ADVERTISEMENT

ಚಿಕ್ಕಮಗಳೂರು: ಪ್ರವಾಸಿ ತಾಣಕ್ಕೆ ಇನ್ನು ಸಿಸಿಟಿವಿ ಕಣ್ಗಾವಲು

ವಿಜಯಕುಮಾರ್ ಎಸ್.ಕೆ.
Published 16 ಫೆಬ್ರುವರಿ 2025, 6:06 IST
Last Updated 16 ಫೆಬ್ರುವರಿ 2025, 6:06 IST
ಕೈಮರ ಚೆಕ್‌ಪೋಸ್ಟ್‌ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ
ಕೈಮರ ಚೆಕ್‌ಪೋಸ್ಟ್‌ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ   

ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರ ಚಲನ ವಲನದ ಮೇಲೆ ಇನ್ನು ಸಿಸಿಟಿವಿ ಕಣ್ಗಾವಲಿಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಎರಡು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಸಾಧಕ–ಬಾಧಕ ಪರಿಶೀಲಿಸುತ್ತಿದೆ.

ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಹೋಗುವುದನ್ನು ಈಗಾಗಲೇ ನಿಷೇಧಿಸಲಾಗಿದೆ. ಮದ್ಯದ ಬಾಟಲಿಗಳಿದ್ದರೆ ಅವುಗಳನ್ನು ಇರಿಸಲು ಕೈಮರ ಚೆಕ್‌ಪೋಸ್ಟ್‌ ಬಳಿ ಲಾಕರ್ ಅಳವಡಿಸಲಾಗಿದೆ.

ಪ್ರವಾಸಿಗರು ಮತ್ತು ಚೆಕ್‌ಪೋಸ್ಟ್‌ ಸಿಬ್ಬಂದಿ ನಡುವೆ ಆಗಾಗ ಮಾತಿನ ಚಕಮಕಿಗಳು ನಡೆಯುತ್ತಿವೆ. ಇಬ್ಬರ ಮೇಲೆಯೂ ನಿಗಾ ವಹಿಸಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅಧಿಕಾರಿಗಳು ಇರುವ ಜಾಗದಿಂದಲೇ ಮೊಬೈಲ್‌ ಫೋನ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ವಿಡಿಯೊ ಕಾಲ್‌ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದ್ದು, ಪರಿಸ್ಥಿತಿ ನಿಭಾಯಿಸಲು ಅನುಕೂಲ ಆಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಮತ್ತೊಂದೆಡೆ ಸೀತಾಳಯ್ಯನಗಿರಿಯ ವಾಹನ ನಿಲಗಡೆ ತಾಣದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರವಾಸಿ ಮಿತ್ರ ಸಿಬ್ಬಂದಿಗಳನ್ನು ಅಲ್ಲಲ್ಲಿ ನಿಯೋಜಿಸಲಾಗಿದ್ದು, ಅವರ ಕಾರ್ಯವೈಖರಿಯನ್ನೂ ಅಧಿಕಾರಿಗಳು ಕುಳಿತದಲ್ಲೇ ಗಮನಿಸುತ್ತಿದ್ದಾರೆ. ಸೀತಾಳಯ್ಯನಗಿರಿಯಲ್ಲಿ ವಾಹನ ದಟ್ಟಣೆ ಇದ್ದರೆ ಆ ಭಾಗಕ್ಕೆ ಬೇರೆ ವಾಹನಗಳನ್ನು ನಿಯಂತ್ರಿಸಲು ಇದು ಅನುಕೂಲವಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.

ಪ್ರಾಯೋಗಿಕವಾಗಿ ಸೋಲಾರ್ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಶಸ್ವಿಯಾದರೆ ಹೊನ್ನಮ್ಮನಹಳ್ಳ, ದೇವರಮನೆ ಸೇರಿ ಪ್ರಮುಖ ಪರಿಸರ ಪ್ರವಾಸಿ ತಾಣಗಳಲ್ಲಿ ಅಳವಡಿಸಲು ಆಲೋಚಿಸಲಾಗಿದೆ. ಝರಿಫಾಲ್ಸ್‌ ಬಳಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಅಲ್ಲಿ ಕ್ಯಾಮೆರಾ ಅಳವಡಿಸುವುದು ಕಷ್ಟ. ಉಳಿದೆಡೆ ತೊಂದರೆ ಇಲ್ಲ ಎಂದರು.

ಮೂರು ತಿಂಗಳ ಕಾಲ ದೃಶ್ಯಗಳು ಉಳಿಯಲಿದ್ದು, ಪ್ರವಾಸಿಗರು ಕಾನೂನು ಉಲ್ಲಂಘಿಸುವ ವರ್ತನೆಗಳಿದ್ದರೆ ಪ್ರಕರಣ ದಾಖಲಿಸಬಹುದು. ಪ್ರವಾಸಿ ಮಿತ್ರರು ಮತ್ತು ಇತರ ಸಿಬ್ಬಂದಿ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದರೂ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ವಿವರಿಸಿದರು.

ಸೆನ್ಸಾರ್ ಚೆಕ್‌ಪೋಸ್ಟ್‌

ಮುಳ್ಳಯ್ಯನಗಿರಿಯಲ್ಲಿ ವಾರಾಂತ್ಯದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಸೆನ್ಸಾರ್ ಆಧಾರಿತ ಸ್ಮಾರ್ಟ್‌ ಪಾರ್ಕಿಂಗ್ ಮತ್ತು ಚೆಕ್‌ಪೋಸ್ಟ್‌ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. 

ಈಗ ಕೈಮರ ಬಳಿ ಇರುವ ಚೆಕ್‌ಪೋಸ್ಟ್‌ ಬೇರೆಡೆಗೆ ಸ್ಥಳಾಂತರ ಮಾಡಲು ಜಾಗ ಹುಡುಕಾಟ ನಡೆಯುತ್ತಿದೆ. ಚೆಕ್‌ಪೋಸ್ಟ್‌ ಗೇಟ್‌ ಬಳಿ ಹೈಟೆಕ್ ಶೌಚಾಲಯ ವಿಶ್ರಾಂತಿ ಕೊಠಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಉದ್ದೇಶಿಸಿದೆ. ಸೀತಾಳಯ್ಯನಗಿರಿ ಮತ್ತು ದತ್ತಪೀಠದ ವಾಹನ ನಿಲುಗಡೆ ತಾಣದಲ್ಲಿ ಎಷ್ಟು ವಾಹನಗಳಿವೆ ಎಂಬುದು ಚೆಕ್‌ಪೋಸ್ಟ್‌ನಲ್ಲಿಯೇ ಗೊತ್ತಾಗಲಿದೆ.

ನಿಗದಿತ ವಾಹನಗಳಿಗಷ್ಟೇ ಅವಕಾಶ ಇರಲಿದ್ದು ಆ ವಾಹನಗಳು ಕೆಳಗೆ ಇಳಿದ ಬಳಿಕವೇ ಬೇರೆ ವಾಹನಗಳನ್ನು ಗಿರಿಯ ಮೇಲ್ಭಾಗಕ್ಕೆ ಬಿಡುವ ವ್ಯವಸ್ಥೆಯಾಗಲಿದೆ. ಈ ಯೋಜನೆ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನವಾಗಲಿದ್ದು ವಾಹನ ನಿಲುಗಡೆಗೆ ಬೇಕಿರುವ ಜಾಗ ಕೆಲವೇ ದಿನಗಳಲ್ಲಿ ಅಂತಿಮವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.