ADVERTISEMENT

ಚಿಕ್ಕಮಗಳೂರು: ದರ್ಗಾ ಆವರಣದಲ್ಲಿ ಟೈಲ್ಸ್‌ ಅಳವಡಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 23:26 IST
Last Updated 6 ಜನವರಿ 2025, 23:26 IST
ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು
ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು   

ಚಿಕ್ಕಮಗಳೂರು: ನಗರದ ಕೋಟೆ ಬಡಾವಣೆಯಲ್ಲಿನ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ ಆವರಣದಲ್ಲಿ ಟೈಲ್ಸ್‌ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದು, ಇದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಸೋಮವಾರ ದರ್ಗಾ ಬಳಿ ಜಮಾಯಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಮುತ್ತಿಗೆ ಹಾಕಲು ಯತ್ನಿಸಿದರು. 

ವಿವಾದಿತ ಜಾಗ ಆಗಿರುವುದರಿಂದ ಕಾಮಗಾರಿ ನಿರ್ವಹಿಸಬಾರದು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಎಲ್ಲರನ್ನು ತಡೆದರು. ನಗರಸಭೆ ಬಿಜೆಪಿ ಸದಸ್ಯರು ಸೇರಿ ಹಲವರು ಕೆಲಕಾಲ ಕೋಟಿ ಆಂಜನೇಯಸ್ವಾಮಿ ದೇವಾಲಯದ ಎದುರು ಕುಳಿತು ಪ್ರತಿಭಟನೆ ನಡೆಸಿದರು. 

ADVERTISEMENT

ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಸದಸ್ಯರಾದ ಕವಿತಾ ಶೇಖರ್, ಮಧುಕುಮಾರ್ ರಾಜ್ ಅರಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ದರ್ಗಾ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

‘ಹಿಂದಿನಿಂದಲೂ ಅಲ್ಲಿ ಗೋರಿಗಳಿದ್ದು, ಟೈಲ್ಸ್ ಹಾಕಲು ಹೋದಾಗ ಆಕ್ಷೇಪ ವ್ಯಕ್ತವಾಗಿದೆ. 1924–25ನೇ ಸಾಲಿನಿಂದ ನಗರಸಭೆಯಲ್ಲಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ರಿಜಿಸ್ಟ್ರರ್‌ನಲ್ಲಿ ಮಸೀದಿ, ಗೋರಿಗಳು ಎಂದೇ ಬರುತ್ತಿದೆ. 2017ರಲ್ಲಿ ನಗರಸಭೆಯಿಂದ ಇ–ಸ್ವತ್ತು ಕೂಡ ಪಡೆದಿದ್ದಾರೆ’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸ್ಪಷ್ಟಪಡಿಸಿದರು.

‘ಹೊಸದಾಗಿ ಕಟ್ಟಡ ಕಟ್ಟಬೇಕಾದರೆ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ನೆಲಕ್ಕೆ ಟೈಲ್ಸ್ ಅಳವಡಿಕೆಗೆ ಯಾವುದೇ ಅನುಮತಿ ಬೇಕಾಗುವುದಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ಸ್ಪಷ್ಟಪಡಿಸಿದೆ. ಯಾವ ನ್ಯಾಯಾಲಯದಲ್ಲೂ ತಡೆಯಾಜ್ಞೆ ಕೂಡ ಇಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.