
ಕಡೂರು: ಸಾಮಾನ್ಯ ವರ್ಗದ ರೈತರ ಮೆಚ್ಚಿನ ಬೆಳೆಯಾಗಿರುವ ರಾಗಿಗೆ ಸ್ಥಿರ ಮಾರುಕಟ್ಟೆ ದೊರೆತು ದೇಶದ ಮೂಲೆ ಮೂಲೆಗೂ ತಲುಪುವಂತಾಗಲಿ ಎಂದು ಶಾಸಕ ಕೆ.ಎಸ್. ಆನಂದ್ ಹಾರೈಸಿದರು.
ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರದ ಉದ್ಘಾಟನೆ ಮತ್ತು ರಾಶಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ನಾಫೆಡ್ ಹೊರತುಪಡಿಸಿ, ರಾಜ್ಯ ಸರ್ಕಾರವೇ ತನ್ನ ನಾಗರಿಕ ಸರಬರಾಜು ನಿಗಮವನ್ನು ಖರೀದಿಯ ಏಜೆನ್ಸಿಯಾಗಿ ನಿಯೋಜಿಸಿ ಪ್ರಯೋಗ ಮಾಡ ಹೊರಟಿದೆ. ಖರೀದಿ ಕೇಂದ್ರದ ಅಧಿಕಾರಿಗಳು ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಗೌರವ ನೀಡಿ, ಅವರಿಗೆ ಖರೀದಿ ದಿನಾಂಕದ ಕುರಿತು ಸೂಕ್ತ ಮಾಹಿತಿ ಒದಗಿಸಿ ಖರೀದಿ ಮಾಡತಕ್ಕದ್ದು. ರೈತರು ಬೆಳಿಗ್ಗೆಯಿಂದ ರಾತ್ರಿವರೆಗೆ ಕಾಯ್ದು ನರಳುವ ಸ್ಥಿತಿ ಖರೀದಿ ಕೇಂದ್ರದಲ್ಲಿ ಉಂಟಾಗದಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನೋಂದಣಿ ಸಂದರ್ಭದಲ್ಲಿ ರೈತರು ಬೆರಳಚ್ಚು ಗುರುತು ನೀಡಿ ನಮೂದಿಸಿರುವುದರಿಂದ ದಲ್ಲಾಳಿಗಳ ಕಾಟ ತಪ್ಪುವ ನಿರೀಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ರಾಗಿ ಬೆಳೆಯು ಸರ್ಕಾರಗಳ ಪ್ರೋತ್ಸಾಹದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಉತ್ತಮ ಧಾರಣೆ ಪಡೆದಿದೆ. ಅತ್ಯಂತ ಪೋಷಕಾಂಶಗಳಿಂದ ಕೂಡಿದ ಈ ಬೆಳೆ ಇತ್ತೀಚಿನ ದಿನಗಳಲ್ಲಿ ಅಕ್ಕಿಯಷ್ಟೇ ಧಾರಣೆ ತಲುಪಿದೆ. ಬಯಲು ಸೀಮೆಯ ಸಾಕಷ್ಟು ರೈತರು ರಾಗಿ ಅವಲಂಬಿಸಿದ್ದವರೂ ಸಮೂಹ ಸನ್ನಿಗೆ ಒಳಗಾದವರಂತೆ ಅಡಿಕೆಯ ಬೆನ್ನು ಹತ್ತಿದ್ದರು. ಅಡಿಕೆ ಆಹಾರ ಬೆಳೆಯಲ್ಲ ಎನ್ನುವುದು ನಿಮಗೆ ನೆನಪಿರಲಿ. ಮುಂದಿನ ದಿನಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿ ರಾಗಿ ಧಾರಣೆ ಕ್ವಿಂಟಾಲ್‌ಗೆ ₹15 ಸಾವಿರ ತಲುಪಿದರೂ ಅಚ್ಚರಿ ಇಲ್ಲ. ಮೂರು ತಿಂಗಳಲ್ಲಿ ಒಂದು ಎಕರೆಯಲ್ಲಿ ಕನಿಷ್ಠ ₹1.50ರಿಂದ ₹2 ಲಕ್ಷ ದೊರೆಯುವುದಾದರೆ ರೈತರು ಅಡಿಕೆ ಕೈಬಿಟ್ಟು ರಾಗಿ ಬೆಳೆಗೆ ಮತ್ತೆ ಮರಳುವ ದಿನಗಳೂ ಬರಬಹುದು. ರಾಗಿಯನ್ನು ಇನ್ನಷ್ಟು ರಾಜ್ಯಗಳಿಗೆ ಆಹಾರ ಧಾನ್ಯವಾಗಿ ಪರಿಚಯಿಸಿ ದೇಶದಾದ್ಯಂತ ಮಾರುಕಟ್ಟೆ ಒದಗಿಸಿ, ರೈತರ ಬದುಕು ಹಸನಾಗಿಸುವ ಪ್ರಯತ್ನಗಳು ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿ, ಈ ಹಿಂದೆ ರೈತರು ಮಧ್ಯವರ್ತಿಗಳಿಂದ ಶೋಷಣೆಗೆ ಒಳಪಡುತ್ತಿದ್ದರು. ಸರ್ಕಾರಗಳು ಘೋಷಿಸಿದ ಬೆಂಬಲ ಬೆಲೆಯಿಂದಾಗಿ ರೈತಾಪಿ ವರ್ಗಕ್ಕೆ ಅನುಕೂಲವಾಗಿದೆ. ರೈತರು ದಲ್ಲಾಳಿಗಳ ಮೊರೆ ಹೋಗದೆ ತಾವೇ ಖರೀದಿ ಕೇಂದ್ರದ ಮೂಲಕ ರಾಗಿ ಬಿಡಬೇಕು. ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ನಿಜವಾದ ರೈತರಿಗೇ ಫಲ ದೊರಕಬೇಕು ಎಂದು ನುಡಿದರು.
