ಕಳಸ: ಕೊಳಮಗೆಯಲ್ಲಿ ಭದ್ರಾ ನದಿಗೆ ಪಿಕ್‌ಅಪ್ ವಾಹನ ಬಿದ್ದ ನಂತರ ಕಣ್ಮರೆ ಆಗಿರುವ ಯುವಕ ಶಮಂತ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಭೇಟಿ ನೀಡಿದರು.
ಶಮಂತ್ ಮೃತಪಟ್ಟಿರಬಹುದು ಎಂಬ ದುಃಖದಿಂದ ಅವರ ತಾಯಿ ರವಿಕಲಾ ಅವರೂ ಅದೇ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಗಣಪತಿಕಟ್ಟೆ ಪ್ರದೇಶದ ಅವರ ಮನೆಗೆ ಭೇಟಿ ನೀಡಿದ್ದ ನಯನಾ ಮೋಟಮ್ಮ ಶಮಂತ ಅವರ ತಂದೆ ರಮೇಶ್, ಅಣ್ಣ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶಮಂತ ಅವರ ಪತ್ತೆಗೆ ಮೂರು ದಿನಗಳಿಂದ ಸತತ ಪ್ರಯತ್ನ ನಡೆದಿದೆ ಎಂದು ಅವರು ಕುಟುಂಬಸ್ಥರಿಗೆ ತಿಳಿಸಿದರು.
ಶಮಂತನ ತಂದೆ ರಮೇಶ್, ನಮ್ಮ ಜಮೀನಿಗೆ ಹಕ್ಕುಪತ್ರ ಕೊಡಬೇಕು. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಅನೇಕ ವರ್ಷಗಳಿಂದ ಪ್ರಯತ್ನ ನಡೆದಿದೆ ಎಂದು ಶಾಸಕಿಯ ಬಳಿ ದೂರಿದರು.
ಶಮಂತ ವಾಸವಿದ್ದ ಭೂಮಿ ಯಾವ ಬಗೆಯದು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ತಹಶೀಲ್ದಾರ್ ಕಾವ್ಯಾ ಅವರಿಗೆ ನಯನಾ ಸೂಚಿಸಿದರು. ಶಮಂತ ಅವರ ಪತ್ತೆ ಬಳಿಕ ಮನೆಯ ಇತರ ಸಮಸ್ಯೆಗೆ ಬಗ್ಗೆ ಗಮನಹರಿಸೋಣ ಎಂದೂ ಅವರು ಸಮಾಧಾನಪಡಿಸಿದರು.
ಹಳುವಳ್ಳಿ ಮತ್ತು ಬಾಳೆಹೊಳೆ ಬಳಿ ಎನ್‌ಡಿಆರ್‌ಎಫ್ ವತಿಯಿಂದ ಶಮಂತನಿಗೆ ನಡೆಯುತ್ತಿರುವ ಹುಡುಕಾಟವನ್ನು ಅವರು ಪರಿಶೀಲಿಸಿದರು.
ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ಶ್ರೇಣಿಕ, ರಫೀಕ್, ವೀರೇಂದ್ರ, ಮಹೇಶ್ ಭಾಗವಹಿಸಿದ್ದರು.
ಕಳಸ ಆಸುಪಾಸಿನ ಭದ್ರಾ ನದಿಯಲ್ಲಿ ಅಗ್ನಿಶಾಮಕ ದಳ, ಬಾಳೆಹೊಳೆ ಮತ್ತು ಹಳುವಳ್ಳಿ ಆಸುಪಾಸಿನಲ್ಲಿ ಎನ್‌ಡಿಆರ್‌ಎಫ್ ತಂಡ ದಿನಿವಿಡೀ ಹುಡುಕಾಟ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.