
ಚಿಕ್ಕಮಗಳೂರು: ಜಿಲ್ಲೆಯ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪಂಚ ಗ್ಯಾರಂಟಿಯ ಯೋಜನೆಗಳ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.
ಶಕ್ತಿ ಯೋಜನೆಯಡಿ ಚಿಕ್ಕಮಗಳೂರು, ಕಡೂರು ಹಾಗೂ ಮೂಡಿಗೆರೆ ಘಟಕಗಳ ಬಸ್‌ಗಳಲ್ಲಿಈವರೆಗೆ 5.48 ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ₹216 ಕೋಟಿ ವ್ಯಯಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ 2,44,353 ಪಡಿತರ ಚೀಟಿಗಳ 8,05,042 ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ₹226 ಕೋಟಿ ನೇರ ನಗದು ವರ್ಗಾವಣೆ ಮಾಡಲಾಗಿದೆ. 2025ರ ಫೆಬ್ರುವರಿಯಿಂದ ತಲಾ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ₹99 ಕೋಟಿ ಸೇರಿ ಒಟ್ಟಾರೆ ₹325 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,06,735 ಆರ್‌ಆರ್ ಸಂಖ್ಯೆಗಳ (ಕನಿಷ್ಠ 10 ಲಕ್ಷ ಫಲಾನುಭವಿಗಳು) ವಿದ್ಯುತ್ ಬಿಲ್‌ಗಳನ್ನು ಸರ್ಕಾರ ಭರಿಸುತ್ತಿದೆ. ಇದಕ್ಕಾಗಿ ಈವರೆಗೆ ₹ 304 ಕೋಟಿ ವ್ಯಯಿಸಿದೆ ಎಂದು ವಿವರಿಸಿದರು.
ಗೃಹಲಕ್ಷ್ಮಿ ಯೋಜನೆಯ ಮೂಲಕ ಜಿಲ್ಲೆಯ 2,62,862 ಯಜಮಾನಿಯರಿಗೆ ತಿಂಗಳಿಗೆ ₹2 ಸಾವಿರ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಈವರೆಗೆ 24 ಕಂತುಗಳಲ್ಲಿ ಒಟ್ಟು ₹1,261 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಲ್ಲಿ ಈವರೆಗೆ ಜಿಲ್ಲೆಯ 5,161 ಪದವಿಧರರು 59 ಡಿಪ್ಲೊಮಾ ಪದವೀಧರರಿಗಾಗಿ ₹13 ಕೋಟಿಯನ್ನು ಸರ್ಕಾರ ಭರಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮಗಳಿಗಾಗಿ ₹2,110 ಕೋಟಿಯನ್ನು ವ್ಯಯಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಮಂಜುನಾಥ್, ಚಂದ್ರಮೌಳಿ, ತಾಲ್ಲೂಕು ಸಮಿತಿ ಅಧ್ಯಕ್ಷ ಮಲ್ಲೇಶಸ್ವಾಮಿ, ಬಸವರಾಜ್, ಅನ್ಸಾರ್ ಅಲಿ, ನಾಗೇಶ್ ರಾಜ್ ಅರಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.