
ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆ ರೈಲು ಮಾರ್ಗದ ಜಂಕ್ಷನ್‌ಗಳಾದರೆ, ಮಲೆನಾಡು ಭಾಗದಲ್ಲಿ ರೈಲು ಸಂಪರ್ಕವೇ ಇಲ್ಲ. ಇರುವ ರೈಲು ನಿಲ್ದಾಣಗಳು ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ.
ಜಿಲ್ಲಾ ಕೇಂದ್ರದ ರೈಲು ನಿಲ್ದಾಣದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದ್ದು, ಈಗಂತೂ ಕುಡಿಯುವ ನೀರು ಸೇರಿ ಯಾವುದೇ ಮೂಲಸೌಕರ್ಯ ಇಲ್ಲವಾಗಿದೆ. ನಿಲ್ದಾಣದ ಒಳಗೆ ಹೋಗುವ ದಾರಿ ಯಾವುದು ಎಂಬುದೇ ಗೊತ್ತಾಗದಂತಾಗಿದೆ.
ಒಳಭಾಗದಲ್ಲಿ ಶೌಚಾಲಯ ದುರ್ನಾತದ ತಾಣವಾಗಿದೆ. ಕಸ ಹಾಕುವ ಡಬ್ಬಗಳು ಮುರಿದು ಹೋಗಿವೆ. ನಡೆದಾಡುವ ಪಾದಚಾರಿ ಮಾರ್ಗವನ್ನೂ ಕಿತ್ತು ಹಾಕಿದ್ದು, ಪ್ರಯಾಣಿಕರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಇನ್ನು ಹೋದ ಭಾಗದಲ್ಲಿ ಗಾರ್ಡನ್ ಇದ್ದು, ಅದು ನೀರು ಕಂಡು ಎಷ್ಟೋ ದಿನಗಳವಾಗಿದೆ. ನಿರ್ವಹಣೆ ಇಲ್ಲದೆ ಗಾರ್ಡನ್ ಸಂಪೂರ್ಣ ಸೊರಗಿ ಹೋಗಿದೆ. ರೈಲು ಹತ್ತಲು ಬರುವ ಮತ್ತು ರೈಲಿನಿಂದ ಇಳಿದು ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ನಿಲ್ದಾಣಕ್ಕೆ ಬರುವ ರಸ್ತೆ ಗುಂಡಿಮಯವಾಗಿತ್ತು. ಸದ್ಯಕ್ಕೆ ರಸ್ತೆ ಅಭಿವೃದ್ಧಿಯಾಗಿದೆ. ಆದರೆ, ಸಂಜೆಯಾದರೆ ಮದ್ಯದ ಅಡ್ಡೆಯಾಗಿ ರಸ್ತೆ ಮಾರ್ಪಡುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ನಿಲ್ದಾಣದಲ್ಲಿ ರಿಪೇರಿ ಕೆಲಸ ನಡೆಯುತ್ತಿದೆ. ಹಾಗೆಂದ ಮಾತ್ರಕ್ಕೆ ಪ್ರಯಾಣಿಕರಿಗೆ ಮೂಲಸೌಕರ್ಯ ಇಲ್ಲದಂತೆ ಮಾಡಬಾರದು. ಕನಿಷ್ಠ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ನಾಗರಾಜ್, ಜೆ.ಓ.ಉಮೇಶ್‌ಕುಮಾರ್
ಚಾವಣಿ ಇಲ್ಲ ಸ್ವಚ್ಛತೆಯಿಲ್ಲ
