ADVERTISEMENT

ಕಳೆದ ವರ್ಷ ಪ್ರವಾಹದಲ್ಲಿ ಹಾಳಾದ ಕೋಟೆಹೊಳೆ ಸೇತುವೆ ದುರಸ್ತಿಗೆ ಕೂಡಿ ಬಂದಿಲ್ಲ ಕಾಲ

ಕಳಸ: ಯಾರಿಗೂ ಬೇಡವಾದ ಕೋಟೆಹೊಳೆ ಸೇತುವೆ

ರವಿ ಕೆಳಂಗಡಿ
Published 21 ಜೂನ್ 2020, 19:30 IST
Last Updated 21 ಜೂನ್ 2020, 19:30 IST
ಕಳಸ ಸಮೀಪದ ಕೋಟೆಹೊಳೆ ಸೇತುವೆಯು ಕಳೆದ ವರ್ಷದ ಮಳೆಗಾಲದಲ್ಲಿ ಹಾನಿಗೀಡಾಗಿ ದುಸ್ಥಿತಿಯಲ್ಲಿದೆ.
ಕಳಸ ಸಮೀಪದ ಕೋಟೆಹೊಳೆ ಸೇತುವೆಯು ಕಳೆದ ವರ್ಷದ ಮಳೆಗಾಲದಲ್ಲಿ ಹಾನಿಗೀಡಾಗಿ ದುಸ್ಥಿತಿಯಲ್ಲಿದೆ.   

ಕಳಸ: ಹೋದ ವರ್ಷದ ಮಳೆಗಾಲ ದಲ್ಲಿ ಭದ್ರಾ ನದಿ ಪ್ರವಾಹದಿಂದ ಹಾನಿಗೀಡಾದ ಇಲ್ಲಿನ ಕೋಟೆಹೊಳೆ ಸೇತುವೆಯ ದುರಸ್ತಿಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ‘ಈ ಸೇತುವೆ ನಮಗೆ ಸೇರಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‍ರಾಜ್ ಎಂಜಿನಿಯರಿಂಗ್ ಇಲಾಖೆ ನಡುವೆ ಮುಸುಕಿನ ಗುದ್ದಾಟವೂ ನಡೆಯುತ್ತಿದೆ.

ಕಳಸ ಪಟ್ಟಣದಿಂದ 1 ಕಿ.ಮೀ ದೂರದ ಕೋಟೆಹೊಳೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ 20 ವರ್ಷದ ಹಿಂದೆ ನಿರ್ಮಿಸಲಾದ ಸೇತುವೆ ಈಗಲೂ ಗಟ್ಟಿಮುಟ್ಟಾಗಿ ಇದೆ. ಆದರೆ, ಆ ಸೇತುವೆಯ ಎರಡೂ ಬದಿಯ ಕೈಪಿಡಿಗಳು ಹೋದ ಮಳೆಗಾಲದಲ್ಲಿ ಸೇತುವೆಯ ಮೇಲೆ ನೀರು ಹರಿದು ಮರಗಳು ಅಪ್ಪಳಿಸಿದಾಗ ಪುಡಿಪುಡಿಯಾಗಿವೆ. ಇದರಿಂದ ಸೇತುವೆಯ ಎರಡೂ ಬದಿಗೆ ಸುರಕ್ಷತೆಯೇ ಇಲ್ಲದೆ ಅದರ ಮೇಲೆ ಸಂಚರಿಸುವವರಲ್ಲಿ ಭಯ ಮೂಡಿಸುತ್ತದೆ.

ಈ ಸೇತುವೆ ಬಳಸಿ ಪ್ರತಿದಿನವೂ ಅಬ್ಬುಗುಡಿಗೆ, ಚಿಕ್ಕುಡಿಗೆ, ಕಲ್ಲುಗೋಡು, ಮಕ್ಕಿಮನೆ, ಬಸವನತೋಟ, ಹೊಸೂರು, ಕೊಳಮೆಗೆ, ಎಸ್.ಕೆ.ಮೇಗಲ್, ಕಳಕೋಡು, ಆನಮಗೆ, ಚಿಪ್ಪಲಮಗೆ, ಕಾರ್ಲೆ ಮುಂತಾದ ಪ್ರದೇಶದ ನೂರಾರು ಗ್ರಾಮಸ್ಥರು ಹಾದು ಹೋಗುತ್ತಾರೆ. ಮಳೆಗಾಲದಲ್ಲಂತೂ ತುಂಬಿ ಹರಿಯುವ ಭದ್ರಾ ನದಿಯು ಈ ಸೇತುವೆ ದಾಟುವವರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.

ADVERTISEMENT

ವರ್ಷ ಕಳೆದರೂ ಸೇತುವೆ ದುರಸ್ತಿ ಆರಂಭಿಸದ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ಈ ರಸ್ತೆಯು ಜಿಲ್ಲಾ ಪಂಚಾಯಿತಿಗೆ ಸೇರಿದೆ. ಅವರೇ ಸೇತುವೆ ದುರಸ್ತಿ ಮಾಡಬೇಕಿತ್ತು. ಆದರೂ ಸೇತುವೆ ದುರಸ್ತಿಗೆ ₹ 6.5 ಲಕ್ಷ ವೆಚ್ಚದ ಪ್ರಸ್ತಾವ ಇಲಾಖೆಗೆ ಸಲ್ಲಿಸಿದ್ದೇವೆ. ಬಾಳೆಹೊಳೆ- ಕೆ.ಕೆಳಗೂರು ಸೇತುವೆ ಇದೇ ಬಗೆಯಲ್ಲಿ ಹಾನಿಗೀಡಾಗಿತ್ತು. ಅದು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿದ್ದರಿಂದ ಈಗಾಗಲೇ ಆ ಕೆಲಸ ಪೂರ್ಣಗೊಳಿಸಿದ್ದೇವೆ’ ಎಂದು ಹೇಳಿದರು.

‘ಈ ರಸ್ತೆ ಯಾರಿಗೆ ಬೇಕಾದರೂ ಸೇರಲಿ, ಅದರ ದುರಸ್ತಿ ಆಗಲೇಬೇಕು. ಈ ಮಳೆಗಾಲದಲ್ಲಿ ಸೇತುವೆ ಬಳಸುವ ಪ್ರಯಾಣಿಕರು ಅಥವಾ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂಆಳದ ನದಿಯಲ್ಲಿ ಬೀಳುವ ಭಯ ಇದೆ. ಆದ್ದರಿಂದ ತುರ್ತಾಗಿ ಸೇತುವೆ ದುರಸ್ತಿಗೆ ಜಿಲ್ಲಾಡಳಿತ ಆದೇಶ ನೀಡಬೇಕು’ ಎಂದು ಹೊಸೂರಿನ ಕೃಷಿಕ ಎಚ್.ಡಿ. ಭೋಜೇಗೌಡ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.