ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್‌ಗಳ ವ್ಯವಸ್ಥೆ, ನಿಲ್ದಾಣಗಳ ಸೌಕರ್ಯ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಜಿಲ್ಲೆ ಕೇಂದ್ರದ ಗ್ರಾಮೀಣ ವಿಭಾಗದ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದ ಆವರಣವೇ ಗುಂಡಿ–ಹೊಂಡಗಳಿಂದ ತುಂಬಿಕೊಂಡಿದ್ದು, ಮಳೆ ಬಂದಾಗ ಪ್ರಯಾಣಿಕರು ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿಗೊಳಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಸ್‌ಗಳ ಕೊರತೆ, ಕೆಟ್ಟು ನಿಲ್ಲುವ ಬಸ್‌ಗಳಿಂದ ಜನ ಪರದಾಡುತ್ತಿದ್ದಾರೆ.
ಚಿಕ್ಕಮಗಳೂರು ವಿಭಾಗದಲ್ಲಿ ಆರು ಡಿಪೊಗಳಿದ್ದು, ಮೂರು ಡಿಪೊಗಳು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿವೆ (ಅರಸೀಕೆರೆ, ಬೇಲೂರು, ಸಕಲೇಶಪುರ). ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಡಿಪೊಗಳಿವೆ.
ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ತರೀಕೆರೆ ಭಾಗದಲ್ಲಿ ಡಿಪೊಗಳೇ ಇಲ್ಲ. ಚಿಕ್ಕಮಗಳೂರು ಡಿಪೊನಿಂದ ಈ ತಾಲ್ಲೂಕು ಕೇಂದ್ರಗಳು ಕನಿಷ್ಠ 90ರಿಂದ 100 ಕಿಲೋ ಮೀಟರ್ ದೂರದಲ್ಲಿವೆ. ಇಲ್ಲಿಂದ ಬಸ್‌ಗಳನ್ನು ಕಳುಹಿಸಿ ಮಲೆನಾಡು ಭಾಗದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದು ದುಬಾರಿ. ಆದ್ದರಿಂದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಬೆರಳೆಣಿಕೆಯಷ್ಟಿವೆ.
ಇನ್ನು ನಗರದಲ್ಲಿರುವ ಬಸ್ ನಿಲ್ದಾಣದಲ್ಲಿ ಸೌಕರ್ಯಗಳ ಕೊರತೆ ಇದೆ. ಅದರಲ್ಲೂ ಗ್ರಾಮೀಣ ಭಾಗದ ಬಸ್‌ಗಳು ನಿಲ್ಲುವ ನಿಲ್ದಾಣದಲ್ಲಿ ಸಮರ್ಪಕ ಸೂರು ಕೂಡ ಇಲ್ಲವಾಗಿದೆ. ಮಧ್ಯಾಹ್ನ ಮತ್ತು ಸಂಜೆ ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.
ಈ ಸಂದರ್ಭದಲ್ಲಿ ಮಳೆ ಬಂದರೆ ನಿಲ್ಲಲು ಜಾಗವಿಲ್ಲ. ಸಣ್ಣ ಶೆಡ್ ಇರುವುದರಿಂದ ಹೆಚ್ಚಿನ ಪ್ರಯಾಣಿಕರಿದ್ದರೆ ಜನ ಪರದಾಡುತ್ತಾರೆ. ಗುಂಡಿ ಗೊಟರುಗಳಿಂದ ತುಂಬಿಕೊಂಡಿದ್ದು, ಇದರ ನಡುವೆಯೇ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಹೊಸ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ಇನ್ನೂ ಪ್ರಸ್ತಾವ ಹಂತದಲ್ಲೇ ಉಳಿದುಕೊಂಡಿದೆ.
