
ಕಡೂರು: ತಾಲ್ಲೂಕಿನಲ್ಲಿ ನಿರಂತರವಾಗಿ ರಾತ್ರಿಯಿಡೀ ಮಳೆಯಾಗಿದ್ದು, ಹಳೆಯ ಮತ್ತು ಮಣ್ಣಿನ ಮನೆಗಳು ಕುಸಿಯುವ ಭೀತಿಯಲ್ಲಿವೆ. ತೋಟಗಳು, ಗದ್ದೆಗಳು ಜಲಾವೃತಗೊಂಡಿದ್ದು, 30ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಒಂದು ವಾರದಲ್ಲಿ ತಾಲ್ಲೂಕಿನಲ್ಲಿ 56 ಮನೆಗಳು ಕುಸಿದಿವೆ. ಯಗಟಿ ಹೋಬಳಿಯಲ್ಲೇ 25 ಮನೆಗಳು ಕುಸಿದಿದ್ದು, ಮಳೆಯ ನಡುವೆ ಜನ ತೊಂದರೆಗೀಡಾಗಿದ್ದಾರೆ. ಪ್ರತಿ ಹೋಬಳಿಯಲ್ಲೂ 3– 4 ಮನೆಗಳು ಕುಸಿದಿವೆ. ದೇವನೂರು ಸಮೀಪದ ಗಣಪತಿ ಹಳ್ಳಿ ಗ್ರಾಮದಲ್ಲಿ ನೂರಾರು ವರ್ಷ ಹಳೆಯ ಬಾವಿ ಕುಸಿದಿದ್ದು, ಸ್ಥಳಕ್ಕೆ ತಹಶೀಲ್ದಾರ್ ಪೂರ್ಣಿಮಾ ಮತ್ತು ಆರ್.ಐ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಕಡೂರು ಪಟ್ಟಣಕ್ಕೆ ಹೊಂದಿಕೊಂಡು ತುರುವನಹಳ್ಳಿ ಸಂಪರ್ಕಿಸುವ ದಾರಿಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಸಮೀಪದ ಅಡಿಕೆ ತೋಟಗಳು ಜಲಾವೃತಗೊಂಡಿವೆ. ಹಳ್ಳದಲ್ಲಿ ಮಂಗಳವಾರ ಕೊಚ್ಚಿಹೋದ ಎತ್ತುಗಳ ಮರಣೋತ್ತರ ವರದಿ ಪಡೆದು ಪರಿಹಾರ ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗೆ ತಹಶೀಲ್ದಾರ್ ವರದಿ ಸಲ್ಲಿಸಿದ್ದಾರೆ.
ಜಿಗಣೇಹಳ್ಳಿ ಸಮೀಪ, ಮಲ್ಲೇಶ್ವರ ರಸ್ತೆಯ ಕುಂತಿಹೊಳೆ, ತಂಗಲಿ ರಸ್ತೆ, ಯಗಟಿಪುರ ಮೊದಲಾದ ಕಡೆ ವೇದಾನದಿ ತುಂಬಿ ಹರಿದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ದೇವನೂರು ಕೆರೆಯ ಕೆಳ ಭಾಗದಲ್ಲಿ ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ಹಲವು ಕಡೆ ಈರುಳ್ಳಿ, ರಾಗಿ, ಜೋಳ ಮತ್ತು ಮೆಣಸಿನ ಸಸಿ, ಟೊಮೆಟೊ ಬೆಳೆಗಳಿಗೆ ನೀರು ನುಗ್ಗಿದೆ.
