ADVERTISEMENT

ಚಿಕ್ಕಮಗಳೂರು | ಪರಿಭಾವಿತ ಅರಣ್ಯ: ಮರು ಪರಿಷ್ಕರಣೆ ಪ್ರಕ್ರಿಯೆ ಆರಂಭ

ವಿಜಯಕುಮಾರ್ ಎಸ್.ಕೆ.
Published 3 ಏಪ್ರಿಲ್ 2025, 5:45 IST
Last Updated 3 ಏಪ್ರಿಲ್ 2025, 5:45 IST
<div class="paragraphs"><p>ಅರಣ್ಯ</p></div>

ಅರಣ್ಯ

   

(ಸಾಂದರ್ಭಿಕ ಚಿತ್ರ)

ಚಿಕ್ಕಮಗಳೂರು: ಅರಣ್ಯ ಮತ್ತು ಸಾಗುವಳಿ ಭೂಮಿ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಅವಕಾಶ ದೊರೆತಿದೆ. ಮರು ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿನ ಪರಿಭಾವಿತ ಅರಣ್ಯ ಗುರುತಿಸುವ ಕಾರ್ಯ ಆರಂಭವಾಗಿದೆ. 

ADVERTISEMENT

2002ರಲ್ಲಿ ಮೊದಲ ಬಾರಿಗೆ ಪರಿಭಾವಿತ ಅರಣ್ಯ(ಡೀಮ್ಡ್‌)–1 ಘೋಷಣೆಯಾಗಿದ್ದು, ಆಗ 3.50 ಲಕ್ಷ ಎಕರೆ ಜಾಗವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಲಾಗಿದೆ. 2014ರಲ್ಲಿ ಡೀಮ್ಡ್‌–2ನಲ್ಲಿ ಪರಿಶೀಲನೆ ನಡೆಸಿ 1.32 ಲಕ್ಷ ಎಕರೆ ಉಳಿಸಲಾಯಿತು. 

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 33,750 ಎಕರೆ ಪರಿಭಾವಿತ ಅರಣ್ಯವಿದ್ದರೆ, ಶೃಂಗೇರಿ ತಾಲ್ಲೂಕಿನ 34,620 ಎಕರೆ ಮತ್ತು ಮೂಡಿಗೆರೆ–ಕಳಸ ತಾಲ್ಲೂಕಿನಲ್ಲಿ 28,380 ಎಕರೆ ಪ್ರದೇಶ ಪರಿಭಾವಿತ ಅರಣ್ಯವಿದೆ. ಪರಿಭಾವಿತ ಅರಣ್ಯಕ್ಕೆ ಕಂದಾಯ ಜಾಗವನ್ನು ಅನಗತ್ಯವಾಗಿ ಸೇರಿಸಿಕೊಳ್ಳಲಾಗಿದೆ ಎಂಬ ಆಕ್ಷೇಪ ವ್ಯಾಪಕವಾಗಿದೆ. 

ಆದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ಪರಿಭಾವಿತ ಅರಣ್ಯ ಜಾಗವನ್ನು ನಿಖರವಾಗಿ ಗುರುತಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಅದರಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತಜ್ಞರ ಸಮಿತಿ ರಚನೆಯಾಗಿದೆ. ಮಾಹಿತಿ ಸಂಗ್ರಹಿಸಲು ಈಗ ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲೂ ಸಮಿತಿಯನ್ನು ಜಿಲ್ಲಾಧಿಕಾರಿ ರಚನೆ ಮಾಡಿದ್ದಾರೆ. ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರರು ಜಂಟಿ ಸಮೀಕ್ಷೆ ನಡೆಸಲು ತಂಡಗಳನ್ನು ಕಂದಾಯ ವೃತ್ತವಾರು ರಚನೆ ಮಾಡಿ ಆದೇಶಿಸಿದ್ದಾರೆ.

ಅರಣ್ಯ ಪ್ರದೇಶಗಳ ಮಾಹಿತಿ ಸಂಗ್ರಹಿಸುವಾಗ ವಿವಿಧ ರೀತಿಯ ಘೋಷಿತ ಅರಣ್ಯ, ಅರಣ್ಯವೆಂದು ಅಧಿಸೂಚನೆಯಾದ ಪ್ರದೇಶಗಳನ್ನು ಗ್ರಾಮವಾರು ಸರ್ವೆ ನಂಬರ್ ಸಹಿತ ಮಾಹಿತಿ ಸಂಗ್ರಹಿಸಬೇಕು.‌ 1980ರ ಅಕ್ಟೋಬರ್ 25ರವರೆಗೆ ಮತ್ತು ನಂತರದಲ್ಲಿ ದಾಖಲಾಗಿರುವ ಅರಣ್ಯ ಪ್ರದೇಶಗಳನ್ನು ತಂಡಗಳು ಪರಿಶೀಲಿಸಬೇಕು. ಅರಣ್ಯದ ಸ್ವಭಾವವಿರುವ ಬಗ್ಗೆ ಅಥವಾ ಅರಣ್ಯದ ಸ್ವಭಾವ ಕಳೆದುಕೊಂಡಿರುವ ಬಗ್ಗೆ ವಾಸ್ತವ ವರದಿಯನ್ನು ಸರ್ವೆ ನಂಬ‌ರ್ ವಾರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸಂಗ್ರಹಿಸಿದ ವರದಿಗೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ವಲಯ ಅರಣ್ಯಾಧಿಕಾರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿಯಾಗಿ ದೃಢೀಕರಿಸಿ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಉಪಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾ ಮಟ್ಟದ ಸಮಿತಿಯ ಸಭೆಯಲ್ಲಿ ಮಂಡಿಸಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಸಮಿತಿ

ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಚಿಕ್ಕಮಗಳೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸಂಚಾಲಕರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿಕ್ಕಮಗಳೂರು, ಕೊಪ್ಪ ಮತ್ತು ಭದ್ರಾವತಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಭೂದಾಖಲೆಗಳ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಮಿತಿ ಸದಸ್ಯರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.