ಪ್ರಗತಿ ರೈತ ಉತ್ಪನ್ನ ಕೇಂದ್ರದ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ, ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ಒದಗಿಸುವುದೂ ಮುಖ್ಯವಾಗಿದೆ. ಬೆಂಬಲ ಬೆಲೆಯಿಂದ ರಾಗಿ ಉತ್ತಮ ಸ್ಥಾನ ಪಡೆದಿದೆ. ರೈತರಿಗೆ ಇದರ ಸಂಪೂರ್ಣ ಲಾಭ ದೊರೆಯುವಂತಾಗಲಿ ಎಂದು ಹಾರೈಸಿದರು.
ಕೃಷಿಕ ಸಮಾಜದ ರುದ್ರೇಗೌಡ, ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶಪ್ಪ, ಕೃಷಿ ಸಹಾಯಕ ನಿರ್ದೇಶಕ ಎಂ.ಅಶೋಕ್, ಆಹಾರ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ್, ಶಿಲ್ಪಾ, ಅಂಕಿತಾ, ಎಪಿಎಂಸಿ ಕಾರ್ಯದರ್ಶಿ ಧರ್ಮರಾಜ್, ಕೆಎಫ್‌ಸಿಎಸ್‌ಸಿ ಕಡೂರು ವ್ಯವಸ್ಥಾಪಕ ವೆಂಕಟೇಶ್, ಗುರುರಾಜ ಹಾಲ್ಮಟ್ ಇದ್ದರು.
ರೈತರಿಗೆ ಗೊಂದಲವಾಗದಂತೆ ಸೂಕ್ತ ವ್ಯವಸ್ಥೆ ‘
ಕೆಎಫ್‌ಸಿಎಸ್‌ಸಿ ವತಿಯಿಂದ ರಾಜ್ಯದಲ್ಲಿ ಭತ್ತ ರಾಗಿ ಸಾಮೆ ನವಣೆ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಗಿ ಮಾತ್ರ ಖರೀದಿಸಲಾಗುತ್ತಿದ್ದು ಕಳೆದ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ತಾಲ್ಲೂಕಿನಲ್ಲಿ 13476 ರೈತರು ಕಡೂರಿನ 2 ಪಂಚನಹಳ್ಳಿಯ 2 ಬೀರೂರಿನ 1 ಖರೀದಿ ಕೇಂದ್ರಗಳ ಮೂಲಕ ನೋಂದಾಯಿಸಿಕೊಂಡಿದ್ದು 3.52 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತಿದೆ.
ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ರೈತರು ಬೆಂಬಲ ಬೆಲೆಯಲ್ಲಿ ರಾಗಿ ಬಿಡಲು ಮುಂದಾಗಿದ್ದಾರೆ. ಖರೀದಿ ಕೇಂದ್ರಗಳಲ್ಲಿ ಒತ್ತಡ ನಿರ್ವಹಣೆ ಸೇರಿದಂತೆ ರೈತರಿಗೆ ಗೊಂದಲವಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಬಿದ್ದರೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಾರ್ಚ್ 31ರ ನಂತರವೂ ಖರೀದಿ ಪ್ರಕ್ರಿಯೆ ಮುಂದುವರೆಸಲಾಗುವುದು’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.