ADVERTISEMENT

ಕ್ರೀಡಾಸಕ್ತರ ಕನಸಿಗೆ ಎಳ್ಳುನೀರು!

ಮೂಡಿಗೆರೆ: ಸೌಲಭ್ಯವಿಲ್ಲದೇ ಸೊರಗುತ್ತಿದೆ ಹೊಯ್ಸಳ ಕ್ರೀಡಾಂಗಣ

ಪ್ರಜಾವಾಣಿ ವಿಶೇಷ
Published 23 ನವೆಂಬರ್ 2020, 5:57 IST
Last Updated 23 ನವೆಂಬರ್ 2020, 5:57 IST
ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಭಾನುವಾರ ಕಂಡು ಬಂದ ಮದ್ಯದ ಬಾಟಲಿಗಳು.
ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಭಾನುವಾರ ಕಂಡು ಬಂದ ಮದ್ಯದ ಬಾಟಲಿಗಳು.   

ಮೂಡಿಗೆರೆ: ತಾಲ್ಲೂಕು ಕೇಂದ್ರದಲ್ಲಿರುವ ಹೊಯ್ಸಳ ಕ್ರೀಡಾಂಗಣದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಕ್ರೀಡಾಸಕ್ತರು, ಉದ್ಯೋಗಾಕಾಂಕ್ಷಿಗಳು, ನಿತ್ಯ ತಾಲೀಮು ನಡೆಸುವವರ ಕನಸು ಕಮರಿ ಹೋಗುತ್ತಿದೆ.

ಯುವಜನ ಹಾಗೂ ಕ್ರೀಡಾ ಇಲಾಖೆ ಸುಪರ್ದಿಯಲ್ಲಿರುವ ಹೊಯ್ಸಳ ಕ್ರೀಡಾಂಗಣವು ಸಮಸ್ಯೆಗಳ ಸರಮಾಲೆ ಯನ್ನೇ ಮುಡಿಗೇರಿಸಿಕೊಂಡಿದ್ದು, ವಾಯುವಿಹಾರಕ್ಕಾಗಿ ಬರುವವರು, ತಾಲೀಮು ನಡೆಸುವವರು ಸಮಸ್ಯೆಗಳ ನಡುವೆಯೇ ಸಾಗುವಂತಾಗಿದೆ.

ಕ್ರೀಡಾಂಗಣದ ಮುಂಭಾಗದಲ್ಲಿ ರುವ ಪ್ರವೇಶದ್ವಾರಕ್ಕೆ ಬೀಗ ಹಾಕಲಾಗಿದ್ದು, ಅದರ ಪಕ್ಕದಲ್ಲಿರುವ ತಿರುಗುವ ಗೇಟ್ ಕಳಚಿ ಬೀಳುವ ಸ್ಥಿತಿಗೆ ತಲುಪಿದ್ದು, ಅದನ್ನು ತಿರುಗಿಸಿ ಕ್ರೀಡಾಂಗಣ ಪ್ರವೇಶಿಸುವುದೇ ಸವಾಲಾಗುತ್ತದೆ. ಕ್ರೀಡಾಂಗಣದ ಪೂರ್ವ ಭಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಮೆಟ್ಟಿಲ ತುಂಬೆಲ್ಲಾ ನಿರ್ಗತಿಕರು ನಿರ್ಮಿಸಿರುವ ಒಲೆಗಳು, ಬೂದಿ ತ್ಯಾಜ್ಯಗಳೇ ತುಂಬಿ ತುಳುಕುತ್ತಿವೆ.

ADVERTISEMENT

ಕ್ರೀಡಾಂಗಣದ ನೈರುತ್ಯ ಭಾಗದಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವಿದ್ದು, ಅದರಲ್ಲಿರುವ ಶೌಚಾಲಯದ ತ್ಯಾಜ್ಯ ಕ್ರೀಡಾಂಗಣದ ಒಳಚರಂಡಿಗೆ ಹರಿ ಯುತ್ತಿದ್ದು, ಕ್ರೀಡಾಂಗಣದ ಉದ್ದ ಜಿಗಿತ ಅಂಕಣವಿರುವ ಪ್ರದೇಶವೆಲ್ಲವೂ ದುರ್ನಾತ ಬೀರುತ್ತಿದೆ. ಕ್ರೀಡಾಂಗಣ ದೊಳಗೆ ಕಿರುನೀರಿನ ಟ್ಯಾಂಕ್, ಶೌಚಾಲಯಗಳಿದ್ದರೂ ನಿತ್ಯವೂ ಬಾಗಿಲು ಹಾಕುವುದರಿಂದ ಸೌಲಭ್ಯ
ವಿ ದ್ದರೂ ಬಳಕೆಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕ್ರೀಡಾಂಗಣದ ಮುಂಭಾಗ ಹಾಗೂ ಒಳಾಂಗಣದಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದು, ಕ್ರೀಡಾಂಗಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಹೊಯ್ಸಳ ಕ್ರೀಡಾಂಗಣವು ತಾಲ್ಲೂಕಿನಲ್ಲಿರುವ ಏಕೈಕ ಸಾರ್ವಜನಿಕ ಕ್ರೀಡಾಂಗಣವಾಗಿದ್ದು, ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮುಂತಾದ ಇಲಾಖೆಗಳಿಗೆ ಸೇರ ಬಯಸುವ ಉದ್ಯೋಗಾಕಾಂಕ್ಷಿಗಳು ಇದೇ ಕ್ರೀಡಾಂಗಣದಲ್ಲಿ ದೈಹಿಕ ಸಾಮರ್ಥ್ಯಕ್ಕಾಗಿ ಅಭ್ಯಾಸ ನಡೆಸಬೇಕಾಗಿ ರುವುದರಿಂದ ಸವಲತ್ತುಗಳಿಲ್ಲದೇ ಉದ್ಯೋಗಾಕಾಂಕ್ಷಿಗಳ ಕನಸು ಕಮರುವಂತಾಗಿದೆ.

