ADVERTISEMENT

ಬಿಳಿ ಹುಳು ಕಾಟ, ನುಸಿ ರೋಗ ಬಾಧೆ: ನೆರವಿಗೆ ಕಾದಿರುವ ತೆಂಗು ಬೆಳೆಗಾರರು

ವಿಜಯಕುಮಾರ್ ಎಸ್.ಕೆ.
Published 7 ಜನವರಿ 2026, 4:48 IST
Last Updated 7 ಜನವರಿ 2026, 4:48 IST
ತೆಂಗಿನ ತೋಟ ಹಾಳಾಗಿರುವುದು (ಸಂಗ್ರಹ ಚಿತ್ರ)
ತೆಂಗಿನ ತೋಟ ಹಾಳಾಗಿರುವುದು (ಸಂಗ್ರಹ ಚಿತ್ರ)   

ಚಿಕ್ಕಮಗಳೂರು: ಬಿಳಿ ಹುಳು ಕಾಟ, ನುಸಿ ರೋಗ ತೆಂಗು ಬೆಳೆಯನ್ನು ಇನ್ನಿಲ್ಲದೆ ಕಾಡುತ್ತಿದ್ದು, ತೆಂಗಿನ ತೋಟಗಳೇ ನಾಶದ ಅಂಚಿಗೆ ಬಂದಿವೆ. ತೋಟಗಳನ್ನು ಉಳಿಸಲು ರೈತರು ಪ್ರಯತ್ನ ನಡೆಸುತ್ತಿದ್ದು, ಸರ್ಕಾರ ನೆರವಿಗೆ ಬರಬೇಕು ಎಂಬ ಒತ್ತಾಯ ಜಿಲ್ಲೆಯ ಬಯಲು ಸೀಮೆ ರೈತರಲ್ಲಿ ಹೆಚ್ಚಾಗಿದೆ.

ರೋಗೋಸ್ ವೈಟ್ ಫ್ಲೈ ಎಂಬುದು ಸಣ್ಣ ಗಾತ್ರದ ಕೀಟ. ತೆಂಗಿನ ಗರಿಗಳಲ್ಲಿ ಮೆದು ಭಾಗದಲ್ಲಿ ಕೊರೆದು ರಸ ಹೀರುತ್ತವೆ. ಇದರಿಂದ ಗರಿಗಳು ಬಿಳಿಯ ಬಣ್ಣಕ್ಕೆ ತಿರುಗುತ್ತಿವೆ. ಕೀಟಗಳು ಅಂಟು ದ್ರವ ಹೊರ ಹಾಕುತ್ತಿವೆ. ಇದರಿಂದ ಎರಡು ಗರಿಗಳು ಅಂಟಿಕೊಂಡು ಕೂಡ ಹೊರ ಹಾಕುತ್ತಿದ್ದು, ಗರಿಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಕ್ರಮೇಣ ಗರಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.

ಈ ಕೀಟಗಳು ಒಮ್ಮೆ ತೋಟಕ್ಕೆ ದಾಳಿ ಇಟ್ಟರೆ ತೆಂಗಿನ ಗಿಡಗಳನ್ನು ನಾಶ ಮಾಡಿ ಮುಂದಿನ ತೋಟಕ್ಕೆ ಹಾರುತ್ತಿವೆ. ಈ ಕೀಟದ ದಾಳಿಗೆ ಸಿಲುಕಿದ ತೋಟಗಳಲ್ಲಿ ಇಳುವರಿ ಸಂಪೂರ್ಣ ಕುಸಿತವಾಗುತ್ತಿದ್ದು, ಉಳಿದ ಕಾಯಿಗಳ ಆಕಾರ ಕೂಡ ಬದಲಾಗುತ್ತವೆ.

