ಚಿಕ್ಕಮಗಳೂರು: ಕರ್ನಾಟಕದ ಕಾಫಿಯನ್ನು ಮೌಲ್ಯವರ್ಧನೆ ಮಾಡಿ ಬ್ರ್ಯಾಂಡ್ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 2023–24ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪವಾದ ಈ ವಿಷಯ ಚರ್ಚೆಯ ಹಂತದಲ್ಲಿದೆ.
ರಾಜ್ಯ ಸರ್ಕಾರ ಮೊದಲ ಬಾರಿಗೆ 2023–24ನೇ ಸಾಲಿನ ಬಜೆಟ್‌ನಲ್ಲಿ ಕಾಫಿ ಬ್ರ್ಯಾಂಡಿಂಗ್ ವಿಷಯ ಪ್ರಸ್ತಾಪಿಸಿತ್ತು. ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯವು ಜಿ.ಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿತ್ತು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿಯನ್ನು ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇದೆ.
‘ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಎರಡು ಸಭೆಗಳು ನಡೆದಿವೆ. ಕಾಫಿಗೆ ಯಾವ ರೀತಿಯ ಬ್ರ್ಯಾಂಡ್ ರೂಪ ನೀಡುವುದು ಎನ್ನುವದರ ಬಗ್ಗೆ ಇನಷ್ಟು ಚರ್ಚೆಗಳು ನಡೆಯಬೇಕಿದೆ. ಸರ್ಕಾರ ಕರೆದರೆ ಸಮಾಲೋಚನೆ ನಡೆಸಲು ಸಿದ್ಧರಿದ್ದೇವೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.
‘ಎರಡು ಸಭೆಗಳನ್ನು ಹಿರಿಯ ಅಧಿಕಾರಿಗಳು ನಡೆಸಿದ್ದಾರೆ. ವಿಯಟ್ನಾಂ ಕಾಫಿ, ಬ್ರೆಜಿಲ್ ಕಾಫಿ, ಕೊಲಂಬಿಯಾ ಕಾಫಿ ರೀತಿಯಲ್ಲಿ ಪ್ರಪಂಚದಲ್ಲಿ ಎಲ್ಲಿ ಹೋದರೂ ಸಿಗುವಂತೆ ಇಂಡಿಯಾ ಕಾಫಿ ಎಂಬ ಬ್ರ್ಯಾಂಡ್ ಮಾಡಬೇಕು ಎಂಬ ಆಲೋಚನೆ ಅಧಿಕಾರಿಗಳಲ್ಲಿ ಇದೆ. ಇನ್ನಷ್ಟು ಚರ್ಚೆಗಳು, ಸಮಾಲೋಚನೆಗಳು ನಡೆಯಬೇಕಿದೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.