ಪ್ರತಿ ವರ್ಷವೂ ಪ್ರಾಥಮಿಕ ಶಾಲೆಯಿಂದ ಪದವಿವರೆಗಿನ ಕ್ರೀಡಾ ಕೂಟಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತವೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಸವಲತ್ತುಗಳಿಲ್ಲದ ಕ್ರೀಡಾಂಗಣಕ್ಕೆ ಹಿಡಿ ಶಾಪ ಹಾಕುವಂತಾಗಿದೆ. ಉತ್ತಮ ಕ್ರೀಡಾಂಗಣವಿಲ್ಲದಿರುವುದು ತಾಲ್ಲೂಕಿ ನಲ್ಲಿ ಕ್ರೀಡಾ ಪ್ರತಿಭೆಗಳನ್ನು ಹೊರ ತೆಗೆಯಲು ಅಡ್ಡಿಯಾಗುತ್ತಿದೆ ಎಂಬುದು ಕ್ರೀಡಾಸಕ್ತರ ಆರೋಪವಾಗಿದೆ.

ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ನೆಪದಲ್ಲಿ ಕ್ರೀಡಾಂಗಣದಲ್ಲಿದ್ದ ಮಲ್ಟಿ ಜಿಮ್ ಕೊಠಡಿ, ಬಯಲು ರಂಗಮಂದಿರವನ್ನು ಕೆಡವಿ ನಾಲ್ಕು ವರ್ಷ ಕಳೆದರೂ ಇದುವರೆಗೂ ಯಾವುದೇ ಕಟ್ಟಡವನ್ನು ನಿರ್ಮಿಸಿಲ್ಲ. ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾಕೂಟವನ್ನು ನಡೆಸಿದರೂ ಹೆಣ್ಣುಮಕ್ಕಳು ಶೌಚಾಲಯದಲ್ಲಿಯೇ ಕ್ರೀಡಾ ಸಮವಸ್ತ್ರಗಳನ್ನು ಧರಿಸುವ ದುಃಸ್ಥಿತಿ ಬಂದಿರುವುದಕ್ಕೆ ಕ್ರೀಡಾಸಕ್ತ ಹೆಣ್ಣುಮಕ್ಕಳು ಹಿಡಿಶಾಪ ಹಾಕುತ್ತಿದ್ದಾರೆ.

‘ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಟ್ರ್ಯಾಕ್ ಇಲ್ಲದ ಕಾರಣ ಅಭ್ಯಾಸ ಮಾಡಲು ಅಡ್ಡಿಯಾಗುತ್ತಿದೆ. ಹೈಜಂಪ್ ಹಾಗೂ ಲಾಗ್ ಜಂಪ್ ಮಾಡಲು ಕೂಡ ಸೂಕ್ತವಾದ ವ್ಯವಸ್ಥೆಯಿಲ್ಲ. ಕ್ರೀಡಾಂಗಣದ ಒಂದು ಬದಿಯಲ್ಲಿ ಮಾತ್ರ ವಿದ್ಯುತ್ ದೀಪದ ವ್ಯವಸ್ಥೆಯಿದ್ದು, ಮೂರ್ನಾಲ್ಕು ಕಡೆಗಳಲ್ಲಿ ಕತ್ತಲೆ ಆವರಿಸಿರುವುದರಿಂದ ಮಹಿಳೆಯರು ಸಂಜೆ ವೇಳೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಬರಲು ಭಯಪಡುವಂತಾ ಗುತ್ತದೆ’ ಎನ್ನುತ್ತಾರೆ ಸಬ್ ಇನ್‌ಸ್ಪೆಕ್ಟರ್ ಉದ್ಯೋಗಾಕಾಂಕ್ಷಿ ಪ್ರಣೀತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.