
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉಗಮವಾಗುವ ಪ್ರಮುಖ ಐದು ನದಿಗಳು ಅರ್ಧ ಕರ್ನಾಟಕಕ್ಕೆ ಜೀವನಾಡಿಯಾಗಿವೆ. ಆರಂಭದಲ್ಲಿ ಸಿಗುವ ಪಟ್ಟಣಗಳ ತ್ಯಾಜ್ಯ ನೀರು ಅಲ್ಲಲ್ಲಿ ನದಿ ಸೇರಿ ಕಲಷಿತವಾಗುತ್ತಿವೆ.
ತುಂಗಾ, ಭದ್ರಾ, ಯಗಚಿ, ಹೇಮಾವತಿ, ವೇದೇವಾತಿ ನದಿಗಳು ಜಿಲ್ಲೆಯಲ್ಲೇ ಹುಟ್ಟಿ ಹರಿಯುತ್ತಿವೆ. ಪಟ್ಟಣಗಳ ಕೊಳಚೆ ನೀರು ನದಿಗಳನ್ನು ಸೇರುತ್ತಿವೆ. ಇವುಗಳ ಜತೆಗೆ ಕಾಫಿ ಪಲ್ಪರ್ ನೀರು ಕೂಡ ಅಲ್ಲಲ್ಲಿ ನದಿಯ ಒಡಲು ಸೇರುತ್ತಿದೆ. ಕೊಳಚೆ ನೀರನ್ನು ನದಿಗಳಿಗೆ ನೇರವಾಗಿ ಹರಿಸುತ್ತಿರುವುದರಿಂದ ನದಿಗಳಿಗೆ, ಜಲಚರಗಳಿಗೆ ತೊಂದರೆ ಉಂಟಾಗಿದೆ.
ಚುರ್ಚೆ ಗುಡ್ಡದಲ್ಲಿ ಉಗಮವಾಗುವ ಯಗಚಿ ನದಿ ನಗರದಲ್ಲಿ ಹಾದು ಹೋಗುತ್ತದೆ. ಉಪ್ಪಳ್ಳಿಯ ತನಕ ಸ್ವಚ್ಛ ಹಾಗೂ ಶಾಂತವಾಗಿ ಹರಿಯುವ ಯಗಚಿ ಬಳಿಕ ಗಬ್ಬೆದ್ದು ನಾರುತ್ತಿದೆ. ಕೊಳಚೆ ನೀರು, ಚರಂಡಿ ನೀರು ಇದೇ ಯಗಚಿ ಹಳ್ಳಕ್ಕೆ ಸೇರುತ್ತಿದೆ.
ಹಳ್ಳದ ಬದಿಯಲ್ಲಿ ಕಸದ ರಾಶಿ, ಕೋಳಿ ಅಂಗಡಿ ತ್ಯಾಜ್ಯ, ತಲೆಕೂದಲು ಬೀಳುವುದು ಸಾಮಾನ್ಯವಾಗಿದೆ. ಇದೇ ನೀರು ಮುಂದೆ ಬೇಲೂರಿನ ಯಗಚಿ ಜಲಾಶಯ ಸೇರುತ್ತಿದೆ. ಅಲ್ಲಿಂದಲೇ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೈಪ್‌ಲೈನ್ ಮೂಲಕ ಬರುತ್ತಿದೆ.
ಶುದ್ಧೀಕರಿಸಿ ನಗರದ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಗರದಿಂದ ಮುಂದೆ ಸಾಗಿದರೆ ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳಲು ಇದೇ ನೀರನ್ನು ರೈತರು ಜಮೀನಿಗೆ ಬಳಕೆ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಸುತ್ತಮುತ್ತಲ ಹೊಲಗಳಿಗೆ ಕೊಳಚೆ ನೀರೇ ಗತಿಯಾಗಿದೆ.
ಪೂರಕ ಮಾಹಿತಿ: ಕೆ. ನಾಗರಾಜ್, ಕೆ.ಎನ್. ರಾಘವೇಂದ್ರ, ರವಿಕುಮಾರ್ ಶೆಟ್ಟಿಹಡ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.