
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾ ರಥೋತ್ಸವದಲ್ಲಿ ಸಾಹಿತ್ಯ ಸಂಶೋಧಕ ರವಿ ಹಂಜ ಅವರಿಗೆ ಪೀಠದ ‘ಜಗದ್ಗುರು ರೇಣುಕಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಳೆಹೊನ್ನೂರು: ನಾವು ಯಾರೂ ಜಾತಿಯ ಆಧಾರದಲ್ಲಿ ಬದುಕುತ್ತಿಲ್ಲ. ಧರ್ಮ ಯಾವುದಾದರೂ ತತ್ವ ಒಂದೇ. ದೇವನೊಬ್ಬ ನಾಮ ಹಲವು ಎಂಬ ನಂಬಿಕೆ ಇಟ್ಟುಕೊಂಡು ನಾವೆಲ್ಲ ಜೀವಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರನಾಥ ಸ್ವಾಮಿ ರಥೋತ್ಸವದಲ್ಲಿ ಅವರು ಮಾತನಾಡಿದರು.
ಲಿಂಗಾಯತ-ವೀರಶೈವ ಧರ್ಮದ ಕುರಿತು ರಾಜ್ಯದಲ್ಲಿ ವಿಭಿನ್ನವಾದ ಚರ್ಚೆ ಆರಂಭವಾಗಿತ್ತು. ಆಗ ಶ್ರೀಗಳ ಪಾದಕ್ಕೆ ನಮಸ್ಕರಿಸಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದೆ. ರಾಜ್ಯದಲ್ಲಿ ದೊಡ್ಡ ಚರ್ಚೆ, ಟೀಕೆ ಆಯ್ತು. ಆದರೆ, ನಾನು ಹೆದರಲಿಲ್ಲ. ನನ್ನ ಆತ್ಮಸಾಕ್ಷಿಗೆ ಬದುಕಬೇಕು ಎಂದು ನಿರ್ದರಿಸಿದೆ. ಭಕ್ತರಿಗೂ ಭಗವಂತನಿಗೂ ವ್ಯವಹಾರ ಮಾಡುವ ಸ್ಥಳ ದೇವಾಲಯ. ಮನೆಗಳಂತೆ ಮಠಗಳನ್ನೂ ಕಾಪಾಡಬೇಕು. ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ. ಅವು ಮನುಷ್ಯನ ಆತ್ಮ ವಿಶ್ವಾಸ ಹೆಚ್ಚಿಸಲು ಇರುವಂಥವು. ಪೀಠದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ₹ 5 ಕೋಟಿ ಬಿಡುಗಡೆ ಮಾಡಿ, ಪೂರ್ಣಗೊಂಡ ನಂತರ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಸಮಾಜದಲ್ಲಿ ಧರ್ಮ ಜಾಗೃತಿಗೊಳಿಸುವ ಕಾರ್ಯವನ್ನು ಹಲವಾರು ದಶಕಗಳಿಂದ ಪೀಠ ಮಾಡುತ್ತಾ ಬಂದಿದೆ. ಸಮಾಜವನ್ನು ತಿದ್ದಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಪೀಠ ಮಾಡುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಂಭಾಪುರಿ ಪೀಠದ ಅಭಿವೃದ್ಧಿಗೆ ₹5 ಕೋಟಿ ನೀಡಿದ್ದರು. ಅನ್ನ, ಅಕ್ಷರ, ಜ್ಞಾನ ದಾಸೋಹ ಮೂಲಕ ನಾಡನ್ನು ನಡೆಸುವ ಕೆಲಸವನ್ನು ಮಠಗಳು ಮಾಡುತ್ತಿರುವ ಕಾರಣ ಕೇವಲ ವೀರಶೈವ ಲಿಂಗಾಯತರಿಗಷ್ಟೇ ಅಲ್ಲ. ರಾಜ್ಯದಲ್ಲಿರುವ ಎಲ್ಲ ಮಠ ಮಾನ್ಯಗಳಿಗೂ ಅನುದಾನ ನೀಡಿದ್ದಾರೆ. ಸಮಾಜ ಜಾಗೃತಿ ಆಗಬೇಕಿದೆ. ಕೆಲವು ದುಷ್ಟ ಶಕ್ತಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಅದನ್ನು ಧಿಕ್ಕರಿಸಿ ಒಳ ಪಂಗಡವನ್ನು ಮರೆತು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕು’ ಎಂದರು.
