ADVERTISEMENT

ಚಿಕ್ಕಮಗಳೂರು | ಹೌಸಿಂಗ್ ಬೋರ್ಡ್‌: ಎಲ್ಲೆಲ್ಲೂ ಕಸದ ರಾಶಿ,ದುರ್ವಾಸನೆ ನಡುವೆ ಜೀವನ

ಪ್ರತಿಷ್ಠಿತ ಬಡಾವಣೆಯ ರಸ್ತೆ ಬದಿಯಲ್ಲಿ ಕಸ

ಪ್ರಜಾವಾಣಿ ವಿಶೇಷ
Published 17 ಡಿಸೆಂಬರ್ 2025, 7:17 IST
Last Updated 17 ಡಿಸೆಂಬರ್ 2025, 7:17 IST
ರಸ್ತೆ ಬದಿ ಕಸ ಹಾಕದಂತೆ ನಗರಸಭೆಯಿಂದ ಅಳವಡಿಸಿರುವ ಫಲಕ
ರಸ್ತೆ ಬದಿ ಕಸ ಹಾಕದಂತೆ ನಗರಸಭೆಯಿಂದ ಅಳವಡಿಸಿರುವ ಫಲಕ   

ಚಿಕ್ಕಮಗಳೂರು: ಪ್ರತಿಷ್ಠಿತ ಬಡಾವಣೆ ಎಂದು ಕರೆಸಿಕೊಳ್ಳುವ ಹೌಸಿಂಗ್ ಬೋರ್ಡ್‌ ಬಡಾವಣೆಯ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ದುರ್ವಾಸನೆ ನಡುವೆ ಜನ ಜೀವನ ನಡೆದಿದೆ.

ಕಡೂರು–ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಿಂದ ನಗರದ ಹೌಸಿಂಗ್ ಬೋರ್ಡ್‌ ಬಡಾವಣೆಗೆ ಹೊಕ್ಕರೆ ರಸ್ತೆಯ ಬದಿಯ ಉದ್ದಕ್ಕೂ ಕಸದ ರಾಶಿಯೇ ಸ್ವಾಗತ ಕೋರುತ್ತದೆ. ಇದರಿಂದ ಈ ಮಾರ್ಗವಾಗಿ ಓಡಾಡುವ ಜನ ಮೂಗು ಮುಚ್ಚಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. 

ಇದೇ ಮಾರ್ಗದಲ್ಲಿ ಖಾಸಗಿ ಕಾಲೇಜಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಜತೆಗೆ ಈ ಮಾರ್ಗದಲ್ಲೇ ಮದುವೆ ಮಂಟಪಗಳು ಕೂಡ ಇವೆ. ಈ ಬಡಾವಣೆಯಲ್ಲಿ ಹೆಚ್ಚು ವಿದ್ಯಾವಂತರು, ಉದ್ಯೋಗಿಗಳು ಇದ್ದಾರೆ. ‍‍

ADVERTISEMENT

ನಗರಸಭೆಯಿಂದ ತ್ಯಾಜ್ಯ ಸಂಗ್ರಹ ವಾಹನ ಬಂದು ಮನೆ–ಮನೆಯಿಂದ ಕಸ ಸಂಗ್ರಹಿಸುತ್ತಿದ್ದರೂ ಇಲ್ಲಿ ಕಸದ ರಾಶಿ ಬೀಳುತ್ತಿದೆ. ರಾತ್ರಿ ಸಮಯದಲ್ಲಿ ಅಥವಾ ಯಾರೂ ಇಲ್ಲದ ಸಮಯದಲ್ಲಿ ಮನೆ ತ್ಯಾಜ್ಯ, ಹೋಟೆಲ್ ತ್ಯಾಜ, ಪ್ಲಾಸ್ಟಿಕ್ ಇತ್ಯಾದಿ ಅನುಪಯುಕ್ತ ವಸ್ತುಗಳನ್ನು ತಂದು ಬಿಸಾಡುತ್ತಿದ್ದಾರೆ. 

ಪ್ಲಾಸ್ಟಿಕ್, ಪೇಪರ್, ಬಾಳೆಎಲೆ, ಮದ್ಯದ ಬಾಟಲಿ, ಗೃಹ ತ್ಯಾಜ್ಯಗಳು ದಾರಿಯುದ್ದಕ್ಕೂ ಹರಡಿ ಹೌಸಿಂಗ್ ಬೋರ್ಡ್‌ ಮಾರ್ಗದ ಸೌಂದರ್ಯವನ್ನೇ ಹಾಳು ಮಾಡಿದೆ. ನಿತ್ಯ ಇಲ್ಲಿ ಕಸ ರಾಶಿಯಾಗುವ ಕಾರಣಕ್ಕೆ ಬೀಡಾಡಿ ದನಗಳು, ಬೀದಿ ನಾಯಿಗಳ ತಾಣವಾಗಿ ಮಾರ್ಪಟ್ಟಿದೆ.  

ನಿತ್ಯ ಈ ಪ್ರದೇಶದಲ್ಲಿ ಕಸದ ರಾಶಿ ಹೆಚ್ಚಾಗುತ್ತಿದ್ದು, ಗಾಳಿಯಲ್ಲಿ ಕಸ ತೂರಿ ಬಂದು ರೋಗ ರುಜಿನ ಹರಡುತ್ತಿದೆ. ನಿತ್ಯ ಮೂಗು ಮುಚ್ಚಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಸಾಂಕ್ರಾಮಿಕ ರೋಗಗಳ ಭಯವೂ ಕಾಡುತ್ತಿದೆ ಎಂದು ಹೇಳುತ್ತಾರೆ ನಿವಾಸಿಗಳು.

