ಕಡೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿ ಹೆಚ್ಚಾಗಿದೆ. ಚಳಿಗಾಲದ ಬೆನ್ನಲ್ಲೇ ಮಾರುಕಟ್ಟೆಗೆ ಬರುವ ಹಸಿ ಕಡಲೆ (ಕಡಲೆ ಗಿಡ) ಮತ್ತು ಕಿತ್ತಳೆ ಹಣ್ಣಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ. ದಶಕಗಳ ಹಿಂದೆ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿಯ ಕಿತ್ತಳೆ ಹಣ್ಣು ರಾಜ್ಯದಾದ್ಯಂತ ಪ್ರಸಿದ್ಧಿಯಾಗಿತ್ತು. ಈಗ ತಾಲ್ಲೂಕಿನಲ್ಲಿ ಎಲ್ಲಿಯೂ ಕಿತ್ತಳೆ ಬೆಳೆಯುತ್ತಿಲ್ಲ. ಮಹಾರಾಷ್ಟ್ರದ ನಾಗಪುರದಿಂದ ಬರುವ ಕಿತ್ತಳೆ ಹಣ್ಣು ತಾಲ್ಲೂಕಿನಲ್ಲಿ ಮಾರಾಟವಾಗುತ್ತದೆ.
ಕೊಡಗಿನಲ್ಲಿ ಬೆಳೆಯುವ ಕಿತ್ತಳೆ ಹಣ್ಣು ಸಿಹಿಯಾಗಿರುತ್ತದೆ. ಆದರೆ, ನಾಗಪುರದ ಕಿತ್ತಳೆ ಹುಳಿ- ಸಿಹಿ ಮಿಶ್ರಿತವಾಗಿರುವುದರಿಂದ ಜನರು ಹೆಚ್ಚಾಗಿ ಅದನ್ನೇ ಇಷ್ಟಪಟ್ಟು ಖರೀದಿಸುತ್ತಾರೆ. ಪಟ್ಟಣದ ಹಣ್ಣಿನ ಅಂಗಡಿಗಳಲ್ಲಿ ಒಂದು ಕೆಜಿ ಕಿತ್ತಳೆ ₹80 ರಿಂದ ₹100 ದರದಲ್ಲಿ ಸಿಗುತ್ತಿದೆ. ಹಾಸನ ಮತ್ತಿತರ ಕಡೆಯಿಂದ ಬರುವ ವ್ಯಾಪಾರಿಗಳು ವಾಹನದಲ್ಲಿ ಕಿತ್ತಳೆ ತುಂಬಿಕೊಂಡು ಬಂದು ರಸ್ತೆಯಂಚಿನಲ್ಲಿ ಒಂದೂವರೆ ಕೆ.ಜಿ ಹಣ್ಣನ್ನು ₹100 ದರದಲ್ಲಿ ಮಾರುತ್ತಾರೆ. ಸೋಮವಾರದ ಸಂತೆಯಲ್ಲಿ 1 ಕೆ.ಜಿ ಕಿತ್ತಳೆ ಹಣ್ಣಿಗೆ ₹80 ದರವಿತ್ತು.
‘ಕಿತ್ತಳೆ ಹಣ್ಣನ್ನು ನಾಗಪುರದಿಂದ ತರಿಸುತ್ತೇವೆ. ಭಾರಿ ಅಲ್ಲದಿದ್ದರೂ ತೃಪ್ತಿಕರ ಲಾಭವಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ರಾಮಚಂದ್ರ.
ಹಸಿ ಕಡಲೆ ಕೂಡ ಹೆಚ್ಚಾಗಿ ಮಾರಾಟವಾಗುತ್ತಿದೆ. ವ್ಯಾಪಾರಿಗಳು ಒಂದು ಕೆಜಿ ಕಡಲೆ ಗಿಡವನ್ನು ರೈತರಿಂದ ಸರಾಸರಿ ₹30 ದರದಲ್ಲಿ ಖರೀದಿಸಿ, ಅದನ್ನು ₹50 ದರದಲ್ಲಿ ಮಾರಾಟ ಮಾಡುತ್ತಾರೆ. ಕಡೂರು ತಾಲ್ಲೂಕಿನಲ್ಲಿ 500 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ರೈತರ ಬಳಿ ವ್ಯಾಪಾರಸ್ಥರು ಒಂದು ಎಕರೆಗೆ ಇಂತಿಷ್ಟು ಅಂತ ಮೊತ್ತ ನಿಗದಿ ಮಾಡಿ ಇಡೀ ಬೆಳೆಯನ್ನೂ ಖರೀದಿಸುತ್ತಾರೆ. ಈ ಬಾರಿ ಒಂದು ಎಕರೆಯಲ್ಲಿನ ಕಡಲೆ ಗಿಡ ₹18 ರಿಂದ ₹20 ಸಾವಿರದ ತನಕ ಮಾರಾಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.