
ಕೊಪ್ಪ: ‘ಸಮ ಸಮಾಜ ನಿರ್ಮಾಣ ಮಾಡುವುದು ಘನತೆಯ ಬದುಕಾಗುತ್ತದೆ. ಶೋಷಣೆ ಮಾಡುವ, ಶೋಷಣೆಗೆ ಒಳಗಾಗುವ ಜನರೂ ಬದಲಾಗಬೇಕು. ಇಡೀ ನಾಡಿನ ಜನ ಘನತೆಯಿಂದ ಬದುಕಬೇಕು ಎಂಬುದು ಕುವೆಂಪು, ಶಿವರಾಮ ಕಾರಂತರ, ತೇಜಸ್ವಿ ಸಾಹಿತ್ಯದ ಮೂಲ ತಿರುಳಾಗಿದೆ’ ಎಂದು ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಿ.ಎಂ.ಪುಟ್ಟಯ್ಯ ಅಭಿಪ್ರಾಯಪಟ್ಟರು.
ಕೊಗ್ರೆಯ ಹುಲ್ಸೆ ಶ್ರೀವತ್ಸ ವೇದಿಕೆಯಲ್ಲಿ ಭಾನುವಾರ ನಡೆದ ಕೊಪ್ಪ ತಾಲ್ಲೂಕು ಸಾಹಿತ್ಯ ಸಮ್ಮೇಳನದ ನುಡಿ ಸಂಭ್ರಮ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ವರ್ತಮಾನದ ಜನರ ಬದುಕಿಗೆ ಬೇಕಾದ ರೀತಿ ಸಾಹಿತ್ಯ ಸೃಷ್ಟಿಯಾಗಬೇಕು. ಬದುಕಿನಲ್ಲಿ ಇರುವ ಅಸಮಾನತೆ ಹೋಗಲಾಡಿಸಬೇಕು ಅಂತಹ ಸಾಹಿತ್ಯ ರಚನೆಯಾಗಬೇಕು. ಸಾಹಿತ್ಯ ರಚನೆಗೆ ಸಾಮಾನ್ಯ ಜನತೆ ಅಥವಾ ಶ್ರೀಸಾಮಾನ್ಯರು ಮೂಲ ಕಾರಣ. ಅವರು ಇಲ್ಲದಿದ್ದರೆ ಸಾಹಿತ್ಯ ರಚನೆಯಾಗುತ್ತಿರಲಿಲ್ಲ. ಸಾಮಾನ್ಯ ಜನತೆಯೇ ಸಾಹಿತ್ಯದ ಬೆನ್ನೆಲುಬು. 1935 ರಲ್ಲಿ ಚೋಮನದುಡಿಯಲ್ಲಿ ಘಟ್ಟದ ಕೆಳಗಿಂದ ಘಟ್ಟದ ಮೇಲೆ ಬಂದ ಕಾರ್ಮಿಕರಂತೆ ಕಳೆದ 15 ವರ್ಷಗಳಿಂದ ಅಸ್ಸಾಂ ಕಾರ್ಮಿಕರು ಬಹಳಷ್ಟು ಮಂದಿ ಮಲೆನಾಡಿಗೆ ಬಂದಿದ್ದಾರೆ’ ಎಂದರು.
'ತೇಜಸ್ವಿ ಕಾರಂತರ ಕೃತಿಗಳಲ್ಲಿ ಶ್ರೀಸಾಮಾನ್ಯ' ವಿಷಯ ಕುರಿತು ಕೃಷಿ ಲೇಖಕ ನರೇಂದ್ರ ರೈ ದೇರ್ಲ ಮಾತನಾಡಿ, 'ಕನ್ನಡ ನೆಲ ಜನರ ವಿವೇಕವನ್ನು ನಿರ್ಲಕ್ಷ್ಯ ಮಾಡಿಲ್ಲ. ಸಾಹಿತ್ಯ ಸಮ್ಮೇಳನ ಹಳ್ಳಿಗಳಲ್ಲಿ, ಶಾಲೆಗಳಲ್ಲಿ ನಡೆಯಬೇಕು. ತೇಜಸ್ವಿಗೆ ಕಾರಂತರು ಪರೋಕ್ಷ ಪ್ರೇರಕರು, ಕಾರಂತರು ಗಮನಶೀಲ ಲೇಖಕರಾಗಿದ್ದರು, ತೇಜಸ್ವಿ ಅನುಭವಶೀಲ ಲೇಖಕರು. ತೇಜಸ್ವಿ, ಕಾರಂತರು ಸಾಹಿತ್ಯ ಮೂಲಕ ನಮ್ಮೊಳಗೆ ಶ್ರೀಸಾಮಾನ್ಯರು ಇರುವುದನ್ನು ತೋರಿಸಿದ್ದಾರೆ' ಎಂದರು.
ಸಮ್ಮೇಳನದ ಅಧ್ಯಕ್ಷ ಜಾಳ್ಮರ ಸುಬ್ಬರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ, ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ವತ್, ಜಯಪುರ ಪಿಎಸಿಎಸ್ ಅಧ್ಯಕ್ಷ ಡಿ.ಬಿ.ರಾಜೇಂದ್ರ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.