ಕಡೂರು: ತಾಲ್ಲೂಕಿನಲ್ಲಿ ಕಡೂರು ಮತ್ತು ಬೀರೂರು ಎರಡೂ ಜಂಕ್ಷನ್ ನಿಲ್ದಾಣಗಳಾಗಿದ್ದು ದೇವನೂರು ಬಳ್ಳೇಕೆರೆ ನಿಗದಿತ ರೈಲುಗಳ ನಿಲುಗಡೆಯ ನಿಲ್ದಾಣಗಳಾಗಿವೆ. ಕಡೂರು ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರಲ್ಲಿ ಬಹುತೇರು ಚಿಕ್ಕಮಗಳೂರು ಮಂಗಳೂರು ಧರ್ಮಸ್ಥಳ ಸೇರಿ ದೂರದ ಊರುಗಳಿಗೆ ತೆರಳುತ್ತಾರೆ. ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಆಗಬೇಕಿದೆ. ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಒಂದೇ ಟಿಕೆಟ್ ಕೌಂಟರ್ ಇದ್ದು ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳು ಬಂದು ನಿಂತಾಗ ಪ್ರಯಾಣಿಕರು ಪರದಾಡುತ್ತಾರೆ. ವೆಂಡಿಂಗ್ ಮಷೀನ್ ಬಳಿ ಟಿಕೆಟ್ ವಿತರಿಸಲು ಮತ್ತೊಬ್ಬರನ್ನು ನೇಮಿಸುವ ಅಗತ್ಯವಿದೆ. ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಬಿಸಿಲು ಮಳೆ ಗಾಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಚಾವಣಿ ಅಳವಡಿಸುವ ತುರ್ತು ಅಗತ್ಯವೂ ಇದೆ. ಬೀರೂರು ನಿಲ್ದಾಣದಲ್ಲಿ ಕೂಡ ಇದೇ ಅವಸ್ಥೆ ಇದೆ. ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಇರುವ ಶೌಚಾಲಯ ನಿರ್ವಹಣೆ ಕೊರತೆಯಿಂದ ನರಳುತ್ತಿದೆ. ನಿಲ್ದಾಣದ ಸುತ್ತಮುತ್ತಲು ಪ್ರತಿವಾರ ಬಹಳಷ್ಟು ಕಸ ಸಂಗ್ರಹವಾಗುತ್ತಿದೆ. ನಿಲ್ದಾಣದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಬೀರೂರು ರೈಲು ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ. ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ನೆಪ ಮಾತ್ರವಾಗುತ್ತಿದೆ. 2 3 ಮತ್ತು 4ನೇ ಪ್ಲಾಟ್‌ಫಾರ್ಮ್‌ನಲ್ಲಿ ಕುಡಿಯುವ ನೀರಿನ ಸಮರ್ಪಕ ಸೌಲಭ್ಯ ಕಲ್ಪಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹ. ಈ ರೈಲು ನಿಲ್ದಾಣದಿಂದ ದೆಹಲಿ ಮುಂಬೈ ಜೈಪುರ್ ಜೋದ್ಪುರ ಬಿಕಾನೆರ್ ಅಹಮದಾಬಾದ್ ಸೇರಿ ದೇಶದ ಬಹಳಷ್ಟು ಮಹಾನಗರಗಳಿಗೆ ಸಂಪರ್ಕವಿದೆ. ಇಲ್ಲಿ ಸಂಪರ್ಕ ಕ್ರಾಂತಿ ರೈಲುಗಳ ನಿಲುಗಡೆ ಬೇಡಿಕೆ ಇದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದ್ದರೂ ನಿಲುಗಡೆ ಇಲ್ಲ.
