ADVERTISEMENT

ಶೃಂಗೇರಿ: ಬೇಗಾರಿನಲ್ಲಿ 90 ಮಂದಿಗೆ ಅವಕಾಶ

ಕೋವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 3:13 IST
Last Updated 6 ಜೂನ್ 2021, 3:13 IST
ಬೇಗಾರು ವಸತಿ ನಿಲಯದ ಕೋವಿಡ್ ಆರೈಕೆ ಕೇಂದ್ರದ ಆಹಾರ ಗುಣಮಟ್ಟವನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲನೆ ಮಾಡಿದರು.
ಬೇಗಾರು ವಸತಿ ನಿಲಯದ ಕೋವಿಡ್ ಆರೈಕೆ ಕೇಂದ್ರದ ಆಹಾರ ಗುಣಮಟ್ಟವನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲನೆ ಮಾಡಿದರು.   

ಶೃಂಗೇರಿ: ‘ಬೇಗಾರು ವಸತಿ ಶಾಲೆಯಲ್ಲಿ 90 ಮಂದಿ ಸೋಂಕಿತರಿಗೆ ಅವಕಾಶ ಇದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ನೆಮ್ಮಾರು ವಸತಿ ಶಾಲೆಯಲ್ಲಿ ಆರೈಕೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಶೃಂಗೇರಿಯ ಬೇಗಾರಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳೊಂದಿಗೆ ಅವರು ಮಾತನಾಡಿದರು. ‘ಕೋವಿಡ್ ಸೋಂಕು ಗುಣವಾಗುವಲ್ಲಿ ಔಷಧಿಯ ಪಾತ್ರ ಶೇ 30 ಇದ್ದರೆ, ಸೋಂಕಿತರ ಆತ್ಮಸ್ಥೈರ್ಯದ ಪಾಲು ಶೇ 70 ಇರುತ್ತದೆ. ನೀವೆಲ್ಲರೂ ಧೈರ್ಯದಿಂದ ಇದ್ದು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಶೀಘ್ರದಲ್ಲಿ ಗುಣಮುಖರಾಗಿ ಮನೆಗೆ ಸೇರುತ್ತೀರಿ’ ಎಂದು ಧೈರ್ಯತುಂಬಿದರು.

‘ಹದಿನಾಲ್ಕು ದಿನಗಳ ಕಾಲ ಧೈರ್ಯದಿಂದ ಇಲ್ಲಿದ್ದು, ಗುಣಮುಖರಾಗಿ ಹೊರ ಹೋದಾಗ ಸೋಂಕು ಹರಡುವುದು ತಪ್ಪುತ್ತದೆ. ಇದರಿಂದ ಸೋಂಕು ಪ್ರಸರಣ ತಡೆಗಟ್ಟಲು ಸಾಧ್ಯವಾಗಿ ನಿಮ್ಮ ಗ್ರಾಮ, ಊರು ಎಲ್ಲವೂ ಆರೋಗ್ಯ ಪೂರ್ಣವಾಗುವುದು. ಇಲ್ಲಿ ನಿಮಗೆ ಎಲ್ಲಾ ಸೌಕರ್ಯಗಳನ್ನೂ ಮಾಡಲಾಗಿದೆ. ಕೊರತೆ ಏನಾದರೂ ಕಂಡಲ್ಲಿ ನನ್ನನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.

ADVERTISEMENT

ಆರೈಕೆ ಕೇಂದ್ರದಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ಎಂಜಿನಿಯರ್ ವಚನ್ ಲಕ್ಷ್ಮಣಗೌಡ ಅವರ ನೇತೃತ್ವದಲ್ಲಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದ ಆಮ್ಲಜನಕ ಸಾಂದ್ರಕ ಮತ್ತು ಔಷಧಿಗಳು, ಚುಚ್ಚುಮದ್ದು, ಎನ್-95 ಮತ್ತು ಸರ್ಜಿಕಲ್ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್, ಸ್ಯಾನಿಟೈಸರ್‌ ಅನ್ನು ಎಲ್ಲಾ ಪ್ರಾಥಮಿಕ ಕೇಂದ್ರ, ಆರೈಕೆ ಕೇಂದ್ರಕ್ಕೆ ಶಾಸಕರು ಹಸ್ತಾಂತರಿಸಿದರು.

ಡಾ.ಟಿ.ಡಿ. ಮಂಜುನಾಥ್, ಡಿವೈಎಸ್ಪಿ ರಾಜು, ಪ್ರಭಾರ ತಹಶೀಲ್ದಾರ್ ಪರಮೇಶ್, ಇನ್‍ಸ್ಪೆಕ್ಟರ್ ರವಿ ಬಿ.ಎಸ್. ಬೇಗಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ, ಸದಸ್ಯ ಲಕ್ಷ್ಮೀಶ ಅಣ್ಕುಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.