ADVERTISEMENT

ತರೀಕೆರೆ| ರೈತರಿಗೆ 7 ಗಂಟೆ ನಿರಂತರ ವಿದ್ಯುತ್: ಸಚಿವ ಕೆ.ಜೆ. ಜಾರ್ಜ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:05 IST
Last Updated 13 ಜನವರಿ 2026, 6:05 IST
ತರೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಶಾಸಕರಾದ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್‍, ಕಾಡಾ ಅಧ್ಯಕ್ಷ ಡಾ.ಅಂಶುಮತ್ ಇದ್ದರು
ತರೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಶಾಸಕರಾದ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್‍, ಕಾಡಾ ಅಧ್ಯಕ್ಷ ಡಾ.ಅಂಶುಮತ್ ಇದ್ದರು   

ತರೀಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ವಿವಿಧ ಮೂಲಗಳಿಂದ ಮುಂದಿನ ದಿನಗಳಲ್ಲಿ ರೈತರಿಗೆ ಪ್ರತಿ ದಿನ 7 ಗಂಟೆ ನಿರಂತರ ತ್ರಿಫೇಸ್‍ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ತಾಲ್ಲೂಕಿನ ನಂದಿ ಹೊಸಳ್ಳಿ ಗ್ರಾಮದಲ್ಲಿ 66/11 ಕೆ.ವಿ.ವಿದ್ಯುತ್ ಉಪಕೇಂದ್ರ ಉದ್ಘಾಟನೆ, ನಂದಿ ಗ್ರಾಮದಲ್ಲಿ ಕುಸುಮ್ ಸಿ.ಯೋಜನೆಯ ಸೌರ ವಿದ್ಯುತ್ ಘಟಕ, ಯರೇಹಳ್ಳಿಯಲ್ಲಿ 110/11 ಕೆ.ವಿ. ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ನಂತರ 13,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಯಿತು. ಈ ಬಗ್ಗೆ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸೂಚಿಸಿದರು. ಹಲವು ಹಂತಗಳಲ್ಲಿ ಪರಿಹಾರ ಮಾರ್ಗೋಪಾಯ ಕಂಡುಕೊಂಡು ರಾಜ್ಯದ ಜನರಿಗೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

2004ರಲ್ಲಿ ಅಕ್ರಮ-ಸಕ್ರಮ ಜಾರಿಯಾಗಿದ್ದು, ಇದರಲ್ಲಿ 4.5 ಲಕ್ಷ ರೈತರು ಸಕ್ರಮಕ್ಕಾಗಿ ಹಣ ಪಾವತಿಸಿದ್ದಾರೆ. ಇದರಲ್ಲಿ 500 ಮೀ. ಒಳಗಿರುವ ರೈತರ ಪಂಪ್‌ಸೆಟ್‍ಗಳಿಗೂ ಸಂಪರ್ಕ ಕಲ್ಪಿಸಲು ಈಗಾಗಲೇ ಸೂಚಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದೂರದವರಿಗೆ ಕುಸುಮ್‍ ಬಿ. ಯೋಜನೆಯಡಿ ಸಂಪರ್ಕ ಪಡೆದುಕೊಳ್ಳಬೇಕು. ಈ ಯೋಜನೆಯಲ್ಲಿ ಈಗಾಗಲೇ 30,000 ರೈತರು ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಶೀಘ್ರ ನೋಂದಾಯಿಸಿಕೊಂಡು ಸಂಪರ್ಕ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹ ರೈತರ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಎಂದರು.

