
ಮೂಡಿಗೆರೆ: ತಾಲ್ಲೂಕಿನಲ್ಲಿ ಒಟ್ಟು 843 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ ಎಂದು ಆಹಾರ ಇಲಾಖೆಯ ಸಿರಸ್ತೆದಾರ್ ಇಂದ್ರೇಶ್ ಮಾಹಿತಿ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 'ತಾಲ್ಲೂಕಿನಲ್ಲಿ ಅನರ್ಹಗೊಂಡಿರುವ ಒಟ್ಟು 843 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ ಪಡಿತರ ಚೀಟಿಯನ್ನಾಗಿ ಮಾರ್ಪಡು ಮಾಡಲಾಗಿದೆ. ತಾಲ್ಲೂಕಿನಲ್ಲಿ ಸದ್ಯ18,212 ಪಡಿತರ ಚೀಟಿಗಳಿದ್ದು, ಪಡಿತರ ಚೀಟಿಗೆ ಇಕೆವೈಸಿ ಕಡ್ಡಾಯವಾಗಿದೆ. ತಾಲ್ಲೂಕಿಗೆ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಹೆಚ್ಚುವರಿ ಪಡಿತರಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಪ್ರತಿ ತಿಂಗಳು 20ನೇ ತಾರೀಕಿನ ಒಳಗಾಗಿ ಪಡಿತರಕ್ಕೆ ಬೇಡಿಕೆ ಸಲ್ಲಿಸಬೇಕು. ನಂತರ ಬೇಡಿಕೆ ಸಲ್ಲಿಸಿದಲ್ಲಿ ಪರಿಗಣನೆಗೆ ತೆಗೆದು ಕೊಳ್ಳುವುದಿಲ್ಲ' ಎಂದು ಸಭೆಗೆ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಅಧಿಕಾರಿ ಮಹೇಶ್ ಭಜಂತ್ರಿ ಮಾತನಾಡಿ, ‘ತಾಲ್ಲೂಕಿನಲ್ಲಿ ಒಟ್ಟು 29,032 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಅದರಲ್ಲಿ 28,654 ಫಲಾನುಭವಿಗಳಿಗೆ ಯೋಜನೆ ತಲುಪಿದೆ. ಉಳಿದ ಫಲಾನುಭವಿಗಳು ಆದಾಯ ತೆರಿಗೆ ಪಾವತಿ ಮತ್ತಿತರ ಕಾರಣಗಳಿಂದ ಯೋಜನೆಯಿಂದ ಹೊರಗುಳಿದಿದ್ದಾರೆ' ಎಂದು ಮಾಹಿತಿ ನೀಡಿದರು.
ಕೆಎಸ್ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ‘ಜನವರಿ ತಿಂಗಳಿನಲ್ಲಿ ಇದುವರೆಗೂ 1,75,173 ಮಹಿಳೆಯರು ಮೂಡಿಗೆರೆ ಘಟಕದ ಬಸ್ಸಿನಲ್ಲಿ ಪ್ರಯಾಣಿಸಿದ್ದು, ₹88.84 ಲಕ್ಷ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಕೂವೆ, ನಿಡುವಾಳೆ ಭಾಗಗಳಿಂದ ಕೊಟ್ಟಿಗೆಹಾರ ಶೃಂಗೇರಿ ಮಾರ್ಗಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ಪ್ರಸ್ತಾವ ಬಂದಿದ್ದು, ಆ ಪ್ರಸ್ತಾವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ' ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ಎಸ್.ಜಯರಾಮಗೌಡ, ತಾಲ್ಲೂಕು ಪಂಚಾಯಿತಿ ಇಒ ದಯಾವತಿ, ಸಮಿತಿ ಸದಸ್ಯರಾದ ಎಚ್.ಪಿ.ರಮೇಶ್, ಗುರುವಪ್ಪ, ಶ್ರೀನಿವಾಸ್, ನವೀನ್, ಭರತ್, ಜಯಮ್ಮ, ಅರುಣ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.