ಮಳೆಯಿಂದಾಗಿ ಅಡಿಕೆ ಕೊಯಿಲಿಗೆ ತಡೆ ಉಂಟಾಗಿದ್ದು, ಬೇಯಿಸಿದ ಅಡಿಕೆ ಒಣಗಿಸಲು ಸಮಸ್ಯೆಯಾಗುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಬೇಯಿಸಿದ ಅಡಿಕೆಯ ಮೇಲೆ ಶಿಲೀಂಧ್ರ ಬೆಳೆಯುವ ಸಾಧ್ಯತೆ ಇದೆ. ಯಗಟಿ ಬಳಿಯ ಹೋಚಿಹಳ್ಳಿ, ಯಳ್ಳಂಬಳಸೆ, ಸೀತಾಪುರ, ಮುಗಳಿಕಟ್ಟೆ, ಮಲ್ಲಿದೇವಿಹಳ್ಳಿ, ಸಿಂಗಟಗೆರೆ, ಮುತ್ತಾಣಿಗೆರೆ, ಕೆ.ಬಿದರೆ, ಜಿಗಣೇಹಳ್ಳಿ, ಜೋಡಿತಿಮ್ಮಾಪುರ, ಹುಲ್ಲೇಹಳ್ಳಿ, ಪಿಳ್ಳೇನಹಳ್ಳಿ, ಹುಲಿಕೆರೆ, ಬಾಣೂರು ಭಾಗಗಳಲ್ಲಿ 56 ಮನೆಗಳು ಕುಸಿದಿವೆ. ನೂರಾರು ಎಕರೆ ಜಮೀನು ಮತ್ತು ತೋಟಗಳು ಜಲಾವೃತಗೊಂಡಿವೆ.
ಹೊಸ ಮದಗದಕೆರೆ, ಹಳೆ ಮದಗದಕೆರೆ, ದೊಡ್ಡಬುಕ್ಕಸಾಗರ, ಚಿಕ್ಕಂಗಳ, ಕಡೂರು ಸಂತೆಕೆರೆ, ಬೀರೂರು ದೇವನಕೆರೆ, ಹಿರಿಯಂಗಳ ಕೆರೆ, ಬಾಕಿನಕೆರೆ, ತಂಗಲಿ ಊರ ಮುಂದಿನ ಕೆರೆ, ಚಿಕ್ಕಪಟ್ಟಣಗೆರೆ ಕೆರೆ, ಎಂ.ಕೋಡಿಹಳ್ಳಿ ಕೆರೆ, ಹಿರೆನಲ್ಲೂರು, ಕುಕ್ಕಸಮುದ್ರ, ಚೌಳಹಿರಿಯೂರು ಊರಮುಂದಿನ ಕೆರೆ, ಯಳ್ಳಂಬಳಸೆ, ಕೆ.ಬಿದರೆ, ಗರ್ಜೆ, ಅಣ್ನೇಗೆರೆ, ಗರುಗದ ಹಳ್ಳಿ, ಯಗಟಿ, ಅಯ್ಯನಕೆರೆ, ಬ್ರಹ್ಮಸಮುದ್ರ, ದೇವನೂರು ದೊಡ್ಡಕೆರೆಗಳು ಮೈದುಂಬಿ ಕೋಡಿ ಬಿದ್ದಿವೆ.
ತಾಲ್ಲೂಕಿನಲ್ಲಿ ಗುರುವಾರ ಬೆಳಗ್ಗಿನವರೆಗೆ ಬೀರೂರು 6.26 ಸೆಂ.ಮೀ, ಸಖರಾಯಪಟ್ಟಣ 1.04 ಸೆಂ.ಮೀ, ಎಮ್ಮೆದೊಡ್ಡಿ 1.12 ಸೆಂ.ಮೀ, ಯಗಟಿ 2.72, ಬಾಸೂರು 4.6, ಸಿಂಗಟಗೆರೆ 4.82, ಪಂಚನಹಳ್ಳಿ 1.08 ಸೆಂ.ಮೀ ಮಳೆಯಾಗಿದೆ. ಒಂದು ವಾರದಲ್ಲಿ ವಾಡಿಕೆಗಿಂತ ಸರಾಸರಿ ಶೇ 500ರಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.