51 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ಕೆ ಭೂಮಿ ಪೂಜೆ, ನೂತನ ಪುಷ್ಕರಿಣಿ, ಬಾಳೆಹೊನ್ನೂರು ರಂಭಾಪುರಿ ಪೀಠದ ರಸ್ತೆಯನ್ನು ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.
ಸಾಹಿತ್ಯ ಸಂಶೋಧಕ ರವಿ ಹಂಜ ಅವರಿಗೆ ₹1 ಲಕ್ಷ ನಗದು, ಸ್ಮರಣಿಕೆ ಒಳಗೊಂಡ ಪೀಠದ ‘ಜಗದ್ಗುರು ರೇಣುಕಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆ ಮಾಡಿದರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಪೀಠದ ವತಿಯಿಂದ ‘ರಾಜಧರ್ಮ ಸೇವಾ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿ ‘ವಾಯ್ಸ್ ಆಫ್ ವೀರಶೈವ ಲಿಂಗಾಯತ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿ ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿ, ಶಾಸಕ ಟಿ.ಡಿ. ರಾಜೇಗೌಡ, ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ಶಿವಮೊಗ್ಗದ ಶಾಂತಾ ಆನಂದ್, ಪ್ರಕಾಶ್ ಬೆಂಡಗೇರಿ, ಸಂಗಮೇಶ ಉತ್ತಂಗಿ ಭಾಗವಹಿಸಿದ್ದರು.
ಅಧಿಕಾರಿಗಳ ಮೇಲೆ ಗರಂ ಆದ ಡಿ.ಕೆ.ಶಿವಕುಮಾರ್
ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಸನಿಹಕ್ಕೆ ಬಂದ ಜನರನ್ನು ಕಂಡು ಡಿ.ಕೆ. ಶಿವಕುಮಾರ್ ಆಕ್ರೋಶಗೊಂಡರು. ಹೆಲಿಕಾಪ್ಟರ್ ನಿಲ್ಲುವ ಮೊದಲು ಜನ ಹತ್ತಿರ ಬಂದಾಗ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ. ‘ಶಾಸಕರ ಹಿಂಬಾಲಕರು ಬಂದಿದ್ದಾರೆ’ ಎನ್ನುತ್ತಿದ್ದಂತೆ ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಅರಿತು ಬಾಳುವುದರಿಂದ ಜೀವನದಲ್ಲಿ ಸುಖ–ಶಾಂತಿ ಪ್ರಾಪ್ತ
‘ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿಗೆ ಧರ್ಮಾಚರಣೆ ಮುಖ್ಯ. ಅರಿತು ಬಾಳುವುದರಿಂದ ಜೀವನದಲ್ಲಿ ಸುಖ–ಶಾಂತಿ ಪ್ರಾಪ್ತವಾಗುತ್ತದೆ. ವಿಶ್ವ ಬಂಧುತ್ವವನ್ನು ಸಾರಿದ ವೀರಶೈವ ಧರ್ಮ ವೃಕ್ಷದ ತಾಯ್ಬೇರಾಗಿ ಜೀವನ ದರ್ಶನದ ಅಮೂಲ್ಯ ಕೊಡುಗೆಯನ್ನು ಕೊಟ್ಟ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಸಕಲ ಜೀವರಾಶಿಗಳಿಗೆ ಸದಾ ಒಳಿತನ್ನೇ ಬಯಸಿದ ರೇಣುಕಾಚಾರ್ಯರು ಸತ್ಯ ಸಾಕ್ಷಾತ್ಕಾರ ಪಡೆದ ಪರಮಾಚಾರ್ಯರು. ಅವರ ನಡೆ ನುಡಿಗಳಲ್ಲಿ ಸತ್ಯದ ಬೆಳಕನ್ನು ಕಾಣುತ್ತೇವೆ’ ಎಂದು ರಂಭಾಪುರಿ ಸ್ವಾಮೀಜಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.