ಕಳಸ: ಕಳಸದಲ್ಲಿ ಹಲವು ಸರ್ಕಾರಿ ಬಸ್‍ಗಳು ಸಂಚಾರ ಮಾಡುತ್ತಿದ್ದರೂ ಕೆಎಸ್‌ಆರ್‌ಟಿಸಿ ಬಸ್ನಿಲ್ದಾಣವೇ ಇಲ್ಲ. ಹೆಸರಾಂತ ಪ್ರವಾಸಿ ತಾಣಗಳಾದ ಕಳಸ ಹೊರನಾಡು ಕುದುರೆಮುಖಕ್ಕೆ ನಿತ್ಯ ಬೆಂಗಳೂರು ಮೈಸೂರು ಮತ್ತು ಚಿಕ್ಕಮಗಳೂರಿನಿಂದ ಬಸ್‍ಗಳು ಬರುತ್ತವೆ. ಆದರೆ ಈ ಬಸ್‍ಗಳಿಗೆ ನಿಲ್ದಾಣವೇ ಇಲ್ಲದೆ ಮುಖ್ಯ ರಸ್ತೆಯಲ್ಲೇ ನಿಲ್ಲುತ್ತವೆ.
ಮುಖ್ಯ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ಪ್ರವಾಸಿಗರು ಬಸ್ ಏರಲು ಕಾಯುವ ಅನಿವಾರ್ಯತೆ ಇದೆ. ಅರಮನೆಮಕ್ಕಿ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣವಿದೆ. ಆದರೆ ಇಲ್ಲಿಗೆ ಯಾವುದೇ ಬಸ್‍ಗಳು ಹೋಗದೆ ನಿಲ್ದಾಣ ಪಾಳು ಬಿದ್ದಿದೆ. ನಿಲ್ದಾಣದ ಒಂದು ಭಾಗವನ್ನು ಖಾಸಗಿಯವರು ಅಡುಗೆ ಅನಿಲ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೂರು ವರ್ಷದ ಹಿಂದೆ ಆಗಿನ ಸಾರಿಗೆ ಸಚಿವರು ಕಳಸದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ₹1 ಕೋಟಿ ಮಂಜೂರು ಮಾಡುವ ಭರವಸೆ ನೀಡಿದ್ದರು. ಈಗಲೂ ಆ ಭರವಸೆ ಈಡೇರಿಲ್ಲ.
ಭಾರಿ ಮಳೆಯ ದಿನಗಳಲ್ಲಿ ವೃದ್ಧರು ಮಹಿಳೆಯರು ಮತ್ತು ಮಕ್ಕಳು ಕಳಸ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲೇ ನಿಲ್ಲುತ್ತಾರೆ. ಕುದುರೆಮುಖ ಮತ್ತು ನೇತ್ರಾವತಿ ಚಾರಣ ಮಾಡುವವರು ಕೂಡ ಬಸ್‍ಗಾಗಿ ಕಾಯುತ್ತಿರುತ್ತಾರೆ. ಬಸ್ ನಿಲ್ಲುವ ಈ ಇಕ್ಕಟ್ಟಾದ ಜಾಗದಲ್ಲಿ ಶೌಚಾಲಯ ಇಲ್ಲದೆ ವಿಶ್ರಾಂತಿಗೆ ಸ್ಥಳವೂ ಇಲ್ಲದೆ ಜನ ತೀವ್ರ ತೊಂದರೆ ಅನುಭವಿಸುತ್ತಾರೆ.
ಕಡೂರು: ಜಿಲ್ಲೆಯಲ್ಲಿಯೇ ಪ್ರಯಾಣಿಕರ ದಟ್ಟಣೆಯ ಬಸ್ ನಿಲ್ದಾಣ ಎಂದರೆ ಕಡೂರು ಬಸ್ ನಿಲ್ದಾಣ. ಆದರೆ ಈ ನಿಲ್ದಾಣವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ತುರ್ತು ಸಂದರ್ಭದಲ್ಲಿ ಬಾಟಲಿ ನೀರು ಖರೀದಿಸಬೇಕಾದ ಅನಿವಾರ್ಯತೆ ಇದೆ.
