ADVERTISEMENT

ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 11:26 IST
Last Updated 23 ಫೆಬ್ರುವರಿ 2026, 11:26 IST
<div class="paragraphs"><p>ಕೊಪ್ಪದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು</p></div>

ಕೊಪ್ಪದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು

   

ಚಿಕ್ಕಮಗಳೂರು: ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಭಾನುವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಲೆನಾಡಿನ ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ಥಳೀಯರು ಬಂದ್ ನಡೆಸಿದರು.

ಬಾಳೆಹೊನ್ನೂರು, ಜಯಪುರ, ಕಡಬಗೆರೆ, ಕೊಪ್ಪದಲ್ಲಿ ಅಂಗಡಿ ಮುಂಗಟ್ಟುಗಳು ಸೋಮವಾರ ಬೆಳಿಗ್ಗೆಯಿಂದ ಸಂಜೆ ತನಕ ಮುಚ್ಚಿದ್ದವು. ಶೃಂಗೇರಿ ಮತ್ತು ಎನ್.ಆರ್‌.ಪುರ ಪಟ್ಟಣದಲ್ಲೂ ಬೆಳಿಗ್ಗೆ ಬಂದ್ ವಾತಾವರಣ ಇತ್ತು. ಮಧ್ಯಾಹ್ನದ ನಂತರ ಕೆಲ ಅಂಗಡಿಗಳು ತೆರೆದುಕೊಂಡವು.

ADVERTISEMENT

ಬಾಳೆಹೊನ್ನೂರಿನಲ್ಲಿ ನೂರಾರು ರೈತರು ಮೌನ ಮೆರವಣಿಗೆ ನಡೆಸಿದರು. ನಂತರ ಸಭೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವೃತ್ತದಲ್ಲಿ ನಿಂತಿದ್ದ ಪೊಲೀಸ್‌ ಬಸ್ಸಿಗೆ ಹೂವು ಚೆಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.

ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕು. ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು. ಭಾನುವಾರ ನಡೆದ ಪ್ರತಿಭಟನೆ ವೇಳೆ ಅಮಾಯಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಅಲ್ಲದೇ ಹಲವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಾಳೆಹೊನ್ನೂರಿನಲ್ಲಿ ಪೊಲೀಸ್ ಬಸ್ಸಿಗೆ ಹೂ ಎರಚಿ ವಿಭಿನ್ನ ಪ್ರತಿಭಟನೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘‍ಪ್ರತಿಭಟನಾಕಾರರ ಮೇಲೆ ಹಾಕಿರುವ ಎಫ್‌ಐಆರ್ ಸಂಬಂಧ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಬೇಕು. 9 ಜನರ ಹೆಸರು ಮತ್ತು 20 ಇತರರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಿಕ್ಕ ಸಿಕ್ಕವರನ್ನು ಕರೆತಂದು ಹಿಂಸೆ ನೀಡಿದರೆ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಕ್ಷೇತ್ರ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗದ್ದೆಮನೆ ವಿಶ್ವನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.