ADVERTISEMENT

ಚಿಕ್ಕಮಗಳೂರು: ಕಾಡುಕೋಣಗಳ ಸ್ಥಳಾಂತರಕ್ಕೆ ಆಲೋಚನೆ

ಮಾನವ–ಕಾಡುಕೋಣ ಸಂಘರ್ಷ: ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿರುವ ಅಧಿಕಾರಿಗಳ ತಂಡ

ವಿಜಯಕುಮಾರ್ ಎಸ್.ಕೆ.
Published 6 ಮಾರ್ಚ್ 2025, 7:21 IST
Last Updated 6 ಮಾರ್ಚ್ 2025, 7:21 IST
ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡುಕೋಣ ಸೆರೆ ಹಿಡಿದು ಸ್ಥಳಾಂತರ ಮಾಡುತ್ತಿರುವುದು
ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡುಕೋಣ ಸೆರೆ ಹಿಡಿದು ಸ್ಥಳಾಂತರ ಮಾಡುತ್ತಿರುವುದು   

ಚಿಕ್ಕಮಗಳೂರು: ಮಾನವ ಮತ್ತು ಕಾಡುಕೊಣಗಳ ಸಂಘರ್ಷ ತಡೆಯಲು ಇರುವ ಸಾಧ್ಯತೆಗಳ ಬಗ್ಗೆ ಅರಣ್ಯ ಇಲಾಖೆ ಆಲೋಚನೆ ನಡೆಸುತ್ತಿದೆ. ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದು, ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನವನ್ನೂ ನಡೆಸಿದೆ. ಇದೇ ಮಾದರಿ ಅಳವಡಿಸಿಕೊಳ್ಳಲು ತಯಾರಿ ನಡೆಸಿದೆ.

ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷದ ಜೊತೆಗೆ ಕಾಡುಕೋಣ ಮತ್ತು ಮಾನವ ಸಂಘರ್ಷವೂ ಹೆಚ್ಚಾಗಿದೆ. ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ಇತ್ತೀಚೆಗೆ ಕಳಸ ಬಂದ್ ಕೂಡ ನಡೆದಿತ್ತು. ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಗಂಭೀರವಾಗಿ ಆಲೋಚನೆ ನಡೆಸಿದೆ.

ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಮಾದರಿ ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದಾರೆ. 

ADVERTISEMENT

ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣಗಳ ಸಂತತಿ ಕಡಿಮೆಯಾಗಿತ್ತು. 1998ರಲ್ಲಿ ಕೊನೆಯ ಕಾಡುಕೋಣವೂ ಮೃತಪಟ್ಟಿತ್ತು. ಬಾಂಧವಗಡದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. 2011ರಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಗ 170ಕ್ಕೂ ಹೆಚ್ಚು ಕಾಡುಕೋಣಗಳು ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿವೆ ಎಂದು ಅಧ್ಯಯನಕ್ಕೆ ತೆರಳಿದ್ದ ಅಧಿಕಾರಿಗಳು ಹೇಳುತ್ತಾರೆ.

ಕರ್ನಾಟಕದಲ್ಲಿ ಆನೆಗಳನ್ನು ಸೆರೆ ಹಿಡಿದು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಹಾವಳಿ ಮಾಡುವ ಹುಲಿ ಮತ್ತು ಚಿರತೆಗಳನ್ನೂ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕಾಡುಕೋಣಗಳ ಸ್ಥಳಾಂತರ ಈವರೆಗೆ ರಾಜ್ಯದಲ್ಲಿ ಆಗಿಲ್ಲ. ಮಧ್ಯ ಪ್ರದೇಶದಲ್ಲಿ ಸ್ಥಳಾಂತರ ಪ್ರಕ್ರಿಯೆ ಹೇಗೆ ನಡೆಸಲಾಗುತ್ತಿದೆ ಎಂಬುದರ ಕುರಿತು ಅಧ್ಯಯನ ನಡೆಸಲು ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ತಂಡ ಇತ್ತೀಚೆಗೆ ಮಧ್ಯ ಪ್ರದೇಶಕ್ಕೆ ಭೇಟಿ ನೀಡಿತ್ತು.