ಜನದಟ್ಟಣೆ ಇರುವ ಕಾರಣ ಚಿಕ್ಕಮಗಳೂರು ಧರ್ಮಸ್ಥಳ ಕಡೆ ಹೋಗುವ ಪ್ರಯಾಣಿಕರು ಮೊಬೈಲ್ ಫೋನ್ ಕಳವು ಪರ್ಸ್ ಕಳ್ಳತನ ನಿರಂತರವಾಗಿ ನಡೆಯುತ್ತಿದೆ. ಭದ್ರತೆ ಕೊರತೆ ನಿಲ್ದಾಣದಲ್ಲಿ ಸಿಬ್ಬಂದಿಯ ಕೊರತೆ ಒಂದೆಡೆಯಾದರೆ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಕತ್ತಲಿನಲ್ಲಿ ಭಯದಲ್ಲಿ ಕುಳಿತುಕೊಳ್ಳುವ ಸ್ಥಿತಿ ಇದೆ. ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ದ್ವಿಚಕ್ರ ವಾಹನಗಳ ನಿಲ್ದಾಣದ ಒಳಭಾಗದಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡಬೇಕಿದೆ.
ಭದ್ರತೆ, ಕುಡಿಯುವ ನೀರು, ಸಮರ್ಪಕ ಪಾರ್ಕಿಂಗ್ ಮತ್ತು ಹೈಮಾಸ್ಟ್ ದೀಪಗಳ ವ್ಯವಸ್ಥೆ ಆಗಬೇಕಿದೆ. ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.
ಬೀರೂರು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಆಸನಗಳ ವ್ಯವಸ್ಥೆ ಇದ್ದರೂ ಬಸ್‌ಗಳ ಕೊರತೆ ಪ್ರಮುಖವಾಗಿ ಕಾಡುತ್ತದೆ. ಬೆಳಿಗ್ಗೆ ಕಡೂರು ಚಿಕ್ಕಮಗಳೂರಿಗೆ ತೆರಳುವ ವಿದ್ಯಾರ್ಥಿಗಳು ಪ್ರಯಾಣಿಕರು ಬಹಳಷ್ಟು ಹೊತ್ತು ಕಾಯಬೇಕಾದ ಸ್ಥಿತಿ ಇದೆ. ದಟ್ಟಣೆ ಹೆಚ್ಚಿದ್ದ ಸಂದರ್ಭದಲ್ಲಿ ಮೊಬೈಲ್ ನಾಪತ್ತೆ ಮತ್ತು ಪಿಕ್ ಪಾಕೆಟ್ ಸಾಮಾನ್ಯವಾಗಿದೆ.
ಪಂಚನಹಳ್ಳಿ ಬಸ್ ನಿಲ್ದಾಣವು ಚಿಕ್ಕಮಗಳೂರು ಚಿತ್ರದುರ್ಗ ಹಾಸನ ತುಮಕೂರು ಜಿಲ್ಲೆಗಳ ಗಡಿ ಭಾಗದ ಪ್ರಮುಖ ನಿಲ್ದಾಣವಾಗಿದೆ. ಕಡೂರು ಕಡೆಯಿಂದ ಬರುವ ಬಸ್‌ಗಳ ಕೊರತೆ ಇದೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಈ ಮೊದಲು ಇದ್ದದ್ದು ಸದ್ಯ ಕಾರ್ಯನಿರ್ವಹಿಸದೆ ಜನ ಪರದಾಡಬೇಕಾದ ಸ್ಥಿತಿ ಇದೆ. ₹15 ಕೋಟಿ ವೆಚ್ಚದಲ್ಲಿ ಕಡೂರು ಮತ್ತು ಬೀರೂರು ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ ಹಣ ಮಂಜೂರಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳುತ್ತಾರೆ.
