ADVERTISEMENT

ದತ್ತ ಜಯಂತಿ: ಭಕ್ತರಿಂದ ಮಾಲೆಧಾರಣೆ

ಜಿಲ್ಲಾಡಳಿತದಿಂದಲೂ ಸಕಲ ಸಿದ್ಧತೆ; ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:06 IST
Last Updated 27 ನವೆಂಬರ್ 2025, 4:06 IST
ದತ್ತ ಜಯಂತಿ ಅಂಗವಾಗಿ ದತ್ತ ಭಕ್ತರು ಬುಧವಾರ ಮಾಲೆ ಧಾರಣೆ ಮಾಡಿದರು
ದತ್ತ ಜಯಂತಿ ಅಂಗವಾಗಿ ದತ್ತ ಭಕ್ತರು ಬುಧವಾರ ಮಾಲೆ ಧಾರಣೆ ಮಾಡಿದರು   

ಚಿಕ್ಕಮಗಳೂರು: ವಿಶ್ವ ಹಿಂದು ಪರಿಷತ್‌, ಬಜರಂಗದಳ, ಶ್ರೀರಾಮ ಸೇನೆಯಿಂದ ಆಚರಣೆಗೊಳ್ಳುವ ದತ್ತ ಜಯಂತಿಗೆ ಬುಧವಾರ ಚಾಲನೆ ದೊರೆತಿದೆ. ಮತ್ತೊಂದೆಡೆ ಜಯಂತಿ ಆಚರಣೆಗೆ ಜಿಲ್ಲಾಡಳಿತ ಕೂಡ ಸಿದ್ಧತೆ ಮಾಡಿಕೊಂಡಿದೆ.

ನಗರದ ಕಾಮಧೇನು ಗಣಪತಿ ದೇಗುಲದಲ್ಲಿ ದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿ ನೂರಾರು ಕಾರ್ಯಕರ್ತರು ಮಾಲೆಧಾರಣೆ ಮಾಡಿಕೊಂಡರು.

ದತ್ತಮಾಲೆ ಧಾರಣೆ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ‘ನಾವೆಲ್ಲರೂ ದತ್ತಪೀಠ ಹೋರಾಟದಲ್ಲಿ ಒಂದಾಗಿದ್ದೇವೆ. ಶಕ್ತಿಯ ರೂಪವಾಗಿ ಸಂಪೂರ್ಣವಾಗಿ ಹಿಂದೂ ಪೀಠ ಆಗಬೇಕು ಎಂಬ ಕಾರಣಕ್ಕೆ ಒಂದಾಗಿದ್ದೇವೆ. ಶ್ರೀರಾಮ ಸೇನೆ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ದತ್ತಪೀಠ ಸಂಪೂರ್ಣ ಹಿಂದೂ ಪೀಠವಾಗಬೇಕು. ನ್ಯಾಯಾಲಯದ ವಿಳಂಬ, ರಾಜಕಾರಣಿಗಳ ಮೂಗು ತೂರುವಿಕೆಯಿಂದ ವಿಳಂಬವಾಗುತ್ತಿದೆ. ಕೃತಕ ಗೋರಿಗಳನ್ನು ಸ್ಥಳಾಂತರ ಮಾಡಿ ಆ ಸ್ಥಾನವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಸಿ.ಟಿ.ರವಿ ಮಾತನಾಡಿ, ‘ದತ್ತಪೀಠಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆರಂಭಿಕ ದತ್ತಪೀಠ ಹೋರಾಟದ ತೊಡಗಿಸಿಕೊಂಡಿದ್ದ ಪ್ರಮೋದ್ ಮುತಾಲಿಕ್ ಅವರು ಈಗ ಮತ್ತೊಮ್ಮೆ ಎಲ್ಲರೊಂದಿಗೆ ಸೇರಿ ಮಾಲೆಧಾರಣೆ ಮಾಡಿದ್ದಾರೆ. ಇದು ದತ್ತಪೀಠ ಹೋರಾಟಕ್ಕೆ ಶಕ್ತಿ ಕೊಟ್ಟಿದೆ’ ಎಂದರು.

