ADVERTISEMENT

ಕಡೂರು | ಶಿಕ್ಷಣದ ವ್ಯಾಪಾರೀಕರಣ ದುರಂತ: ನ್ಯಾಯಾಧೀಶ ಎಚ್‌.ಪಿ. ಸಂದೇಶ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:11 IST
Last Updated 17 ಫೆಬ್ರುವರಿ 2026, 3:11 IST
ಬೀರೂರಿನ ಗುರುಭವನದಲ್ಲಿ ಶನಿವಾರ ಮಕ್ಕಳೊಂದಿಗೆ ಸಂವಾದ ನಡೆಸಿದ ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ಎಚ್‌.ಪಿ.ಸಂದೇಶ್‌ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಯಿತು.
ಬೀರೂರಿನ ಗುರುಭವನದಲ್ಲಿ ಶನಿವಾರ ಮಕ್ಕಳೊಂದಿಗೆ ಸಂವಾದ ನಡೆಸಿದ ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ಎಚ್‌.ಪಿ.ಸಂದೇಶ್‌ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಯಿತು.   

ಕಡೂರು: ‘ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ದುರಂತವಾಗಿದ್ದು, ಇದನ್ನು ತಡೆಯಲು ಜನರೇ ಜಾಗೃತರಾಗಬೇಕು’ ಎಂದು ಹೈಕೋರ್ಟ್‌ ನ್ಯಾಯಾಧೀಶ ಎಚ್‌.ಪಿ. ಸಂದೇಶ್‌ ಕರೆ ನೀಡಿದರು.

ಬೀರೂರು ಶೈಕ್ಷಣಿಕ ವಲಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುರುಭವನದಲ್ಲಿ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಯುವಸ್ಫೂರ್ತಿ ಅಕಾಡೆಮಿ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

ಶಿಕ್ಷಣ, ಆರೋಗ್ಯ ಸಮರ್ಪಕವಾಗಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ನಮ್ಮನ್ನು ಆಳುವವರಿಗೆ ಸ್ವಾರ್ಥವೇ ಮುಖ್ಯವಾಗಿದೆ. ರಾಷ್ಟ್ರ ನಾಯಕರಲ್ಲಿ ದೂರದರ್ಶಿತ್ವದ ಕೊರತೆ ಇದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಮಾಜದಲ್ಲಿದ್ದ ಆದರ್ಶಗಳು ಮರೆಯಾಗಿವೆ. ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ, ನಮ್ಮ ಶಾಲೆಗಳಿಗೆ ವಿದ್ಯಾರ್ಥಿಗಳು ಏಕೆ ಬರುತ್ತಿಲ್ಲ ಎಂದು ಚಿಂತಿಸುವ ವ್ಯವಧಾನವೂ ಸರ್ಕಾರಗಳಿಗೆ ಇಲ್ಲವಾಗಿದೆ ಎಂದು ಟೀಕಿಸಿದರು.

ADVERTISEMENT

ಶಿಕ್ಷಕರು ಅಧ್ಯಯನ ಶೀಲರಾಗಬೇಕು. ಪಡೆಯುವ ಸಂಬಳಕ್ಕೆ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡಬೇಕು. ಮಕ್ಕಳ ಕಲಿಕೆಯಲ್ಲಿ ಇರಬಹುದಾದ ನ್ಯೂನತೆಗಳನ್ನು ಗುರುತಿಸಿ ಸರಿಪಡಿಸಲು ಪ್ರಯತ್ನಿಸಬೇಕು, ಅವಹೇಳನ ಮಾಡಬಾರದು. ಇಂದು ಕಾಯಂ ಉಪನ್ಯಾಸಕರು, ಶಿಕ್ಷಕರಿಗಿಂತ ಅತಿಥಿ ಉಪನ್ಯಾಸಕರು, ಶಿಕ್ಷಕರು ಕಡಿಮೆ ಸಂಬಳಕ್ಕೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ ಎಂಬ ವರದಿಗಳಿವೆ. ಕಾಯಂ ಶಿಕ್ಷಕರು ಕೆಲಸ ಮಾಡುವ ಮೂಲಕ ಸಾಮರ್ಥ್ಯ ಒರೆಗೆ ಹಚ್ಚಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ರಚನಾತ್ಮಕ ಚಿಂತನೆಗಳು, ಸೇವಾ ಮನೋಭಾವ, ವೃತ್ತಿಯಲ್ಲಿ ಕೌಶಲ ಕಡಿಮೆಯಾಗುತ್ತಿದೆ. ಜ್ಞಾನ ವೃದ್ಧಿಸಿಕೊಂಡು ಅದನ್ನು ದುರ್ಬಲರ ಏಳಿಗೆಗೆ ಬಳಸಬೇಕು ಎಂದು ಹೇಳಿದರು.