ಕುಸುಮ್ ಸಿ ಯೋಜನೆಯಡಿ ವಿದ್ಯುತ್ ಉತ್ಪಾದಿಸಲು ಖಾಸಗಿಯವರಿಗೆ ವಹಿಸಲಾಗಿದ್ದು, ಸರ್ಕಾರದ ಜಮೀನಿನ ಜತೆಗೆ ಖಾಸಗಿಯವರ ಒಂದು ಎಕರೆಗೆ ಜಮೀನಿಗೆ ವಾರ್ಷಿಕ ₹ 25,000 ಲೀಸ್‍ಗೆ ನಿಗದಿಪಡಿಸಿದ್ದು, ಇದು ಮುಂದೆ ಹೆಚ್ಚಾಗಬಹುದು. ಇದರಿಂದ ಉತ್ಪಾದನೆಯಾದ ವಿದ್ಯುತ್‍ ಅನ್ನು ಸರ್ಕಾರ ಖರೀದಿಸಿ ರೈತರಿಗೆ ಸರಬರಾಜು ಮಾಡುವುದರಿಂದ ರಾಜ್ಯ ವಿದ್ಯುತ್ ಕೊರತೆಯನ್ನು ತಪ್ಪಿಸಬಹುದಾಗಿದೆ ಎಂದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‍ ಶಾಸಕರಿದ್ದು, ಅವರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಿ, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್‍ ಮಾತನಾಡಿ, 2013ರಲ್ಲಿ ಮೊದಲು ಶಾಸಕನಾಗಿದ್ದಾಗಲೇ ಅಮೃತಾಪುರ ಹೋಬಳಿಯ ಹಲವಾರು ಹಳ್ಳಿಗಳಲ್ಲಿ ರೈತರು ವಿದ್ಯುತ್‍ ಅಭಾವದಿಂದ ಬಳಲುತ್ತಿದ್ದರು. ಈ ಬಗ್ಗೆ ಸಚಿವರ ಬಳಿ ಮನವಿ ಮಾಡಿದ ನಂತರ, ಇದಕ್ಕೆ ಸ್ಪಂದಿಸಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ಈ ವಿದ್ಯುತ್‍ ವಿತರಣಾ ಕೇಂದ್ರದ ಸ್ಥಾಪನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡತಾಗುತ್ತದೆ ಎಂದರು.

ದೋರನಾಳು ಸಮೀಪ 220 ಕೆ.ವಿ.ವಿದ್ಯುತ್‍ ಸ್ವೀಕರಣ ಕೇಂದ್ರ (ರಿಸೀವಿಂಗ್ ಸ್ಟೇಷನ್), ಲಿಂಗದಹಳ್ಳಿ, ಮತ್ತು ಕೆಮ್ಮಣ್ಣುಗುಂಡಿ ಹೊಸ ವಿದ್ಯುತ್‍ ಮಾರ್ಗಗಳಿಗೆ ಪ್ರಸ್ತಾಪ ಸಲ್ಲಿಸಲಾಗಿದೆ.  ಬಾವಿಕೆರೆ, ಹುಣಸಘಟ್ಟ, ಬೇಲೇನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಮಂಜೂರು ಮಾಡಬೇಕು ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.

ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಬದಲಿ ಗ್ರಾಮೀಣ ಜನರ ಹಕ್ಕುಗಳನ್ನು ಕಸಿದುಕೊಂಡಿದೆ. ಇದರಲ್ಲಿ ಇದುವರೆಗೂ ಗ್ರಾಮ ಪಂಚಾಯಿತಿಯಲ್ಲಿಯೇ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಇದನ್ನು ಈಗ ತೆಗೆದಿದ್ದು ಕೇಂದ್ರ ಸರ್ಕಾರವೇ ಕಾಮಗಾರಿಗಳನ್ನು ನಿಗಧಿಪಡಿಸುವಂತೆ ರೂಪಿಸಲಾಗಿದೆ. ಇದನ್ನು ಸಾರ್ವರ್ತಿಕವಾಗಿ ವಿರೋಧಿಸಬೇಕಾಗಿದೆ ಎಂದರು.

ಸಭೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಕಾಡಾ ಅಧ್ಯಕ್ಷ ಡಾ.ಅಂಶುಮತ್, ಹಾದೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ರವೀಶಯ್ಯ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಉಪವಿಭಾಗಾಧಿಕಾರಿ ಎನ್.ವಿ.ನಟೇಶ್, ಮೆಸ್ಕಾಂ ಮುಖ್ಯ ಎಂಜಿನಿಯರ್ ಜಿ.ಪಿ.ನಾಗರಾಜ ಮೊದಲಾದವರಿದ್ದರು.

ಕೆಂಚರಾಜ್ ಸ್ವಾಗತಿಸಿದರು. ಶಿವಮೊಗ್ಗ ವಲಯದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೆ. ಸುರೇಶ್‍ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.