ADVERTISEMENT

ಮೂಡಿಗೆರೆ | ಕೊಯ್ಲಿಗೂ ಮೊದಲೇ ಅರಳಿದ ಕಾಫಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:37 IST
Last Updated 20 ಜನವರಿ 2026, 2:37 IST
ಮೂಡಿಗೆರೆ ತಾಲ್ಲೂಕಿನ ತಳವಾರ ಗ್ರಾಮದಲ್ಲಿ ಕಳೆದ ವಾರ ಸುರಿದ ಮಳೆಗೆ ಹೂವಾಗಿರುವ ಕಾಫಿ
ಮೂಡಿಗೆರೆ ತಾಲ್ಲೂಕಿನ ತಳವಾರ ಗ್ರಾಮದಲ್ಲಿ ಕಳೆದ ವಾರ ಸುರಿದ ಮಳೆಗೆ ಹೂವಾಗಿರುವ ಕಾಫಿ   

ಮೂಡಿಗೆರೆ: ತಾಲ್ಲೂಕಿನಾದ್ಯಂತ ವಾರದ ಹಿಂದೆ ಸುರಿದ ಮಳೆಯು ಕಾಫಿ ಹೂ ಅರಳುವಂತೆ ಮಾಡಿದ್ದು ಮುಂದಿನ ವರ್ಷದ ಫಸಲು ನಷ್ಟವಾಗುವ ಭೀತಿ ಎದುರಾಗಿದೆ.

ಡಿಸೆಂಬರ್‌ನಿಂದ ಆರಂಭವಾಗಿರುವ ಕಾಫಿ ಕೊಯ್ಲು ಶೇ 60ರಷ್ಟು ಮುಕ್ತಾಯ ಕಂಡಿದೆ. 40ರಷ್ಟು ಕೊಯ್ಲು ಬಾಕಿ ಇರುವಾಗಲೇ ಮಳೆ ಸುರಿದ ಪರಿಣಾಮ ಕಾಫಿ ಹೂ ಅರಳಿದೆ. ಇದರಿಂದ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಲಾಗದೇ, ಅರಳಿ ನಿಂತಿರುವ ಕಾಫಿಯನ್ನು ಕೊಯ್ಲು ಮಾಡಲಾಗದೇ ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ.

ಮಳೆಯಿಂದ ಬಹುತೇಕ ತೋಟಗಳಲ್ಲಿ ಕಾಫಿ ಹೂವು ಅರಳಿ ನಿಂತಿದೆ. ಇದರಿಂದ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಕಾರ್ಮಿಕರಿಗೂ ಕೂಲಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ವಾಡಿಕೆಯಂತೆ ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕಾಫಿ ಹೂವಿನ ಮಳೆ ಆಗುತ್ತದೆ. ಆದರೆ ಈ ಬಾರಿ ಜನವರಿ ಮಧ್ಯದಲ್ಲಿಯೇ ಮಳೆ ಆಗಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ.

ADVERTISEMENT

ಈಗ ಅರಳಿ ನಿಂತಿರುವ ಕಾಫಿ ಹೂವಿಗೆ ಮುಂದಿನ 15 ದಿನಗಳ ಒಳಗಾಗಿ ನೀರಾಯಿಸದಿದ್ದರೆ ಅರಳಿರುವ ಕಾಫಿ ಹೂವು ಸುಟ್ಟು ಹೋಗುತ್ತದೆ. ಮಳೆ ಆರಂಭವಾಗುವವರೆಗೂ ಕನಿಷ್ಠ 20 ದಿನಗಳಿಗೊಮ್ಮೆ ನೀರು ಹಾಯಿಸ ಬೇಕಾಗುತ್ತದೆ. ಅಷ್ಟೊಂದು ಪ್ರಮಾಣದ ನೀರಿನ ಮೂಲ ಇಲ್ಲದಿರುವುದು ಒಂದೆಡೆಯಾದರೆ, ನೀರಾಯಿಸುವ ವೆಚ್ಚ ಕೂಡ ದುಬಾರಿಯಾಗುತ್ತದೆ. ಈಗ ಅರಳಿರುವ ಕಾಫಿ ಹೂವನ್ನು ಉಳಿಸಿಕೊಳ್ಳಲು ಹಿನ್ನೀರು ಹಾಯಿಸುವುದು ಬೆಳೆಗಾರರಿಗೆ ಅನಿವಾರ್ಯ. ನೀರಿನ ವ್ಯವಸ್ಥೆ ಇಲ್ಲದ ಬೆಳೆಗಾರರಿಗೆ ಹೂವಾಗಿರುವ ಕಾಫಿಯು ಕೈತಪ್ಪಲಿದೆ.

‘ಪ್ರಸಕ್ತ ಸಾಲಿನಲ್ಲಿ ಕಾಫಿಗೆ ಉತ್ತಮ ಬೆಲೆ ಇದ್ದರೂ ಶೇ 40ರಷ್ಟು ಬೆಳೆ ಕಡಿಮೆ ಆಗಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಅದರ ನಡುವೆ ಮುಂದಿನ ಫಸಲಿಗೂ ಈ ಬಾರಿ ಕಾಫಿ ಹೂವಿನ ಮಳೆಯು ಅವಧಿಗೆ ಮುನ್ನವೇ ಸುರಿದಿರುವುದರಿಂದ ರೈತರು ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಶೇ 50 ರಷ್ಟನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ಅವಧಿಗೆ ಮುನ್ನವೇ ಕಾಫಿ ಹೂವಾಗಿರುವುದರಿಂದ ಮಳೆಯಾಗುವವರೆಗೂ ಕನಿಷ್ಠ 4 ಬಾರಿ ನೀರು ಹಾಯಿಸಬೇಕಾದ ಸ್ಥಿತಿ ಎದುರಾಗುತ್ತದೆ. ಕಾಫಿ ಕೊಯ್ಲು ಆಗದ ತೋಟಗಳಲ್ಲಿ ಕಾಫಿ ಕೊಯ್ಲು ಮಾಡುವಾಗ ಹೂವಿಗೆ ಹಾನಿಯಾಗುವುದರಿಂದ ಬಹುತೇಕ ಹೂವು ನಷ್ಟವಾಗುತ್ತವೆ. ಇದು ಮುಂದಿನ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಐದು ವರ್ಷಗಳಿಂದಲೂ ಕಾಫಿ ಬೆಳೆಗಾರರು ಬೆಳೆ ಅಥವಾ ಬೆಲೆಯಿಂದ ನಷ್ಟ ಅನುಭವಿಸುವಂತಾಗುತ್ತಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಜಯರಾಮ್ ಅಬಚೂರು.

ಹೂವಿನಿಂದ ಹಣ್ಣಾಗಿರುವ ಕಾಫಿ ಕೊಯ್ಲಿಗೂ ಅಡ್ಡಿಯಾದ ಹೂವು ಫಸಲು ಉಳಿಸಿಕೊಳ್ಳಲು ನೀರು ಹಾಯಿಸುವುದು ಅನಿವಾರ್ಯತೆ ಸೃಷ್ಟಿ ನೀರಿನ ವ್ಯವಸ್ಥೆಯಿಲ್ಲದ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.