ಸಖರಾಯಪಟ್ಟಣದ ಸೇವಾಲಾಲ್‌ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ, ಕಲಿತದ್ದು ಬೇಗನೆ ಮರೆಯುತ್ತದೆ. ಇದಕ್ಕೆ ಪರಿಹಾರ ಏನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಾಧೀಶರು, ಏಕಾಗ್ರತೆ, ಸಮಯ ಸಿಕ್ಕಾಗ ಮತ್ತೆ ಓದುವುದು. ವಿಷಯವನ್ನು ಅರ್ಥ ಮಾಡಿಕೊಂಡು ಮನನ ಮಾಡುವುದು ಸುಲಭದ ಪರಿಹಾರ. ಓದಿ ಬರೆಯುವ ಮೂಲಕ ವಿಷಯ ನೆನಪುಳಿಯುತ್ತದೆ ಎಂದು ಕಿವಿಮಾತು ಹೇಳಿದರು. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಸಿಕ್ಕ ತಕ್ಷಣ ಅದನ್ನು ಅವಲೋಕಿಸಿ, ಉತ್ತರ ಗೊತ್ತಿರುವ ಪ್ರಶ್ನೆ ಸಂಖ್ಯೆ ನಮೂದಿಸಿ ಉತ್ತರ ಬರೆಯಲು ಮುಂದಾಗಿ. ಆದಷ್ಟು ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ಸಮಯದ ಸದ್ಬಳಕೆ ಬಗ್ಗೆ ವೇಳಾಪಟ್ಟಿ ಹಾಕಿಕೊಳ್ಳಿ. ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯ ಕಠಿಣ ಎಂಬ ಮನೋಭಾವ ತೆಗದುಹಾಕಿ. ಏಕಾಗ್ರತೆಯಿಂದ ಸತತ ಅಭ್ಯಾಸದಿಂದ ಕಷ್ಟ ಎನಿಸಿದ ವಿಷಯಗಳನ್ನು ಸರಳವಾಗಿಸಲು ಯತ್ನಿಸಿ. ವೇಗವಾಗಿ ತಪ್ಪಿಲ್ಲದೆ ಬರೆಯುವುದನ್ನು ರೂಢಿಸಿಕೊಳ್ಳಿ. ಮೌಲ್ಯಮಾಪಕರಿಗೆ ಬರೆದಿದ್ದು ಅರ್ಥವಾಗುವಂತೆ ಉತ್ತರ ಬರೆಯಿರಿ ಎಂದು ಸಲಹೆ ನೀಡಿದರು.

ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಉಳಿವಿಗೆ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ಸೂಚಿಸಲು ಬರುವುದಿಲ್ಲವೇ ಎಂದು ಶಿಕ್ಷಕ ಸಂಪತ್‌ ಕುಮಾರ್‌ ಕೇಳಿದರು. ‘ಆಡಳಿತದ ಇನ್ನೊಂದು ಅಂಗದ ಬಗ್ಗೆ ತೀರ್ಮಾನ ಹೇಳಲು ಮಧ್ಯ ಪ್ರವೇಶಿಸಿದರೆ ಸಂಘರ್ಷಕ್ಕೆ ಎಡೆಯಾಗುತ್ತದೆ. ಸೂಕ್ತ ಸನ್ನಿವೇಶಗಳಲ್ಲಿ ನ್ಯಾಯಾಲಯವು ಶಾಸಕಾಂಗ, ಕಾರ್ಯಾಂಗದ ಮೇಲೆ ಚಾಟಿ ಬೀಸಲು ಹಿಂಜರಿಯುವುದಿಲ್ಲ ಎಂದು ಉತ್ತರಿಸಿದರು.

ನ್ಯಾಯಾಂಗ, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.