ADVERTISEMENT

ಆನೆ ಕ್ಯಾಂಪ್ ಇನ್ನೂ ದೂರL ತನೂಡಿ ಬಳಿ ಗುರುತಿಸಿದ್ದ ಜಾಗ ಬದಲಿಸಲು ಪ್ರಯತ್ನ

ವಿಜಯಕುಮಾರ್ ಎಸ್.ಕೆ.
Published 12 ಸೆಪ್ಟೆಂಬರ್ 2025, 7:23 IST
Last Updated 12 ಸೆಪ್ಟೆಂಬರ್ 2025, 7:23 IST
ಸಾಕಾನೆ
ಸಾಕಾನೆ   

ಚಿಕ್ಕಮಗಳೂರು: ಮಾನವ–ಕಾಡಾನೆ ಸಂಘರ್ಷ ತಡೆಯಲು ಜಿಲ್ಲೆಯಲ್ಲಿ ಆನೆ ಶಿಬಿರ ಸ್ಥಾಪಿಸುವ ಉದ್ದೇಶ ಇನ್ನೂ ದೂರವಾಗುವ ಲಕ್ಷಣಗಳಿವೆ. ಬಾಳೆಹೊನ್ನೂರು–ಕಳಸ ನಡುವಿನ ತನೂಡಿ ಸಮೀಪ ಜಾಗ ಸೂಕ್ತವೇ ಎಂಬುದರ ಬಗ್ಗೆ ಮರುಪರಿಶೀಲನೆ ನಡೆಸುತ್ತಿದೆ.

ಬಂಡೀಪುರ, ಶಿವಮೊಗ್ಗದ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿವೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳು ಮತ್ತು ಮಾನವ ನಡುವಿನ ಸಂಘರ್ಷ ಇದೆ. ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಈಗ ದೂರದ ಆನೆ ಬಿಡಾರಗಳಿಂದ ಸಾಕಾನೆಗಳನ್ನು ಕರೆಸಬೇಕಿದೆ.

ಏಳು ವರ್ಷಗಳಲ್ಲಿ ಕಾಡಾನೆ ದಾಳಿಗೆ ಜಿಲ್ಲೆಯಲ್ಲಿ 20 ಜನ ಬಲಿಯಾಗಿದ್ದಾರೆ. 10 ವರ್ಷಗಳಲ್ಲಿ ಆರು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ. ವಿದ್ಯುತ್ ಶಾಕ್ ಸೇರಿ ವಿವಿಧ ಕಾರಣಗಳಿಂದ 10 ಕಾಡಾನೆಗಳು ಸಹ ಮೃತಪಟ್ಟಿವೆ. ಅದರಲ್ಲೂ ಎರಡು–ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗಕ್ಕೆ 20ರಿಂದ 50 ಕಾಡಾನೆಗಳಿರುವ ಗುಂಪುಗಳು ದಾಳಿ ನಡೆಸುತ್ತಿದ್ದು, ಮಲೆನಾಡಿನಲ್ಲಿ ಜನ ಭಯದಲ್ಲೇ ಕಾಲ ತಳ್ಳುತ್ತಿದ್ದಾರೆ. ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗುತ್ತಿದೆ.

ADVERTISEMENT

ಆನೆ ದಾಳಿಯಿಂದ ಜೀವ ಹಾನಿಯಾದಾಗ ಪ್ರತಿಭಟನೆ ಹೆಚ್ಚಾಗುತ್ತದೆ. ಈ ವೇಳೆ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಅನುಮತಿ ಸಿಕ್ಕರೂ ಕುಮ್ಕಿ ಆನೆಗಳನ್ನು ಕರೆಸುವುದು ಸ್ಥಳೀಯ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಆದ್ದರಿಂದ ಚಿಕ್ಕಮಗಳೂರು ವೃತ್ತದಲ್ಲಿ ಕಾಡಾನೆ ಶಿಬಿರವೊಂದನ್ನು ತೆರೆಯಲು ಅರಣ್ಯ ಇಲಾಖೆ ಮುಂದಾಗಿದೆ.

ಅದರಂತೆ ತಜ್ಞರ ತಂಡ ರಚನೆ ಮಾಡಲಾಗಿತ್ತು. ಆ ತಂಡ ಎಂಟು ಸ್ಥಳಗಳನ್ನು ಗುರುತು ಮಾಡಿತ್ತು. ಅವುಗಳಲ್ಲಿ ಪ್ರಮುಖ ಮೂರು ಸ್ಥಳಗಳನ್ನು ತಂಡ ಶಿಫಾರಸು ಮಾಡಿತ್ತು. ಬಾಳೆಹೊನ್ನೂರು, ಮುತ್ತೋಡಿ ಅರಣ್ಯದಲ್ಲಿ ಎರಡು ಕಡೆ ಆನೆ ಶಿಬಿರಕ್ಕೆ ಸೂಕ್ತವಾದ ಜಾಗ ಇದೆ ಎಂದು ಗುರುತಿಸಿತ್ತು. 

ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ತಂಡವು 2024ರ ಸೆಪ್ಟೆಂಬರ್‌ನಲ್ಲಿ ಮೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯ ವಿಭಾಗದ ತನೂಡಿ ಬಳಿಯ ಜಾಗ ಸೂಕ್ತವಾಗಿದೆ ಎಂದು ನಿರ್ಧರಿಸಿತ್ತು.

ನೀರು ನಿರಂತರವಾಗಿ ಹರಿಯುವ ಸ್ಥಳ ಆಗಿರಬೇಕು, ಆನೆಗಳಿಗೆ ಆಹಾರ ಹತ್ತಿರದಲ್ಲಿ ಸಿಗುವಂತಿರಬೇಕು. ಲಾರಿಗಳ ಸಂಚಾರಕ್ಕೆ ಅನುಕೂಲ ಇರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡ ಸ್ಥಳ ಇದು ಎಂದು ಗುರುತಿಸಿತ್ತು. ತಜ್ಞರ ತಂಡ ಕೂಡ ಈ ಜಾಗಕ್ಕೆ ಒಪ್ಪಿಗೆ ಸೂಚಿಸಿತ್ತು. ಆನೆ ಶಿಬಿರ ಸ್ಥಾಪನೆಗೆ ಬೇಕಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸ್ಥಳೀಯ ಅಧಿಕಾರಿಗಳು ಸಲ್ಲಿಸಿದ್ದರು. ಆದರೆ, ಹಿರಿಯ ಅಧಿಕಾರಿಗಳ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪರ್ಯಾಯ ಜಾಗ ಹುಡುಕಾಟ

ತನೂಡಿ ಪ್ರದೇಶದಲ್ಲಿ ಹೆಚ್ಚು ಮರಗಳು ಇರುವುದರಿಂದ ಪರ್ಯಾಯ ಜಾಗದ ಚಿಂತನೆ ನಡೆಸಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಸ್ಥಳೀಯರ ವಿರೋಧ ಮತ್ತು ದಟ್ಟ ಅರಣ್ಯ ಆಗಿರುವುದರಿಂದ ಕಾನೂನಿನ ತೊಡಕು ಎದುರಾಗಬಾರದು ಎಂಬ ಕಾರಣಕ್ಕೆ ಬೇರೆ ಜಾಗ ಹುಡುಕಲು ಇಲಾಖೆಯ ಉನ್ನಾತಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಪರ್ಯಾಯ ಜಾಗ ಹುಡುಕಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.