೂಕು ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಕಾಳು ಮೆಣಸಿನ ಬಳ್ಳಿ ಸೊರಗಿರುವುದು   

ನರಸಿಂಹರಾಜಪುರ: ಮಳೆ ಕೊರತೆಯಿಂದ ಬರಗಾಲದ ಎದುರಿಸುತ್ತಿರುವ ತಾಲ್ಲೂಕಿನಲ್ಲಿ ಕಾಳು ಮೆಣಸಿನ ಬಳ್ಳಿಗಳೂ ಸೊರಗುತ್ತಿದ್ದು, ಇಳುವರಿ ಕುಸಿತವಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಾಳೆಹೊನ್ನೂರು ಹಾಗೂ ಕಸಬಾ ಹೋಬಳಿ ವ್ಯಾಪ್ತಿ ಸೇರಿ 2,106 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು,7,200 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, 3,421 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ, 105 ಹೆಕ್ಟೇರ್ ಪ್ರದೇಶದಲ್ಲಿ ತೆಂಗು, 770 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಪ್ರಮುಖವಾಗಿ ವಾಣಿಜ್ಯ ಬೆಳೆಯಲಾಗುತ್ತಿದೆ.

ಜೂನ್, ಜುಲೈ ತಿಂಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯಲಿಲ್ಲ. ಮಳೆಯ ಕೊರತೆಯಿಂದ ಕೊಳವೆ ಬಾವಿಗಳಲ್ಲೂ ನೀರು ಇಲ್ಲವಾಗಿದೆ. ತೇವಾಂಶದ ಕೊರತೆಯಿಂದ ಕಾಳು ಮೆಣಸಿನ ಬಳ್ಳಿಗಳಲ್ಲಿ ಪರಾಗ ಸ್ಪರ್ಶವಾಗದೆ ಹೂ ಬಿಡಲಿಲ್ಲ. ನಂತರ ಅಲ್ಪ– ಸ್ವಲ್ಪ ಮಳೆಯಾದಾಗ ಪರಾಗ ಸ್ಪರ್ಶವಾಗಿದೆ. ಹೂಬಿಟ್ಟು ಕಾಳು ಕಟ್ಟಿದರೂ ಬಲಿಯದೆ ಹಣ್ಣಾಗಿ ಉದುರಿವೆ.

ADVERTISEMENT

ಕೆಲವು ಗೊಂಚಲುಗಳಲ್ಲಿ ಕಾಳು ಕಟ್ಟಲೇ ಇಲ್ಲ. ಸೊರಗು ರೋಗದಿಂದ ಬೆಳೆ ಕುಸಿತವಾಯಿತು. ಮಳೆಗಾಲದಲ್ಲಿ ತೀವ್ರ ಸೊರಗು ರೋಗದಿಂದ ಬೆಳೆ ನಷ್ಟವಾಗಿದೆ. ಇನ್ನೊಂದೆಡೆ ಮಳೆ ಕೊರತೆ ಜತೆಗೆ ನವೆಂಬರ್ ತಿಂಗಳ ನಂತರ ನಿಧಾನವಾಗಿ ಸೊರಗು ರೋಗ ಆರಂಭವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಕಾಳುಮೆಣಸು ಉದುರಲು ಪ್ರಾರಂಭವಾಗಿದೆ. ಹನಿ ನೀರಾವರಿ ಸೌಲಭ್ಯ ಹೊಂದಿದ್ದರೂ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಕೆಲವು ಕೊಳವೆ ಬಾವಿಗಳಲ್ಲಿ ನೀರಿಲ್ಲ, ಇನ್ನೂ ಕೆಲವು ಕೊಳವೆ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಪೂರೈಕೆ ಇಲ್ಲದಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಳೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಫಸಲು ಕುಸಿತದಿಂದಾಗಿ ರೈತರ ಆದಾಯದ ಮೇಲೂ ಪರಿಣಾಮ ಬೀರಿದೆ ಎನ್ನುತ್ತಾರೆ ಬೆಳೆಗಾರರು.

ಅಡಿಕೆ ತೋಟದಲ್ಲಿರುವ ಕಾಳು ಮೆಣಸಿನ ಬೆಳೆಗೆ ಸಮಸ್ಯೆಯಾಗಿಲ್ಲ. ಬಹುತೇಕ ಕಾಫಿ ತೋಟದಲ್ಲಿರುವ ಕಾಳು ಮೆಣಸಿನ ಬೆಳೆಗೆ ಸಮಸ್ಯೆಯಾಗಿದೆ. ಹೊಸದಾಗಿ ಕೊಳವೆಬಾವಿ ಕೊರೆಸುವ ಪ್ರಯತ್ನಕ್ಕೆ ಕೈಹಾಕಿ ಹಲವರು ಕೈಸುಟ್ಟುಕೊಂಡಿದ್ದಾರೆ ಎನ್ನುತ್ತಾರೆ ಕಟ್ಟಿನಮನೆ ಗ್ರಾಮದ ರೈತ ನವೀನ್.

ಬಹುತೇಕ ತೋಟಗಳಲ್ಲಿರುವ ಕಾಳು ಮೆಣಸಿನ ಬಳ್ಳಿಗಳಲ್ಲಿ ಕಾಳು ಕಟ್ಟಿದ್ದರೂ ಟೊಳ್ಳಾಗಿವೆ ಎಂದು ರೈತ ಬಸವರಾಜಪ್ಪ ತಿಳಿಸಿದರು.

ನರಸಿಂಹರಾಜಪುರ ತಾಲ್ಲೂಕು ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಮಳೆಕೊರತೆಯ ಕಾರಣ ಕಾಳುಮೆಣಸಿನ ಬಳ್ಳಿ ಸೊರಗಿ ಕಾಳು ಮೆಣಸು ಉದುರಿರುವುದು

ಸೊರಗು ರೋಗದ ಕಾಟ

ಕಾಳುಮೆಣಸಿಗೆ ಅತಿಯಾದ ಮಳೆಯಾದಾಗ ಶೀಘ್ರ ಸೊರಗು ರೋಗ ಕಂಡು ಬರುತ್ತದೆ. ಪ್ರಸ್ತುತ ಮಳೆಕೊರತೆಯಿಂದಾಗಿ ನಿಧಾನಗತಿಯ ಸೊರಗು ರೋಗ ಕಂಡು ಬಂದಿದೆ ಎಂದು ತೋಟಗಾರಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ‘ಪ್ರಜಾವಾಣಿ’ಗೆ ತಿಳಿಸಿದರು. ಇದರಿಂದ ಬಳ್ಳಿ ಒಣಗಿ ಕಾಳುಮೆಣಸು ಉದುರುತ್ತದೆ. ಮಳೆ ಕೊರತೆಯಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕಾಫಿ ತೋಟದಲ್ಲಿರುವ ಕಾಳು ಮೆಣಸಿನ ಬೆಳೆಗೆ ನಿಧಾನಗತಿಯ ಸೊರಗು ರೋಗ ಕಂಡುಬಂದಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಸದ್ಯಕ್ಕೆ ಅಡಿಕೆ ತೋಟಗಳಿಗೆ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಸಮಸ್ಯೆಯಾಗಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.