
ಗುಳ್ಳದಮನೆ(ನರಸಿಂಹರಾಜಪುರ): ಕಡಹಿನಬೈಲು ಗ್ರಾಮ ಪಂಚಾಯಿತಿಯ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಶನಿವಾರ ‘ಶಿಕ್ಷಣ ಜಾಗೃತಿ ಅಭಿಯಾನ ಹಾಗೂ 2026-27ನೇ ಸಾಲಿನ ದಾಖಲಾತಿ ಅಂದೋಲನ’ ನಡೆಸಿದರು.
ಗುಳ್ಳದಮನೆ ಸರ್ಕಾರಿ ಶಾಲೆಯ ವ್ಯಾಪ್ತಿಯ ಬರುವ ಮಾಕೋಡು, ಹಾಗಲಮನೆ, ಅಜ್ಜಿಗುಡ್ಡ, ಗುಳ್ಳದಮನೆ, ದೇವಾಲೆಕೊಪ್ಪ, ಕೆಸವಿ ಎಂಬ ಹಳ್ಳಿಗಳ ಮನೆ ಮನೆಗಳಿಗೆ ತೆರಳಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವಂತೆ ಪೋಷಕರಿಗೆ ಮನವಿ ಮಾಡಿದರು. ಬೇರೆ ಊರಿನಲ್ಲಿ ಓದುತ್ತಿರುವ ಮಕ್ಕಳನ್ನು ಕರೆ ತಂದು ನಿಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದಿಸುವಂತೆ ಪೋಷಕರಿಗೆ ಜಾಗೃತಿ ಮೂಡಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ವಿಜು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್. ಸಂತೋಷ್ ಕುಮಾರ್, ಗೌರವಾಧ್ಯಕ್ಷ ಸುನಿಲ್ ಕುಮಾರ್, ಸಂಘದ ನಿರ್ದೇಶಕರಾದ ಜಿ.ಎಂ. ಪ್ರಕಾಶ್, ಜಿ.ಎನ್. ಮಂಜಣ್ಣ, ಎಸ್.ಎಸ್. ಸತೀಶ್, ಜಿ.ಎನ್. ಅಶೋಕ್, ಲಿಜಿ, ಮುಖ್ಯಶಿಕ್ಷಕಿ ಬಿ.ಎಸ್. ಶಿಲ್ಪಕುಮಾರಿ, ಎಸ್.ಡಿ.ಎಂ.ಸಿ. ಸದಸ್ಯರಾದ ಶೃತಿ, ನಾಗೇಶ್, ಸುಧಾ ಇದ್ದರು.
ಗುಳ್ಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಚುವ ಹಂತ ತಲುಪಿತ್ತು. ಆ ಸಂದರ್ಭದಲ್ಲಿ ಶಿಕ್ಷಕಿಯಾಗಿ ವರ್ಗಾವಣೆಯಾಗಿ ಬಂದ ಬಿ.ಎಸ್. ಶಿಲ್ಪಕುಮಾರಿ ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ಮನೆ ಮನೆಗೆ ತೆರಳಿ ದಾಖಲಾತಿ ಹೆಚ್ಚಿಸಿದ್ದರು. ದಾನಿಗಳ ನೆರವಿನಿಂದ ₹8ರಿಂದ ₹10 ಲಕ್ಷ ವೆಚ್ಚದಲ್ಲಿ ಶಾಲೆಯ ಕಟ್ಟಡ ನವೀಕರಿಸಿದ್ದರು. ಶಾಲೆಯಲ್ಲಿ ದಾನಿಗಳ ನೆರವಿನಿಂದ ಈಗ ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.