ADVERTISEMENT

ಶೃಂಗೇರಿಯಲ್ಲಿ ವಿಜೃಂಭಣೆಯ ದೀಪಾವಳಿ, ಲಕ್ಷ್ಮೀ ಪೂಜೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2023, 15:27 IST
Last Updated 13 ನವೆಂಬರ್ 2023, 15:27 IST
ಶೃಂಗೇರಿ ಶಾರದ ಮಠದಲ್ಲಿ ದೀಪಾವಳಿಯಂದು ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಗೋಪೂಜೆ ನೇರವೇರಿಸಿದರು  
ಶೃಂಗೇರಿ ಶಾರದ ಮಠದಲ್ಲಿ ದೀಪಾವಳಿಯಂದು ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಗೋಪೂಜೆ ನೇರವೇರಿಸಿದರು     

ಶೃಂಗೇರಿ: ಶೃಂಗೇರಿ ತಾಲ್ಲೂಕಿನಾದ್ಯಂತ ಸೋಮವಾರ ದೀಪಾವಳಿ ಸಂಭ್ರಮ ಕಂಡು ಬಂದಿತು. ಹಂಡೆಯನ್ನು ಶುದ್ಧೀಕರಿಸಿ ವಿಧವಿಧವಾದ ಬಣ್ಣದ ಗೊಂಡೆಹಾರ ಹಾಗೂ ಹಿಂಡ್ಲೆಕಾಯಿ ಬಳ್ಳಿಯನ್ನು ಕಟ್ಟಿ ಶೃಂಗರಿಸಿದ ಮಹಿಳೆಯರು ಬಳಿಕ ಬಾವಿನೀರು ಸೇದಿ ಹಂಡೆಗೆ ನೀರು ತುಂಬಿಟ್ಟರು. ಮಕ್ಕಳು ಈ ಸಂದರ್ಭದಲ್ಲಿ ಜಾಗಟೆ ಬಾರಿಸಿ ಸಂಭ್ರಮಿಸಿದರು.

ಮಹಿಳೆಯರು ದೀಪಾವಳಿಗಾಗಿ ಹೊಸಬಟ್ಟೆ ಖರೀದಿಸುವುದರಲ್ಲಿ ನಿರತರಾಗಿದ್ದರೆ, ಮಕ್ಕಳು ಪಟಾಕಿ ಖರೀದಿಯ ಹುರುಪಿನಲ್ಲಿದ್ದರು. ಲಕ್ಷ್ಮೀಪೂಜೆಯ ಅಂಗವಾಗಿ ಹೂವಿನ ವ್ಯಾಪಾರ ಬಿರುಸಾಗಿ ನಡೆಯಿತು.

ಬಲಿಪಾಡ್ಯಮಿಯಂದು ತಾಲ್ಲೂಕಿನ ಜನರು ಸಂಭ್ರಮದಿಂದ ಗೋಪೂಜೆ ನೆರವೇರಿಸಿದರು. ಅಭ್ಯಂಗ ಸ್ನಾನದ ಬಳಿಕ ಹೊಸ ಬಟ್ಟೆ ಧರಿಸಿ ಶಾರದಾ ಮಠಕ್ಕೆ ತೆರಳಿ ಶಾರದಾಂಬೆಯ ದರ್ಶನ ಪಡೆದರು. ಕೊಟ್ಟಿಗೆಗಳನ್ನು ಶುಭ್ರಗೊಳಿಸಿ, ಹಸುಗಳ ಮೈತೊಳೆದು ವಿವಿಧ ಹೂಗಳ ಹಾರವನ್ನು ಹಾಕಿ ಪೂಜೆ ಸಲ್ಲಿಸಿದರು.

ADVERTISEMENT

ಗೋವುಗಳಿಗಾಗಿ ಸಿಹಿಕಡಬು, ಅಕ್ಕಿ ತಿಂಡಿ ನೀಡಲಾಯಿತು. ಮನೆಯಲ್ಲಿರುವ ಕೃಷಿ ಪರಿಕರ, ವಾಹನ, ಯಂತ್ರೋಪಕರಣಗಳನ್ನು ಶುದ್ಧಗೊಳಿಸಿ ಪೂಜೆ ಸಲ್ಲಿಸಿದರು. ಬಲಿಪಾಡ್ಯವಾದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಬಲೀಂದ್ರನಿಗೆ ಪೂಜೆ ನೆರವೇರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಜನರು ಗ್ರಾಮ ಮತ್ತು ಮನೆ ದೇವರಿಗೆ ಸಂಜೆ ಕೋಲು ದೀಪ ಹಚ್ಚಿ ಪ್ರಾರ್ಥಿಸಿದರು.

ದೀಪಾವಳಿ ಹಬ್ಬವಾದ ಕಾರಣ ಮಹಿಳೆಯರು ಹೋಳಿಗೆ ತಯಾರಿಸಿದ್ದರು. ಸಂಜೆಯ ಹೊತ್ತು ಮನೆ ಮುಂದೆ ಸಾಲು ಹಣತೆ ಉರಿಸಿದರು.

ಶಾರದಾ ಮಠದಲ್ಲಿ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಗೋಶಾಲೆಯ 600 ಗೋವುಗಳಿಗೆ ಪೂಜೆ ನೆರವೇರಿಸಿದರು.

ಶಾರದಾಂಬಾ ದೇವಾಲಯ ಮತ್ತು ಮಠದ ದೇವಾಲಯಗಳಿಗೆ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿಯವರು ತೆರಳಿ ವಿಶೇಷ ದರ್ಶನ ಪಡೆದರು. ಮಧ್ಯಾಹ್ನ ಚಂದ್ರಮೌಳೇಶ್ವರ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಶಾರದೆಯ ಸನ್ನಿಧಿಯಲ್ಲಿ ಬಲೀಂದ್ರ ಪೂಜೆ, ಮಹಾಜನರ ಕಾಣಿಕೆ ಸಮರ್ಪಿಸಲಾಯಿತು.

‌ಶೃಂಗೇರಿ ಭಾಗದ ಜನರು ಶಾರದಾ ಪೀಠದ ಸಂಪ್ರದಾಯದಂತೆ ದೀಪಾವಳಿ, ಗೋಪೂಜೆ, ಬಲಿಪಾಡ್ಯಮಿಯನ್ನು ಸೋಮವಾರ ಆಚರಿಸಿದರು. ಆದರೆ, ಕಿಗ್ಗಾ ಭಾಗದ ಜನರು ಮತ್ತು ಇತರ ಕಡೆ ದೀಪಾವಳಿಯನ್ನು ಮಂಗಳವಾರ ಆಚರಿಸುತ್ತಾರೆ.

ತಾಲ್ಲೂಕಿನಲ್ಲಿ ದೀಪಾವಳಿ ಪ್ರಯುಕ್ತ ವಾಹನ ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿದರು
ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಗ್ರಾಮ ಮತ್ತು ಮನೆ ದೇವರನ್ನು ನೆನೆದು ಕೋಲು ದೀಪ ಹಚ್ಚಿ ಪ್ರಾರ್ಥಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.