ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಇರುವ ಔದುಂಬರ ವೃಕ್ಷದ ಸುತ್ತ ಜಿಲ್ಲಾಡಳಿತ ಬೇಲಿ ಹಾಕಿದ್ದು, ವೃಕ್ಷಕ್ಕೆ ಪೂಜೆ ಮಾಡದಂತೆ ಮಾಡಿದೆ. ಇದಕ್ಕೆ ಸರ್ಕಾರದ ಆದೇಶ ಇದೆಯಾ ಎಂಬುದನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಒತ್ತಾಯಿಸಿದರು.
‘ಇದು ಪುರಾತನ ವೃಕ್ಷವಾಗಿದ್ದು, ಸಾಧು ಸಂತರು ತಪಸ್ಸು ಮತ್ತು ಪೂಜೆ ಮಾಡಿಕೊಂಡು ಬರುತ್ತಿದ್ದರು. ಈಗ ಇದರ ಸುತ್ತಲೂ ಜಿಲ್ಲಾಡಳಿತ ಬೇಲಿ ಹಾಕಿಸಿದೆ. ಬಾಬಾಬುಡನ್ ಸಮಾಧಿ ಎಂಬುದಕ್ಕೆ ಪೂಜೆ ಮಾಡಲು ಅವಕಾಶ ಕಲ್ಪಿಸಿದರೆ, ಔದುಂಬರ ವೃಕ್ಷಕ್ಕೂ ಪೂಜೆ ಮಾಡಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ವೃಕ್ಷಕ್ಕೆ ಪೂಜೆ ಮಾಡಲು ಅವಕಾಶ ಇಲ್ಲವಾದಲ್ಲಿ ಸಮಾಧಿ ಪೂಜೆಗೂ ಅವಕಾಶ ನೀಡಬಾರದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಜರಾಯಿ ಕಚೇರಿ ಕೆಳಭಾಗದಲ್ಲಿ ಇರುವ ಒಂದು ರೂಮಿನ ಎದುರು ಒಂದು ಟೇಬಲ್ ಮೇಲೆ ಹಸಿರು ಬಟ್ಟೆ ಹಾಕಿ, ಅದರ ಮೇಲೆ ಒಂದು ಹುಂಡಿ ಮತ್ತು ಒಂದು ರಸೀದಿ ಪುಸ್ತಕ ಇಡಲಾಗಿದೆ. ಭಕ್ತರಿಂದ ಹಣ ಸಂಗ್ರಹ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮುಜರಾಯಿ ಅಧಿಕಾರಿಗಳು ಮತ್ತು ಸಿಬ್ಬಂದಿ ನೋಡಿಯೂ ನೋಡದಂತೆ ಇದ್ದಾರೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಮಾಣಿಕ್ಯಧಾರಾ ಜಲಪಾತ ಸಮೀಪ ಇರುವ ಅಂಗಡಿಗಳು, ಮಾಂಸಾಹಾರಿ ಹೋಟೆಲ್, ಅಂಗಡಿಗಳ ತ್ಯಾಜ್ಯವನ್ನು ಜಲಪಾತಕ್ಕೆ ಬೀಳುವ ನೀರಿನ ಸೆಲೆಗೆ ಹಾಕಲಾಗುತ್ತಿದೆ. ಅದೇ ನೀರು ಮಾಣಿಕ್ಯಧಾರಾದಲ್ಲಿ ಹರಿಯಲಿದ್ದು, ಸ್ನಾನ ಮಾಡುವ ಭಕ್ತರ ತಲೆ ಮೇಲೆ ತ್ಯಾಜ್ಯ ಬೀಳುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧವಿದ್ದರೂ ಕೂಡ ಈ ಮಾಣಿಕ್ಯಧಾರಾ ಜಲಪಾತದ ಬಳಿ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕವರ್‌ಗಳನ್ನು ಎಸೆಯಲಾಗಿದೆ. ಇದೆಲ್ಲದರ ಫೋಟೊಗಳನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಆ ಪ್ರದೇಶದಲ್ಲಿ ಇರುವ ಅಂಗಡಿ ಮತ್ತು ಮಾಂಸಾಹಾರಿ ಹೋಟೆಲ್‌ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಭಕ್ತರನ್ನು ನಗರದಿಂದ ಮತ್ತು ಅತ್ತಿಗುಂಡಿಯಿಂದ ದತ್ತಪೀಠ, ಮಾಣಿಕ್ಯಧಾರಾಕ್ಕೆ ಕೊಂಡೊಯ್ಯಲು ಅನೇಕ ಜೀಪುಗಳಿವೆ. ಕೆಲವು ಜೀಪುಗಳಿಗೆ ನಂಬರ್ ಪ್ಲೇಟ್ ಸಹ ಇಲ್ಲ. ಈ ಜೀಪಿನ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಜೀಪಿನಲ್ಲಿ ತುಂಬಿಕೊಂಡು ವೇಗವಾಗಿ ಚಾಲನೆ ಮಾಡುತ್ತಿದ್ದಾರೆ. ಈ ಜೀಪುಗಳ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸುನೀಲ್, ನಗರ ಘಟಕದ ಅಧ್ಯಕ್ಷ ದಿಲೀಪ್‌ಶೆಟ್ಟಿ, ನಗರ ಸಂಯೋಜಕ ರವಿಕಿರಣ್, ಅಮಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.