ನಗರಸಭೆಯಿಂದ ಕಸ ಸಂಗ್ರಹವನ್ನು ಸಮರ್ಪಕವಾಗಿ ಮಾಡಬೇಕು. ಜನರು ಕೂಡ ಹಸಿ ಮತ್ತು ಒಣ ತಾಜ್ಯವನ್ನು ವಿಂಗಡಿಸಿ ನೀಡಬೇಕು. ಇದನ್ನು ಮಾಡದೆ ರಸ್ತೆಗೆ ತಂದು ಸುರಿಯುವವರ ವಿರುದ್ಧ ನಗರಸಭೆ ಕಠಿಣ ಕ್ರಮ ಕೈಗೊಳ್ಳಬೇಕು. ಕಸ ಸುರಿಯುವ ತಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅವರಿಗೆ ದಂಡ ವಿಧಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಇಲ್ಲಿದ್ದರೆ ಇಡೀ ಬಡಾವಣೆಯ ಜನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಹೌಸಿಂಗ್ ಬೋರ್ಡ್‌ ರಸ್ತೆ ಬದಿಯಲ್ಲಿ ಬಿದ್ದಿರುವ ಕಸ
ರಸ್ತೆ ಬದಿ ಬಿದ್ದಿರುವ ಮದ್ಯದ ಬಾಟಲಿ ಪ್ಲಾಸ್ಟಿಕ್ ಕವರ್‌ಗಳು

ಕಸ ಎಸೆದರೆ ನಿರ್ವಂಶ: ನಗರಸಭೆಯಿಂದ ಫಲಕ ಮನೆಯ ಮುಂದೆ ಬರುವ ನಗರಸಭೆ ವಾಹನಕ್ಕೆ ಕಸ ನೀಡಬೇಕು ಎಂದು ಪ್ರಚಾರದ ಜಾಹೀರಾತನ್ನು ನಗರಸಭೆ ಹಾಕಿದೆ. ಆದರೂ ರಸ್ತೆ ಬದಿಯಲ್ಲಿ ಕಸ ಹಾಕುವುದರಿಂದ ಬೇಸತ್ತಿರುವ ನಗರಸಭೆ ಸಿಬ್ಬಂದಿ ‘ಇಲ್ಲಿ ನಿಮ್ಮ ಮನೆಯ ಕಸ ತಂದು ಹಾಕಿದರೆ ನಿಮ್ಮ ವಂಶ ನಿರ್ವಂಶವಾಗುತ್ತದೆ’ ಎಂದು ಫಲಕವನ್ನೂ ಅಳವಡಿಸಿದ್ದಾರೆ. ಈ ಎಚ್ಚರಿಕೆಯ ನಾಮಫಲಕ ಅಳವಡಿಸಿದ್ದರೂ ಕಸ ಬೀಳುವುದು ನಿಂತಿಲ್ಲ. ಫಲಕ ಅಳವಡಿಸಿರುವ ವಿದ್ಯುತ್ ಕಂಬದ ಬುಡಕ್ಕೆ ಕಸ ಹಾಕಲಾಗುತ್ತಿದೆ. ಇದು ನಿವಾಸಿಗಳಲ್ಲಿ ಬೇಸರ ತರಿಸಿದೆ.

ಗಾಡಿ ಬಂದರೂ ರಸ್ತೆಗೆ ಕಸ: ಕವಿತಾ ಶೇಖರ್

‘ಸಮಯಕ್ಕೆ ಸರಿಯಾಗಿ ಕಸದ ವಾಹನ ವಾರ್ಡ್‌ನಲ್ಲಿ‌ ಸಂಚಾರ ಮಾಡುತ್ತಿದೆ. ಆದರೂ ಕೆಲವರು ಕೆಲಸದ ನಿಮಿತ್ತ ಮನೆಯಿಂದ  ಹೋಗುವವರು ಅಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ತೊಂದರೆಯಾಗಿದೆ’ ಎಂದು ನಗರಸಭೆ ಸದಸ್ಯೆ ಕವಿತಾ ಶೇಖರ್ ಹೇಳಿದರು. ಈ ವಾರ್ಡ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ವಾಸವಿದ್ದು ಊಟ ಪಾರ್ಸಲ್ ತಂದು ತಿನ್ನುತ್ತಾರೆ. ಬೆಳಿಗ್ಗೆ ಅದನ್ನು ಕಸದ ಗಾಡಿಗೆ ಕೊಡದೆ ಬಿಸಾಡುತ್ತಾರೆ. ಸ್ವಚ್ಛತೆ ಕಾಪಾಡಲು ನಗರಸಭೆ ಎಲ್ಲಾ ಸೌಲಭ್ಯ ನೀಡಿದ್ದರೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು. ‘ಸ್ಕೂಟರ್‌ಲ್ಲಿ‌ ಬಂದು‌ ಕಸ ಬಿಸಾಡುವವರಿಗೆ ದಂಡ ವಿಧಿಸಲಾಗುತ್ತು. ಕಸ ಬಿಸಾಡುವ ಜಾಗವನ್ನು ಸ್ವಚ್ವಗೊಳಿಸಿ ರಂಗೋಲಿ ಹಾಕಿ ಜಾಗೃತಿ‌ ಮೂಡಿಸಲಾಗಿತ್ತು. ಈಗ ಎಲ್ಲಾ ಕಡೆ ಎಚ್ಚರಿಕೆಯ ಫಲಕ ಅಳವಡಿಸಿದ್ದೇವೆ. ಆದರೂ ಜನ ಅದನ್ನೂ ನೋಡದೆ ಕಸ ಹಾಕುತ್ತಿದ್ದಾರೆ.ಬಡಾವಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದರೆ ನಗರಸಭೆ ಜತೆಗೆ ಸಾರ್ವಜನಿಕರೂ ಸಹಕಾರ ನೀಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.