ADVERTISEMENT

ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ತೆಂಗಿನ ತೋಟಗಳಿದ್ದು, 49 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗಿನ ಮರಗಳಿವೆ. ಈ ರೋಗೋಸ್ ವೈಟ್ ಫ್ಲೈ ಬಾಧೆ ಹಲವೆಡೆ ವ್ಯಾಪಿಸಿದ್ದು, ರೈತರಲ್ಲಿ ಆತಂಕ ಹುಟ್ಟಿಸಿದೆ. ಈ ಭಾಗದಲ್ಲಿ ಹೆಚ್ಚಾಗಿ ಒಣ ಹವೆ ಇರುವುದರಿಂದ ರೋಗೋಸ್ ವೈಟ್ ಫ್ಲೈ ಕೀಟದ ವಂಶಾಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಬಳಸುವ ಔಷಧ ಕೂಡ ದುಬಾರಿಯಾಗಿದ್ದು, ಹಲವು ರೈತರು ತೋಟ ನಿರ್ವಹಣೆಯನ್ನೇ ಬಿಟ್ಟಿದ್ದಾರೆ.

ಬಿಳಿ ನೊಣ ಬಾದೆಗೆ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ತೋಟಗಳನ್ನು ಆವರಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಉತ್ಪಾದನೆ ಮೇಲೆ ವ್ಯತಿರಕ್ತ ಪರಿಣಾಮ ಬೀರಿದೆ ಎಂದು ರೈತರು ಹೇಳುತ್ತಾರೆ.

ಕಡೂರಿನ ಎಳನೀರಿಗೆ ಮುಂಬೈ ಮತ್ತು ದೆಹಲಿಯಲ್ಲಿ ಬೇಡಿಕೆ ಇದೆ. ದೆಹಲಿಯಿಂದ ಲಾರಿಗಳನ್ನು ತಂದು ನಿಲ್ಲಿಸಿಕೊಂಡು ಸಾಗಿಸಲಾಗುತ್ತಿದೆ. ತೋಟದಲ್ಲೆ ಒಂದು ಎಳನೀರಿಗೆ ಕನಿಷ್ಠ ₹30 ದೊರಕುತ್ತಿದೆ. ಆದರೆ, ಫಸಲೇ ಇಲ್ಲವಾಗಿದ್ದು, ರೈತರು ಬರಿಗೈ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನುಸಿ ರೋಗ ಮತ್ತು ಬಿಳಿಹುಳು ಕಾಟದಿಂದ ರೈತರು ತೊಂದರೆಗೆ ಸಿಲುಕಿದ್ದು, ರಾಜ್ಯ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು. ತೆಂಗು ಬೆಳೆಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂಬುದು ರೈತರ ಒತ್ತಾಯ.

ಮರದ ಬುಡದಲ್ಲಿ ರೋಗ

ಕಡೂರು ತಾಲ್ಲೂಕಿನ ಯಗಟಿ ಸುತ್ತಮುತ್ತಲ ಪ್ರದೇಶದಲ್ಲಿ ಈಗ ತೆಂಗಿನ ಮರಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಬುಡದಲ್ಲಿ ಕೆಂಪು ರಸ ಸೂಸುವ ರೋಗ ಕಾಡುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುವ ಎಲ್ಲಾ ಔಷಧಿ ಸೇರಿ ಉಪಕ್ರಮಗಳನ್ನು ಕೈಗೊಂಡರೂ ರೋಗ ಹತೋಟಿಗೆ ಬರುತ್ತಿಲ್ಲ. ಮರದಿಂದ ಮರಕ್ಕೆ ರೋಗ ಹಬ್ಬುತ್ತಿದ್ದು ಕ್ರಮೇಣ ಗಿಡಗಳೇ ನಾಶವಾಗುತ್ತಿವೆ. ತೆಂಗಿನ ಬೆಳೆಗೆ ಒಂದಿಲ್ಲೊಂದು ರೋಗ ಬಾಧೆ ಕಾಡುತ್ತಲೇ ಇದೆ ಎಂದು ಯಗಟಿ ಗ್ರಾಮದ ರೈತ ಪ್ರಸನ್ನ ‘‍ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.