ತರೀಕೆರೆ ನಿಲ್ದಾಣ: ಸೌಕರ್ಯಗಳ ಕೊರತೆ
ತರೀಕೆರೆ: ಶಿವಮೊಗ್ಗ ಬೆಂಗಳೂರು ಮೈಸೂರು ತಿರುಪತಿ ಮೊದಲಾದ ಕಡೆಗಳಿಂದ ಪ್ರಯಾಣಿಕರಿಗೆ ತರೀಕೆರೆ ರೈಲು ನಿಲ್ದಾಣ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ದಿನದಿಂದಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ರೈಲು ಗಾಡಿಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಆದರೆ ಇಲ್ಲಿನ ಪ್ರಯಾಣಿಕರಿಗೆ ಶುದ್ಧವಾದ ಕುಡಿಯುವ ನೀಡಿನ ವ್ಯವಸ್ಥೆ ಇಲ್ಲ. ಶೌಚಾಲಯಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ರೈಲು ನಿಲ್ದಾಣದ ಪ್ಲಾಟ್ ಫಾರಂ–2ಕ್ಕೆ ಬರುವ ಮತ್ತು ಹೋಗುವ ಅಂಗವಿಕಲ ವೃದ್ಧರು ಮತ್ತು ಅನಾರೋಗ್ಯ ಪೀಡಿತರು ಓಡಾಡಲು ಸರಿಯಾದ ರ‍್ಯಾಂಪ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಪ್ಲಾಟ್ ಫಾರಂನಿಂದ ಮುಖ್ಯ ರಸ್ತೆಗೆ ಸಂಪರ್ಕಿಸಲು ಸರಿಯಾದ ವ್ಯವಸ್ಥೆ ಇಲ್ಲ. ಈ ಎರಡೂ ಪ್ಲಾಟ್ ಫಾರಂಗಳಿಗೆ ಪ್ರತಿನಿತ್ಯ 20ಕ್ಕೂ ಹೆಚ್ಚು ರೈಲು ಗಾಡಿಗಳು ತಿರುಗಾಡುತ್ತಿದ್ದು ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಪ್ಲಾಟ್‌ಫಾರಂನಿಂದ ಮತ್ತೊಂದು ಕಡೆಗೆ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕು. ವೃದ್ಧರು ರೋಗಿಗಳು ಪರದಾಡುತ್ತಿದ್ದು ಲಿಫ್ಟ್ ವ್ಯವಸ್ಥೆ ಮಾಡಬೇಕು ಎಂಬುದು ಪ್ರಯಾಣಿಕರ ಆಗ್ರಹ. ರಾತ್ರಿ ವೇಳೆ ಸುಮಾರು 11ಕ್ಕೂ ಹೆಚ್ಚು ರೈಲು ಸಂಚರಿಸುತ್ತಿದ್ದು ಈ ರೈಲುಗಾಡಿಗಳಿಂದ ಬರುವ ಮತ್ತು ರೈಲು ಹತ್ತುವ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಸೂಕ್ತ ಪೋಲೀಸ್ ವ್ಯವಸ್ಥೆ ಮಾಡಿಸಬೇಕು ಎಂಬುದು ಅವರ ಮನವಿ.
ಅಜ್ಜಂಪುರ: ಹಲವು ಕೊರತೆ
ಅಜ್ಜಂಪುರ: ಪಟ್ಟಣದ ರೈಲ್ವೆ ನಿಲ್ದಾಣ ಸುಧಾರಿಸಿಲ್ಲ. ಹತ್ತು ಹಲವು ಕೊರತೆಗಳನ್ನು ಹೊಂದಿದೆ. ಅಗತ್ಯ ಸೌಲಭ್ಯ -ಸೌಕರ್ಯ ಇಲ್ಲದೆ ರೈಲ್ವೆ ಪ್ರಯಾಣಿಕರು ಪರದಾಡುವಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ವಿಶ್ರಾಂತಿ ಗೃಹ ಮಹಿಳೆಯರ ನಿರೀಕ್ಷಣಾ ಕೊಠಡಿ ಫ್ಲಾಟ್ ಫಾರಂನಲ್ಲಿ ತಗಡಿನ ಚಾವಣಿ ಇದೆ. ಎರಡು ಪ್ಲಾಟ್ ಫಾರಂ ನಡುವಿನ ಮೇಲ್ಸೇತುವೆಗೆ ಲಿಫ್ಟ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ವಾಹನಗಳ ನಿಲುಗಡೆ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ರೈಲ್ವೆ ಹಳಿ ಹಾದು ಹೋಗಿರುವ ಅಜ್ಜಂಪುರ- ಹೊಸದುರ್ಗ ರಾಜ್ಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಇದು ಅವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಮೈಸೂರು-ಸೋಲ್ಲಾಪುರ ಬೆಂಗಳೂರು-ವಿಜಾಪುರ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.