ಆಲ್ದೂರು: ಕಳೆದ ನಾಲ್ಕು ದಿನಗಳಿಂದ ಬಿಎಸ್ಎನ್ಎಲ್ ಮೊಬೈಲ್ ನೆಟ್‌ವರ್ಕ್ ಸಂಪರ್ಕದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಕಾರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಆಲ್ದೂರು ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಬಳಸುತ್ತಿದ್ದಾರೆ. ಆದರೆ, ಸರಿಯಾದ ಸೇವೆ ದೊರೆಯದ ಕಾರಣ ಹಲವರು ಬೇರೆ ನೆಟ್‌ವರ್ಕ್‌ಗಳಿಗೆ ಸಿಮ್ ಪೋರ್ಟ್ ಮಾಡುತ್ತಿದ್ದಾರೆ ಎಂದು ಗ್ರಾಹಕ ಮೂರ್ತಿ ಕೆ. ಬೇಸರ ವ್ಯಕ್ತಪಡಿಸಿದರು.
ಬಿಎಸ್ಎನ್ಎಲ್ ನೆಟ್‌ವರ್ಕ್ ಮೊಬೈಲ್‌ನಲ್ಲಿ ‘4ಜಿ’ ಎಂದು ತೋರಿಸುತ್ತಿದೆ. ಆದರೆ, ಅದೇ ವೇಗದಲ್ಲಿ ಇಂಟರ್‌ನೆಟ್ ಹಾಗೂ ಮೊಬೈಲ್ ಕರೆ ಸಂಪರ್ಕ ಸಾಧ್ಯವಾಗದೇ ಗ್ರಾಹಕರು ಕಚೇರಿಗೆ ಬಂದು ದೂರು ನೀಡುತ್ತಿದ್ದಾರೆ. ಸೆಟಿಂಗ್ಸ್‌ನಲ್ಲಿ ‘2ಜಿ’ಗೆ ಬದಲಾಯಿಸಿಕೊಂಡರೆ ಮಾತ್ರ ಕರೆ ಮಾಡಲು ಸಾಧ್ಯವಾಗುತ್ತಿದ್ದು, ಈ ರೀತಿ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಲು ಬರದೇ ಇರುವಂತಹ ಹಿರಿಯ ನಾಗರಿಕರು ಮತ್ತು ಬೇಸಿಕ್ ಫೋನ್ ಬಳಸುತ್ತಿರುವವರು ಬಿಎಸ್ಎನ್ಎಲ್ ಸಿಮ್‌ಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಮಳೆ ಮತ್ತು ವಿದ್ಯುತ್ ಸಮಸ್ಯೆಯಿಂದ ಈ ರೀತಿ ತೊಂದರೆಯಾಗಿಲ್ಲ. ಬದಲಾಗಿ ಇದು ತಾಂತ್ರಿಕ ತೊಂದರೆಯಿಂದ ಹೀಗೆ ಆಗುತ್ತಿದೆ ಎಂದು ಕಚೇರಿ ಸಿಬ್ಬಂದಿ ಮಾಹಿತಿ ತಿಳಿಸಿದರು.
ನೆಟ್‌ವರ್ಕ್ ಸಮಸ್ಯೆ ಸರಿಪಡಿಸದೆ ಸಿಮ್ ಮಾರಾಟ ಮಾಡಿ ಎಂದು ಸೂಚನೆ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರಾಹಕರ ಬಳಿ ಹೋಗಿ ಸಿಮ್ ಕೊಂಡುಕೊಳ್ಳುವಂತೆ ಸೂಚಿಸುವುದು ಹೇಗೆ. ವಸ್ತಾರೆ ಬಿಎಸ್ಎನ್ಎಲ್ ಮೊಬೈಲ್ ಟವರ್‌ನಲ್ಲಿ ಜಿಯೋ ಅಳವಡಿಸಿದ್ದು, ಬಿಎಸ್ಎನ್ಎಲ್ ಟವರ್‌ಗೆ ಮಾತ್ರ ತೊಂದರೆ ಆಗುತ್ತೆ. ಆದರೆ, ಜಿಯೋ ನೆಟ್‌ವರ್ಕ್ ಮಾತ್ರ ಯಾವಾಗಲೂ ಸರಿ ಇರುತ್ತೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಬಳಸಿರುವ ಬಿಎಸ್ಎನ್ಎಲ್ ನಂಬರ್ ಅನ್ನು ಬ್ಯಾಂಕಿಂಗ್, ವ್ಯಾಪಾರ ಹಾಗೂ ಆಧಾರ್ ಸೇವೆಗಳಿಗೆ ಲಿಂಕ್ ಮಾಡಿದ್ದೇವೆ. ಇಂತಹ ಸಮಯದಲ್ಲಿ ನಂಬರ್ ಬದಲಾಯಿಸುವುದು ಅಸಾಧ್ಯ. ಹೊಸ ನಂಬರ್‌ಗೆ ಎಲ್ಲ ಸೇವೆಗಳ ಲಿಂಕ್ ಮಾಡಿಸುವುದು ಕಷ್ಟಕರ ಕೆಲಸ ಎನ್ನುತ್ತಾರೆ ಗ್ರಾಹಕ ಮಾರ್ಷಲ್ ಮಣಿ ಎ.ಎಸ್.
ಆಲ್ದೂರು ಕೆಲ ಸರ್ಕಾರಿ ಕಚೇರಿಗಳಲ್ಲಿಯೂ ಬಿಎಸ್ಎನ್ಎಲ್ ಇಂಟರ್‌ನೆಟ್ ಸೇವೆ ಬಳಕೆಯಲ್ಲಿತ್ತು. ಇದೀಗ ಸೇವೆಯಲ್ಲಿ ವ್ಯತ್ಯಯ ಉಂಟಾದ ಕಾರಣ, ಅಧಿಕಾರಿಗಳು ಖಾಸಗಿ ಇಂಟರ್‌ನೆಟ್ ಸಂಪರ್ಕಕ್ಕೆ ಮೊರೆ ಹೋಗುತ್ತಿದ್ದಾರೆ.
ತಾಂತ್ರಿಕ ಸಮಸ್ಯೆ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು.– ಆಶಿಯ ಸಿದ್ದಿಕ್, ಬಿಎಸ್ಎನ್ಎಲ್ ಅಸಿಸ್ಟೆಂಟ್ ಮ್ಯಾನೇಜರ್ಪದೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.