ಮೂಡಿಗೆರೆ: ತಾಲ್ಲೂಕು ಗುಡ್ಡಗಾಡು ಪ್ರದೇಶವಾಗಿದ್ದು ಈವರೆಗೂ ಬಸ್ ಸಂಪರ್ಕವಿಲ್ಲದ ಹತ್ತಾರು ಗ್ರಾಮಗಳಿವೆ. ಮೂಡಿಗೆರೆ ತತ್ಕೊಳ ಕಣಗದ್ದೆ ಭೈರಿಗದ್ದೆ ಕುಂದೂರು ಚಂಡಗೋಡು–ಆಲ್ದೂರು ಕುನ್ನಳ್ಳಿ-ಹಳಸೆ- ಮಣ್ಣಿಕೆರೆ- ಜನ್ನಾಪುರ ಸಾರಗೋಡು- ಕೂವೆ ಮಾಗುಂಡಿ ಸೇರಿ ಹಲವು ಗ್ರಾಮಗಳಿಗೆ ಈವರೆಗೂ ಬಸ್ ಸಂಪರ್ಕವೇ ಇಲ್ಲವಾಗಿದೆ. ಜನ ಸಂಚಾರಕ್ಕೆ ಖಾಸಗಿ ವಾಹನಗಳನ್ನೇ ಅವಂಬಿಸುವಂತಾಗಿದೆ.
ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕೊಟ್ಟಿಗೆಹಾರಕ್ಕೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಹಲವು ವರ್ಷಗಳ ಒತ್ತಾಯ. ಈ ಮಾರ್ಗದಲ್ಲಿ ವೇಗದೂತ ವಾಹನಗಳಿದ್ದು ನಗರ ಸಾರಿಗೆ ಅಲ್ಲದ ಕಾರಣ ಜನ ಆಟೊರಿಕ್ಷಾ ಜೀಪುಗಳಲ್ಲಿ ತಿರುಗಾಡುವಂತಾಗಿದೆ.
‘ಮೂಡಿಗೆರೆ ಘಟಕದಲ್ಲಿ ಬಸ್‌ಗಳ ಕೊರತೆಯಿದೆ. ಕೋವಿಡ್ ಬಳಿಕ ಗ್ರಾಮಾಂತರ ಸಾರಿಗೆ ವ್ಯವಸ್ಥೆ ಹಿಂದಿನಂತೆ ಸಾಗಿದರೂ ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ ಭಾಗಕ್ಕಿದ್ದ ಹಲವು ಮಾರ್ಗಗಳು ಸ್ಥಗಿತವಾಗಿವೆ. ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯಾದರೆ ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಬಹುದು. ಗುಡ್ಡಗಾಡು ಪ್ರದೇಶಗಳಲ್ಲಿ ಮಿನಿ ಬಸ್ ಸೇವೆ ಅಗತ್ಯವಾಗುತ್ತದೆ. ಅದರೆ ಘಟಕದಲ್ಲಿ ಮಿನಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಮೂಡಿಗೆರೆ ಘಟಕದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪಟ್ಟಣದ ಬಸ್ ನಿಲ್ದಾಣವು ಅವ್ಯವಸ್ಥೆಯಿಂದ ಕೂಡಿದ್ದು ನಿಲ್ದಾಣದಲ್ಲಿ ಸಮರ್ಪಕ ಆಸನಗಳ ವ್ಯವಸ್ಥೆಯಿಲ್ಲದ ಕಾರಣ ಜನ ನಿಂತೇ ಬಸ್ ಕಾಯುವ ಪರಿಸ್ಥಿತಿ ಇದೆ. ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಘಟಕವು ಶುದ್ಧವಾಗಿಲ್ಲ. ಶೌಚಾಲಯ ಕೂಡ ಗಬ್ಬು ನಾರುತ್ತಿದೆ. ಮಳೆ ಬಂದರೆ ಶೌಚಾಲಯ ಗುಂಡಿ ಉಕ್ಕುವುದರಿಂದ ಬಸ್ ನಿಲ್ದಾಣ ಮಾತ್ರವಲ್ಲದೆ ಅಕ್ಕಪಕ್ಕದ ನಿವಾಸಿಗಳೂ ಸಮಸ್ಯೆ ಎದುರಿಸುವಂತಾಗಿದೆ.
ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ಓಡಾಟ ಜಾಸ್ತಿ ಇದೆ. ಶೃಂಗೇರಿಯಿಂದ ಚಿಕ್ಕಮಗಳೂರು ಉಡುಪಿ ಕಡೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಇದೆ. ಆ ಕಡೆ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಜಯಪುರ ಬಾಳೆಹೊನ್ನೂರು ಹೇರೂರು ಅಗಳಗಂಡಿ ಕುಂಚೆಬೈಲ್‌ನಿಂದ ಬರುವ ಶಾಲಾ ಕಾಲೇಜಿನ ಮಕ್ಕಳಿಗೆ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿಲ್ಲ. ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದಾರೆ. ಪ್ರಸ್ತುತ ತ್ಯಾವಣ ಸಮೀಪ ಬಸ್ ಡಿಪೊ ನಿರ್ಮಾಣಗೊಳ್ಳುತ್ತಿದೆ. ಬಳಿಕ ಬಸ್‌ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನರಸಿಂಹರಾಜಪುರ: ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದರೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಾಕಷ್ಟು ವಿರಳವಾಗಿದೆ. ಈ ಹಿಂದೆ ಸಹಕಾರ ಸಾರಿಗೆ ಸಂಸ್ಥೆಯಿಂದ ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಗ್ರಾಮಗಳಿಗೆ ಬಸ್ ಸೇವೆ ಲಭ್ಯವಿತ್ತು. ಈ ಸಂಸ್ಥೆ ಬಸ್ ಸೇವೆ ಸ್ಥಗಿತಗೊಳಿಸಿದ ನಂತರ ಪರ್ಯಾಯವಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲಾಗಿತ್ತು. ಸಹಕಾರ ಸಾರಿಗೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ಕೆಎಸ್ಆರ್‌ಟಿಸಿ ಬಸ್ ಸೇವೆ ಸ್ಥಗಿತಗೊಳಿಸಲಾಗಿದ್ದು ಹಲವು ಊರುಗಳಿಗೆ ಸುತ್ತಿ ಬಳಸಿ ಹೋಗುವ ಸ್ಥಿತಿಯಿದೆ. ಬೆಳಿಗ್ಗೆ ವೇಳೆ ಸಂಚರಿಸುತ್ತಿದ್ದ ಶೃಂಗೇರಿಯಿಂದ ಕೋಲಾರದ ಶ್ರೀನಿವಾಸಪುರ ಬಸ್ ಸೇವೆ ಸ್ಥಗಿತಕಂಡಿದೆ.
ಕುವೆಂಪು ವಿಶ್ವವಿದ್ಯಾಲಯ ಇರುವ ಶಂಕರಘಟ್ಟ ಉಪವಿಭಾಗಾಧಿಕಾರಿಗಳ ಕಚೇರಿ ಇರುವ ತರೀಕೆರೆಗೆ ತಾಲ್ಲೂಕು ಕೇಂದ್ರದಿಂದ ಶಿವಮೊಗ್ಗ ಅಥವಾ ಲಕ್ಕಿನಕೊಪ್ಪ ಗ್ರಾಮಕ್ಕೆ ಹೋಗುವ ಸ್ಥಿತಿಯಿದೆ. ಶಿವಮೊಗ್ಗ–ಧರ್ಮಸ್ಥಳ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.
ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆ 7.30ಕ್ಕೆ ಹಾಗೂ ಮಧ್ಯಾಹ್ಞ 2.30ಕ್ಕೆ ಇದ್ದ ಬಸ್ ರದ್ದುಗೊಂಡಿದೆ. ಭದ್ರಾವತಿಗೆ ಬೆಳಿಗ್ಗೆ ವೇಳೆ ಶಿವಮೊಗ್ಗ ಮಾರ್ಗದಲ್ಲಿ ಹೋಗುವ ಸ್ಥಿತಿಯಿದೆ. ಶಕ್ತಿ ಯೋಜನೆ ಜಾರಿಯಾಗಿದ್ದರೂ ನರಸಿಂಹರಾಜಪುರದ ತನಕ ಹೆಚ್ಚಿನ ಪ್ರಯೋಜನ ಆಗಿಲ್ಲ.
ತಾಲ್ಲೂಕು ಕೇಂದ್ರದಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದ ಬಸ್ ನಿಲ್ದಾಣ ಮಳೆಗಾಲದಲ್ಲಿ ಸೋರುತ್ತದೆ. ಪ್ರಯಾಣಿಕರಿಗೆ ಕೂರಲು ಸಮರ್ಪಕ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಬಸ್ ನಿಲ್ದಾಣದ ಆವರಣದಲ್ಲಿ ಯಾತ್ರಿನಿವಾಸ ನಿರ್ಮಾಣವಾಗಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬಸ್ ನಿಲ್ದಾಣ ಸಂತೆ ಮಾರುಕಟ್ಟೆ ದುರಸ್ತಿಗೆ ನಗರೋತ್ಥಾನ ಯೋಜನೆಯಡಿ ₹75 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ ಈವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ.
ತರೀಕೆರೆ: ಪಟ್ಟಣದ ಮಧ್ಯಭಾಗದಲ್ಲಿ ಇರುವ ಕೆಎಸ್ಆರ್‌ಟಿಸಿ ಬಸ್‍ನಿಲ್ದಾಣ 30 ವರ್ಷಗಳಿಗೂ ಹಳೆಯ ಕಟ್ಟಡ. ಬೆಂಗಳೂರು ಮೈಸೂರು ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಮಂಗಳೂರು ಮತ್ತು ಧರ್ಮಸ್ಥಳ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಪ್ರಮುಖ ಸ್ಥಳವಾಗಿದೆ. ಈ ಎಲ್ಲಾ ಕಡೆಗಳಿಂದ ನಿತ್ಯ ನೂರಾರು ಜನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೆ ಸಂಚರಿಸುತ್ತಾರೆ. ಎರಡು ವರ್ಷಗಳಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ನಿಲ್ಲಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿಲ್ಲ. ಶೌಚಾಲಯ ಮತ್ತು ನಿಲ್ಲಾಣದ ಸ್ವಚ್ಛತೆಯಂತು ಮರೀಚಿಕೆಯಾಗಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುವ ಸ್ಥಿತಿಯಿದೆ. ತರೀಕೆರೆ ಬಸ್ ನಿಲ್ದಾಣವನ್ನು ಅಂದಾಜು ₹9.15 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ದೊರೆತಿದೆ. ಅನುದಾನವೂ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಅಜ್ಜಂಪುರ: ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣ ಇಲ್ಲ. ಕೆಲವೇ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚರಿಸುತ್ತವೆ. ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇಲ್ಲ. ಕೇವಲ ಬೆರಳೆಣಿಕೆಯಷ್ಟು ಸರ್ಕಾರಿ ಬಸ್ ಸಂಚರಿಸುತ್ತವೆ. ಇದು ಶಿಕ್ಷಣಕ್ಕಾಗಿ ಪರವೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟುಮಾಡಿದೆ.
ಕಿಕ್ಕಿರಿದು ತುಂಬಿರುವ ಸರ್ಕಾರಿ ಬಸ್‌ಗಳಲ್ಲಿ ವೃದ್ಧರು ಮಕ್ಕಳು ಮಹಿಳೆಯರು ಅನಾರೋಗ್ಯ ಪೀಡಿತರು ಪ್ರಯಾಣ ಮಾಡಲು ಪರದಾಡುವಂತಾಗಿದೆ. ನಿಗದಿತ ಸಂಖ್ಯೆಗಿಂತ ಅಧಿಕ ಪ್ರಯಾಣಿಕರು ಸಂಚರಿಸುವುದರಿಂದ ಸರ್ಕಾರಿ ಬಸ್‌ಗಳು ಅಪಘಾತಕ್ಕೆ ಈಡಾಗುವ ಸಂಭವ ಹೆಚ್ಚಾಗಿದೆ. ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಪರಿಣಾಮ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಆ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳು ಹೆಚ್ಚಳವಾಗಿಲ್ಲ. ಇದು ಪ್ರಯಾಣಿಕರ ಪ್ರಯಾಣವನ್ನು ಪ್ರಯಾಸವಾಗಿಸಿದೆ.
ಕೊಪ್ಪ: ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ತೀರಾ ಕಡಿಮೆ ಇದೆ. ದಿನದಲ್ಲಿ ಒಟ್ಟು 8 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಈ ಭಾಗದಲ್ಲಿ ಸಂಪರ್ಕ ಕೊಂಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಸ್ ಸೇವೆ ಸ್ಥಗಿತಗೊಳಿಸಿದ ಬಳಿಕ ಜನ ಖಾಸಗಿ ಬಸ್ ಅವಲಂಬಿಸಿದ್ದಾರೆ. ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಸಹಕಾರ ಸಾರಿಗೆ ಬಸ್ ಓಡಾಡುತ್ತಿತ್ತು. ಆದರೆ ಬಹುತೇಕ ಮಾರ್ಗದಲ್ಲಿ ಖಾಸಗಿ ಬಸ್ ಓಡಾಡುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಇಲ್ಲದ ಕಾರಣ ಶಕ್ತಿ ಯೋಜನೆಯ ಲಾಭ ತಾಲ್ಲೂಕಿನ ಮಹಿಳೆಯರಿಗೆ ಸಿಗುತ್ತಿಲ್ಲ.
ವಿದ್ಯಾರ್ಥಿಗಳಿಗೆ ಅಂಗವಿಕಲರು ರಿಯಾಯಿತಿ ದರದಲ್ಲಿ ಓಡಾಡಲು ಸಹಕಾರ ಸಾರಿಗೆ ಸಂಸ್ಥೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ ಇದೀಗ ಅಂತಹ ಯಾವುದೇ ಸವಲತ್ತು ಈ ಭಾಗದ ಜನರಿಗೆ ಸಿಗುತ್ತಿಲ್ಲ. ತಾಲ್ಲೂಕಿನ ಎರಡ್ಮೂರು ಮಾರ್ಗದಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಸ್ತಾವ ಸಲ್ಲಿಸಿದೆ. ಪಟ್ಟಣ ಸಮೀಪದ ಹುಲ್ಲುಮಕ್ಕಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೊಗೆ ಜಾಗ ಕಾಯ್ದಿರಿಸಲಾಗಿತ್ತು. ಸದ್ಯ ಶೃಂಗೇರಿಯಲ್ಲಿ ಡಿಪೊ ಮಾಡಲು ಜಾಗ ಗುರುತಿಸಿದ ಬಳಿಕ ಇಲ್ಲಿನ ಜಾಗವನ್ನು ಬೇರೆ ಉದ್ದೇಶದ ಬಳಕೆಗೆ ಪ್ರಯತ್ನ ಸಾಗಿದೆ ಎಂದು ಮೂಲಗಳು ತಿಳಿಸಿವೆ.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಎನ್.ಸೋಮಶೇಖರ್, ರವಿ ಕೆಳಂಗಡಿ, ಕೆ.ಎನ್.ರಾಘವೇಂದ್ರ, ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.