‘ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ. ಈ ಸತ್ಯವನ್ನು ಮನವರಿಕೆ ಮಾಡಿಕೊಡಬೇಕಿದೆ. ಈ ಸಂಬಂಧ  ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಬೇಕು. ಸತ್ಯದ ಅವಲೋಕನ ಮಾಡಿ ಸತ್ಯದ ಪರವಾಗಿ ನಿಲ್ಲಬೇಕು’ ಎಂದರು.

‘ಈಗಾಗಲೇ ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿ ಸಂಪುಟ ಉಪಸಮಿತಿ ರಚಿಸಿ ಪೂಜಾ ವಿಧಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದಕ್ಕೆ ಅಡೆತಡೆ ಒಡ್ಡುವುದು ಅನ್ಯಾಯ. ದತ್ತ ಜಯಂತಿಗೆ ಅಡ್ಡಿಯಾಗದಂತೆ ಸೌಕರ್ಯ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ’ ಎಂದು ಹೇಳಿದರು.

‘ಉಪ್ಪಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ದರ್ಗಾ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಮೌನವಾಗಿದೆ. ಈ ಬಗ್ಗೆ ನಾನು ಹಿಂದೆಯೇ ದೂರು ನೀಡಿದ್ದೆ. ಸಮಿತಿ ರಚಿಸುವಾಗಿ ತಿಳಿಸಿ ಜಿಲ್ಲಾಡಳಿತ ಸುಮ್ಮನಾಗಿದೆ. ಧ್ವಜ ಕಟ್ಟಿದರೆ ಪ್ರಕರಣ ದಾಖಲಿಸುವ ಜಿಲ್ಲಾಡಳಿತದ ಅಧಿಕಾರಿಗಳು, ನದಿ ಮತ್ತು ರಸ್ತೆ ಜಾಗ ಒತ್ತುವರಿ ಮಾಡಿದ್ದರೂ ಕ್ರಮ ಕೈಗೊಳ್ಳದೆ ಜಾಣಗುರುಡು ಪ್ರದರ್ಶಿಸುತ್ತಿದ್ದಾರೆ. ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮುಖಂಡರಾದ ಜಗನ್ನಾಥಶಾಸ್ತ್ರಿ, ಮಹೇಂದ್ರ, ರಘು ಸಕಲೇಶಪುರ,  ಯೋಗೀಶ್‌ರಾಜ್ ಅರಸ್, ಅಮಿತಾ, ರಂಗನಾಥ್, ಶರತ್ ಇದ್ದರು.

ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ: ಜಿಲ್ಲಾಧಿಕಾರಿ

‘ಆಡಳಿತಾಧಿಕಾರಿ ನೇತೃತ್ವದಲ್ಲಿ ಈ ಬಾರಿ ದತ್ತ ಜಯಂತಿ ಆಚರಣೆಗೊಳ್ಳಲಿದೆ. ಗುರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಡಿ.2 ರಿಂದ 4 ತನಕ ನಡೆಯುವ ದತ್ತ ಜಯಂತಿಗೆ ಕುಡಿಯುವ ನೀರು ಶೌಚಾಲಯ ರಸ್ತೆ ರಿಪೇರಿ ಸೇರಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ತಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು. ಡಿ.2 ರಂದು ಅನುಸೂಯ ಜಯಂತಿ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರಿಂದ ಡಿ.3 ರಂದು ಶೋಭಾಯಾತ್ರೆ  ಡಿ.4 ರಂದು ಪಾದುಕೆ ದರ್ಶನ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು. ಸರ್ಕಾರದ ಆದೇಶದಂತೆ 2022ನೇ ಸಾಲಿನಲ್ಲಿ ದತ್ತಪೀಠ ವ್ಯವಸ್ಥಾಪನಾ ಸಮಿತಿ ರಚಿಸಲಾಗಿತ್ತು. ಸಮಿತಿಯ ಮೂರು ವರ್ಷದ ಅವಧಿ ಮುಕ್ತಾಯ ಆಗಿರುವುದರಿಂದ ಹೆಚ್ಚುವರಿ ಜಿಲ್ಲಾಕಾರಿ  ಆಡಳಿತಾಕಾರಿಯಾಗಿ ನೇಮಕಗೊಂಡಿದ್ದಾರೆ. ಅವರ ನೇತೃತ್ವದಲ್ಲಿ ಈ ವರ್ಷ ದತ್ತ ಜಯಂತಿ ನಡೆಯಲಿದೆ ಎಂದರು. ಎರಡು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳು ಮುಂದುವರೆಯಲಿವೆ. ಹವಾಮಾನ ವೈಪರೀತ್ಯದಿಂದ ಗಿರಿಪ್ರದೇಶದ ಕೆಲವೆಡೆ ಭೂಕುಸಿತ ಉಂಟಾಗಿದ್ದು ಲಾಂಗ್‌ ಚಾರ್ಸಿ ಬಸ್‌ಗಳಿಗೆ ದತ್ತಜಯಂತಿ ವೇಳೆ ಪ್ರವೇಶಕ್ಕೆ ಅವಕಾಶವಿಲ್ಲ. ಚಿಕ್ಕ ಬಸ್ಸಿನಲ್ಲಿ ಪ್ರಯಾಣಿಸುವುದಕ್ಕೆ ಅಡ್ಡಿಯಿಲ್ಲ ಎಂದು ತಿಳಿಸಿದರು. ಗುಹೆಯೊಳಗೆ ಪೊಟೋ ತೆಗೆಯಲು ಚಿತ್ರೀಕರಣ ಮಾಡಿಕೊಳ್ಳಲು ಅವಕಾಶವಿಲ್ಲ. ಹಲವು ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು ಪ್ಲಾಸ್ಟಿಕ್‌ ಬಳಕೆ ನಿಷೇಸಲಾಗಿದೆ. ಭಕ್ತರು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಸಬಾರದು. ನ್ಯಾಯಾಲಯದ ಸೂಚನೆ ಮೇರೆಗೆ ದತ್ತಜಯಂತಿ ಆಚರಿಸಲಾಗುತ್ತಿದೆ ಎಂದರು.

5 ಸಾವಿರ ಪೊಲೀಸರ ನಿಯೋಜನೆ

ದತ್ತ ಜಯಂತಿಗೆ ಬಂದೋಬಸ್ತ್ ಕೈಗೊಳ್ಳಲು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ರಾಮನಹಳ್ಳಿಯ ಡಿಎಆರ್ ಆಟದ ಮೈದಾನದಲ್ಲಿ ಡಿ. 30ರಂದು ಸಿಬ್ಬಂದಿ ಬರಲಿದ್ದಾರೆ. ಕ್ವಿಕ್ ಆಕ್ಷನ್ ಪೋರ್ಸ್ ಸ್ಪೆಷಲ್ ಆಕ್ಷನ್ ಪೋರ್ಸ್ ರ‍್ಯಾಪಿಡ್ ಆಕ್ಷನ್ ಪೋರ್ಸ್ ತಂಡಗಳು ಕಾರ್ಯನಿರ್ವಹಿಸಲಿವೆ. ಶೋಭಾಯಾತ್ರೆ ಸಾಗುವ ಮಾರ್ಗ ಮತ್ತು ದತ್ತಜಯಂತಿ ವೇಳೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕಣ್ಘಾವಲು ಇರಲಿವೆ. 15 ಡ್ರೋನ್‌ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿಕ್ರಮ ಅಮಟೆ ತಿಳಿಸಿದರು. ಜಿಲ್ಲೆಗೆ ಸಂಬಂಸಿದ 7 ಜಿಲ್ಲೆಗಳ ಗಡಿ ಭಾಗಗಳಲ್ಲಿ 28 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದೆ. 39 ವಿಶೇಷ ಅಧಿಕಾರಿಗಳು ದತ್ತ ಜಯಂತಿಯಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 20 ವಾಚ್‌ ಟವರ್  ನಿರ್ಮಾಣ ಮಾಡಲಾಗಿದೆ. ಕೊಟ್ಟಿಗೆಹಾರದಿಂದ ಕೈಮರದ ತನಕ ಭಕ್ತರಿಗೆ ಅನುಕೂಲ ಆಗಲು ಕೆಲವು ಅಂಗಡಿಗಳು ತೆರೆದಿರುತ್ತವೆ. ಉಳಿದ ಅಂಗಡಿಗಳು ಬಾಗಿಲು ಮುಚ್ಚಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.