ಜಿಲ್ಲೆಯಲ್ಲೂ ಜನವಸತಿ ಪ್ರದೇಶದಲ್ಲಿರುವ ಕಾಡುಕೋಣಗಳನ್ನು ಸ್ಥಳಾಂತರ ಮಾಡಲು ಸಾಧ್ಯವಿದೆ ಎಂಬ ವರದಿಯನ್ನು ಅಧಿಕಾರಿಗಳ ತಂಡ ಸಿದ್ಧಪಡಿಸಿದೆ. ಸರ್ಕಾರ ಕೂಡ ಸಕಾರಾತ್ಮಕ ಅಭಿಪ್ರಾಯ ಹೊಂದಿದೆ. ಸ್ಥಳಾಂತರಕ್ಕೆ ತೀರ್ಮಾನ ಕೈಗೊಂಡರೆ ಅದಕ್ಕೆ ಬೇಕಿರುವ ಮಾರ್ಗದರ್ಶಿ ಸೂತ್ರಗಳನ್ನು(ಎಸ್‌ಒಪಿ) ತಯಾರಿಸಬೇಕಿದೆ. ವಾಹನಗಳು ಸೇರಿ ಅಗತ್ಯವಿರುವ ಪರಿಕರ ಬೇಕಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ತಂಡಗಳನ್ನು ರಚನೆ ಮಾಡಬೇಕು, ಸಿಬ್ಬಂದಿಗೆ ತರಬೇತಿ ಬೇಕಾಗುತ್ತದೆ. ಈ ಎಲ್ಲಾ ಕಾರ್ಯಕ್ಕೆ ಇನ್ನೂ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಧ್ಯ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿದ್ದೇವೆ. ಅಲ್ಲಿ ಅತ್ಯಂತ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಸಂಪೂರ್ಣ ಯಶಸ್ವಿಯಾಗಿದೆ. ಕಾಡುಕೋಣ–ಮಾನವ ಸಂಘರ್ಷ ಕಡಿಮೆ ಮಾಡಲು ನಾವೂ ಈ ಮಾದರಿ ಅಳವಡಿಸಿಕೊಳ್ಳಬಹುದು.
–ಯಶಪಾಲ್ ಕ್ಷಿರಸಾಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು

ಸ್ಥಳಾಂತರ ಪ್ರಕ್ರಿಯೆ ಹೇಗೆ

ಕಾಡುಕೋಣಗಳು ಅತ್ಯಂತ ಸೂಕ್ಷ್ಮ ವನ್ಯಜೀವಿ ಆಗಿರುವುದರಿಂದ ಅತ್ಯಂತ ಜಾಗರೂಕತೆಯಿಂದ ಸ್ಥಳಾಂತರ ಮಾಡಬೇಕಿದೆ. ಮಧ್ಯ ಪ್ರದೇಶದಲ್ಲಿ ಆನೆಗಳ ಮೂಲಕ ಕಾಡಿಗೆ ತೆರಳಿ ಕಾಡುಕೋಣಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗುತ್ತಿದೆ. ತರಬೇತಿ ಪಡೆದ ಸಿಬ್ಬಂದಿ ಮತ್ತು ಅಧಿಕಾರಿಗಳ ಎಂಟಕ್ಕೂ ಹೆಚ್ಚು ತಂಡ ಈ ಕಾರ್ಯಚರಣೆ ನಡೆಸುತ್ತಿವೆ ಎಂದು ಅಧ್ಯಯನಕ್ಕೆ ತೆರಳಿದ್ದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯಾವ ಯಾವ ಕಾಡುಣೋಣಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ಬೇರೆ ಬೇರೆ ವಯಸ್ಸಿನ ಕಾಡುಕೋಣಗಳನ್ನು ಗುರುತಿಸಿ ಅವುಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗುತ್ತಿದೆ. ಬಳಿಕ ಅವುಗಳನ್ನು ವಾಹನಗಳು ಬರುವ ಜಾಗದ ತನಕ ಸಿಬ್ಬಂದಿಯೇ ಹೊತ್ತು ತರುತ್ತಾರೆ. ವಿಶೇಷವಾಗಿ ವಿನ್ಯಾಸ ಮಾಡಿರುವ ಟ್ರಕ್‌ಗಳಲ್ಲಿ ಸಾಗಿಸಲಾಗತ್ತದೆ. ಒಂದೆಡೆ ಹಿಡಿದ ಕಾಡುಕೋಣಗಳನ್ನು ಮತ್ತೊಂದು ಕಾಡಿಗೆ ನೇರವಾಗಿ ಬಿಡುವಂತಿಲ್ಲ. ಆ ವಾತಾವರಣಕ್ಕೆ ಹೊಂದಿಸಲು ನಿರ್ದಿಷ್ಟ ಜಾಗದಲ್ಲಿ ಕೆಲ ದಿನಗಳ ಕಾಲ ಇರಿಸಲಾಗುತ್ತದೆ. ಅವುಗಳು ಆ ವಾತವರಣಕ್ಕೆ ಹೊಂದಿಕೊಂಡ ಬಳಿಕವೇ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.