ತರೀಕೆರೆ: ‘ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬರೂ ಸಮಾನತೆ, ಭ್ರಾತೃತ್ವ, ಸಮಪಾಲು, ಸಮಬಾಳ್ವೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ನವಜೀವನ ಚಾರಿಟಬಲ್ ಸೇವಾಸಂಸ್ಥೆಯ ಆಶ‍್ರಯದಲ್ಲಿ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ-1955, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಹಾಗೂ ಇತರೆ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ‘2024-25ರ ಬೀದಿ ನಾಟಕ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಯಾವ ಭಾಗದಲ್ಲಿ ದೌರ್ಜನ್ಯ ಮತ್ತು ಜಾತೀಯತೆಯ ಪ್ರಕರಣಗಳು ನಡೆದಿರುವುದನ್ನು ಗುರುತಿಸಿ ಸರ್ಕಾರ ಅಂತಹ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸಲು ಬೀದಿ ನಾಟಕ, ಭಿತ್ತಿಪತ್ರ ಮೊದಲಾದವುಗಳ ಮೂಲಕ ಪ್ರಚುರಪಡಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಕಾನೂನಿನ ಮಹತ್ವ ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ದೇವೇಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಎಚ್. ಪ್ರಶಾಂತ್, ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿದರು.
ನವಜೀವನ ಚಾರಿಟಬಲ್ ಸೇವಾಸಂಸ್ಥೆಯ ಕಾರ್ಯದರ್ಶಿ ದರ್ಶನ್ ಅವರ ತಂಡದಿಂದ ಬೀದಿನಾಟಕ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.