ಚಿಕ್ಕಮಗಳೂರು: ‘ಡಿ. 29ರಂದು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಅನಧಿಕೃತವಾಗಿ ರೋಟಿಬಾಜಿ ಕಾರ್ಯಕ್ರಮ ಆಚರಿಸಲಾಗಿದೆ ಹಾಗೂ ಗ್ಯಾರವಿ ಹಬ್ಬ ಆಚರಣೆಗೆ ಅನುಮತಿ ಕೊಟ್ಟ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಒತ್ತಾಯಿಸಿದರು.
‘ಡಿ. 29ರಂದು ಕೆಲವು ಮುಸಲ್ಮಾನರು ಶ್ರೀಗುರು ದತ್ತಾತ್ರೇಯ ಪೀಠಕ್ಕೆ ಬಂದು ಅಲ್ಲಿನ ಕೊಠಡಿಗಳಲ್ಲಿ ರೋಟಿಬಾಜಿ ತಯಾರಿಸಿದ್ದಾರೆ. ಮೆರವಣಿಗೆ ಮುಖಾಂತರ ದತ್ತ ಪೀಠದ ಗುಹೆಯ ಪ್ರಾರಂಭದ ಗೇಟ್ ಬಳಿ ಬಂದು ಫಾತೇಹ (ಪೂಜೆ) ಮಾಡಬೇಕು ಎಂದು ಆಗ್ರಹಿಸಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಆ ವೇಳೆ ಮುಜರಾಯಿ ಅಧಿಕಾರಿಗಳು ಹಾಗೂ ಪೊಲೀಸರು ಇವರನ್ನು ತಡೆದಿದ್ದಾರೆ. ಆಗ ಮುಜರಾಯಿ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ ಎಂದರು.
‘ಪೀಠದಲ್ಲಿ ಹೇಗೆ ಪೂಜೆ ಮಾಡಬೇಕು ಎಂಬುದನ್ನು ನ್ಯಾಯಾಲಯ ನಿರ್ಧಾರ ಮಾಡಿದೆ. ಅದರಂತೆ ಫಾತೇಹ ಮಾಡಲು ಅವಕಾಶವಿದೆ. ಆದರೆ, ಬೇಯಿಸಿದ ಪದಾರ್ಥಗಳ ಮೂಲಕ ಫಾತೇಹ ಮಾಡಲು ಅನುಮತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿಗಳು ಮುಜರಾಯಿ ಅಧಿಕಾರಿಗಳಿಗೆ ಏರು ದನಿಯಲ್ಲಿ ಮಾತನಾಡಿದ್ದು, ಇದು ತಪ್ಪು. ಪದೇ ಪದೇ ದತ್ತಪೀಠಕ್ಕೆ ಬಂದು ಗೊಂದಲ ಹಾಗೂ ಅಶಾಂತಿ ಸೃಷ್ಟಿಸಿತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಶಿವಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್, ಪಾಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.