ADVERTISEMENT

ಚಿಕ್ಕಮಗಳೂರು | ಹೆಣ್ಣು ಮಕ್ಕಳ ಕಾಳಜಿ ವಹಿಸುವುದು ಸಮಾಜದ ಕರ್ತವ್ಯ: ಜಯಶೀಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:15 IST
Last Updated 8 ಡಿಸೆಂಬರ್ 2025, 6:15 IST
ನಗರದ ಮಲ್ಲಂದೂರು ರಸ್ತೆ ಸಮೀಪ ನೂತನವಾಗಿ ಪ್ರಾರಂಭಗೊಂಡ ನೆಮ್ಮದಿ ಫೌಂಡೇಷನ್ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು
ನಗರದ ಮಲ್ಲಂದೂರು ರಸ್ತೆ ಸಮೀಪ ನೂತನವಾಗಿ ಪ್ರಾರಂಭಗೊಂಡ ನೆಮ್ಮದಿ ಫೌಂಡೇಷನ್ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು   

ಚಿಕ್ಕಮಗಳೂರು: ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ಲೈಂಗಿಕ ದೌರ್ಜನ್ಯದಿಂದ ಬಳಲುವವರಿಗೆ ನ್ಯಾಯಸಮ್ಮತವಾದ ನೆರವು ಕಲ್ಪಿಸುವುದು ನಾಗರಿಕ ಸಮಾಜದ ಮೂಲ ಕರ್ತವ್ಯ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಯಶೀಲ ಹೇಳಿದರು.

ನಗರದ ಮಲ್ಲಂದೂರು ರಸ್ತೆ ಸಮೀಪ ನೂತನವಾಗಿ ಪ್ರಾರಂಭಗೊಂಡ ನೆಮ್ಮದಿ ಫೌಂಡೇಷನ್ ಉದ್ಘಾಟನಾ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಹೆಣ್ಣು ಮಕ್ಕಳ ರಕ್ಷಣೆ, ಮಕ್ಕಳ ಆರೋಗ್ಯ ಹಾಗೂ ಅಗತ್ಯವಿರುವ ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ 50 ಅಂಶಗಳನ್ನು ಒಳಗೊಂಡಿರುವ ನೆಮ್ಮದಿ ಪೌಂಢೇಷನ್ ಕಾರ್ಯ ಶ್ಲಾಘನೀಯವಾಗಿದ್ದು, ತಮ್ಮ ಕಲ್ಯಾಣ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ADVERTISEMENT

ಇತ್ತೀಚಿನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಳಗೊಳ್ಳುತ್ತಿವೆ. ಇದನ್ನು ನೇರವಾಗಿ ಕಡಿವಾಣಕ್ಕೆ ತರಲು ಪ್ರಜ್ಞಾವಂತ ಸಮಾಜವು ಪುಟಿದೇಳಬೇಕು. ಅಲ್ಲದೇ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಿಕ್ಷಣವಂತರಾಗಿಸಿ ಸಮಾಜದ ಆಸ್ತಿ ಮಾಡಬೇಕು ಎಂದು ಸಲಹೆ ಮಾಡಿದರು.

ಒಳ್ಳೆಯ ನಿರ್ಧಾರದಡಿ ಸ್ಥಾಪಿತಗೊಂಡ ಸಂಸ್ಥೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ಗ್ರಾಮಿಣ ಮಟ್ಟದ ಮಕ್ಕಳಿಗೆ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಕಲ್ಯಾಣ ಸಮಿತಿ ಸದಾ ಸನ್ನದ್ಧವಾಗಿದೆ. ಪಾಲಕರು, ಮಗಳ ಜವಾಬ್ದಾರಿ ಕಳೆದುಕೊಳ್ಳಲು ವಯಸ್ಸಿಗೂ ಮುನ್ನ ಮದುವೆಗೆ ಮುಂದಾದರೆ ಎರಡು ಕುಟುಂಬದ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಸಿದರು.

ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ಅಧಿಕಾರಿ ವೃಂದ, ನಾಗರಿಕ ಸಮಾಜ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಹೆಣ್ಣಿನಂತೆ ಗಂಡುಮಕ್ಕಳಿಗೆ ಸರಿ ಸಮಾನವಾಗಿ ನಿಗಾವಹಿಸಿದರೆ ಭವಿಷ್ಯದ ಹಾದಿಯಲ್ಲಿ ತಪ್ಪಲು ಎಂದಿಗೂ ಸಾಧ್ಯವಿಲ್ಲ ಎಂದರು.

ನೆಮ್ಮದಿ ಫೌಂಡೇಷನ್ ಅಧ್ಯಕ್ಷ ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗನಿರೋಧಕ ಶಕ್ತಿ, ಕಣ್ಣಿನ ಆರೈಕೆ, ತಾಯ್ತನ, ಮಕ್ಕಳ ಆರೈಕೆ ಮತ್ತು ಸಾಂಕ್ರಾಮಿಕ ರೋಗಗಳ ಆರೋಗ್ಯ ಮತ್ತು ಜಾಗೃತಿ ಶಿಬಿರಗಳನ್ನು ಆಯೋಜಿಸಿ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುವುದೇ ಮೂಲಧ್ಯೇಯ ಎಂದರು.

ಕಾರ್ಯಕ್ರಮದಲ್ಲಿ ಡಿವೈನ್ ಹೆಲ್ತ್ ಕೇರ್ ಸೆಂಟರ್‌ನ ರೇಖಾ, ದಸಂಸ ಮಹಿಳಾ ಸಂಚಾಲಕಿ ಭಾರತಿ ಉಮೇಶ್‌ರಾಜ್, ಪೌಂಡೇಷನ್ ಉಪಾಧ್ಯಕ್ಷೆ ನಾಗರಾತ್ನ, ಕಾರ್ಯದರ್ಶಿ ಶಾಂತಕುಮಾರ್, ಸದಸ್ಯ ಜ್ಯೋತಿ ಇದ್ದರು.

ನೆಮ್ಮದಿ ಎಂಬುದು ಹಣಕೊಟ್ಟರೆ ಬರುವುದಿಲ್ಲ ಆಧ್ಯಾತ್ಮದಿಂದ ಗಳಿಸಿಕೊಳ್ಳುವುದು. ಪರಮಾತ್ಮನ ಜ್ಞಾನ ಪ್ರತಿನಿತ್ಯದ ಯೋಗಾಭ್ಯಾಸವು ಮಾನವ ಬದುಕಿನಲ್ಲಿ ಶಾಂತಿ ನೆಮ್ಮದಿ ಕರುಣಿಸಿ ಸುಖವಾಗಿ ಬಾಳಬಹುದು
ಅಮೃತಾ ಬ್ರಹ್ಮಕುಮಾರೀಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.