
ಚಿಕ್ಕಮಗಳೂರು: ಶಿವರಾತ್ರಿ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯಲು ಧರ್ಮಸ್ಥಳಕ್ಕೆ ಹಲವು ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಿದ್ದಾರೆ.
ಬೆಂಗಳೂರು, ಹಾಸನ, ಮಂಡ್ಯ, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಯ ಭಕ್ತರು ಧರ್ಮಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಎಲ್ಲಾ ರಸ್ತೆಗಳು ಮೂಡಿಗೆರೆ ಬಳಿ ಕೂಡುತ್ತಿದ್ದು, ಅಲ್ಲಿಂದ ಮುಂದಕ್ಕೆ ಘಾಟಿ ಇಳಿದು ಭಕ್ತರು ಸಾಗುತ್ತಿದ್ದಾರೆ. ಭಕ್ತರು ಸಾಗುವ ದಾರಿಯುದ್ದಕ್ಕೂ ದಾನಿಗಳು ಊಟ, ಹಣ್ಣು, ನೀರು, ಮಜ್ಜಿಗೆ ವಿತರಿಸುತ್ತಿದ್ದಾರೆ.
ಯುವಕರು, ವೃದ್ಧರು, ಮಹಿಳೆಯರು, ಅಂಗವಿಕಲರೂ ಧರ್ಮಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೆಲವರು ಮಕ್ಕಳನ್ನು ಹೊತ್ತು ಸಾಗುತ್ತಿದ್ದರೆ, ಬಹುತೇಕರು ಬ್ಯಾಗ್‌ಗಳನ್ನು ತಲೆಯ ಮೇಲೆ ಹೊತ್ತು ತೆರಳುತ್ತಿದ್ದಾರೆ.
ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದು ಸಾಮಾನ್ಯವಾಗಿದೆ. ಬೇರುಭೂಮಿ ಹೆಸರಿನ ತಂಡ ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಇರಿಸಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದೆ.
ಚಾರ್ಮಾಡಿ ಘಾಟಿ ಸೇರಿದಂತೆ ರಸ್ತೆಯುದ್ದಕ್ಕೂ ಬಯಲೇ ಶೌಚಾಲಯವಾಗಿದೆ. ಅಲ್ಲಲ್ಲೇ ತಾತ್ಕಾಲಿಕ ಶೌಚಾಲಯ ಇರಿಸಿದರೆ ಮಹಿಳೆಯರಿಗೆ ಅನುಕೂಲವಾಗಲಿದೆ. ಆದರೆ, ಜಿಲ್ಲಾಡಳಿತ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.