
ಕಡೂರು: ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕಡೂರಿನ ಹೊರವಲಯದಲ್ಲಿ ಈಗ ಕೆಲ ಉದ್ಯಮಗಳು ಕಾರ್ಯಾರಂಭ ಮಾಡಲು ಮುಂದಾಗಿದ್ದು, ಉದ್ಯೋಗ ಆಕಾಂಕ್ಷಿಗಳಲ್ಲಿ ಆಶಾಭಾವನೆ ಮೂಡಿದೆ.
ಪಟ್ಟಣದ ನಗದಿಯಾತ್ ಕಾವಲು ಕೈಗಾರಿಕಾ ಪ್ರದೇಶದಲ್ಲಿ ಗುಜರಾತ್ ಮೂಲದ ಮ್ಯಾಫ್ ಗಾರ್ಮೆಂಟ್ ಕಂಪನಿಗೆ 20 ಎಕರೆ ಭೂಮಿ ಹಂಚಿಕೆಯಾಗಿದ್ದು, ಉದ್ಯಮದ ಘಟಕ ಆರಂಭಕ್ಕಾಗಿ ಕಾಮಗಾರಿ ಭರದಿಂದ ನಡೆದಿದೆ. ಈಗಾಗಲೇ ಸಾವಿರಾರು ಮಹಿಳೆಯರು ಇಲ್ಲಿ ತರಬೇತಿ ಪಡೆದು ಪ್ರಾಯೋಗಿಕವಾಗಿ ಕೆಲಸವನ್ನೂ ಆರಂಭಿಸಿದ್ದಾರೆ.
‘ಕೃಷಿ ಉಪಕರಣಗಳ ತಯಾರಿಕಾ ಉದ್ಯಮ, ಆಹಾರ ಸಂಸ್ಕರಣಾ ಘಟಕ, ಹಾಲಿನ ಉತ್ಪನ್ನಗಳ ತಯಾರಿಕಾ ಘಟಕ, ಯಾಂತ್ರಿಕ ಉಪಕರಣಗಳ ಉತ್ಪಾದನಾ ಘಟಕ, ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಘಟಕಗಳು ಸೇರಿ 25ಕ್ಕೂ ಹೆಚ್ಚು ಕೈಗಾರಿಕೆಗಳ ಆರಂಭಕ್ಕೆ ಅನುಮೋದನೆ ದೊರೆತಿದೆ. ಕೆಲವು ಘಟಕಗಳ ಸ್ಥಾಪನೆಗೆ ಕಾಮಗಾರಿಯೂ ನಡೆದಿದೆ. ಗಾರ್ಮೆಂಟ್ಸ್ ಸ್ಥಾಪನೆಗೆ ಮ್ಯಾಫ್ ಹೊರತಾಗಿ ಇನ್ನೂ 2-3 ಅರ್ಜಿಗಳು ಅನುಮೋದನೆಗೊಂಡಿವೆ’ ಎಂದು ಕೆಐಎಡಿಬಿ ಮೂಲಗಳು ತಿಳಿಸಿವೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ನಗದಿಯಾತ್ ಕಾವಲು ಪ್ರದೇಶದಲ್ಲಿ 236.95 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ₹30 ಕೋಟಿ ವೆಚ್ಚದಲ್ಲಿ ರಸ್ತೆ, ನೀರು, ಲೇಔಟ್ ನಿರ್ಮಾಣ ಮೊದಲಾದ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಿದೆ. ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇದ್ದ ಅಡೆ–ತಡೆ ಸದ್ಯ ನಿವಾರಣೆಯಾಗಿದೆ. ತಂಗಲಿ ಸಮೀಪದ ವಿದ್ಯುತ್ ವಿತರಣಾ ಕೇಂದ್ರ (ಎಂಯುಎಸ್ಎಸ್)ವನ್ನು ಮೇಲ್ದರ್ಜೆಗೆ ಏರಿಸಿ ಅಲ್ಲಿಂದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ₹16 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರಕಿದೆ. ಟೆಂಡರ್ ಪ್ರಕ್ರಿಯೆಯೂ ಆಗಿದೆ. ವಿದ್ಯುತ್ ತಂತಿ ಅಳವಡಿಕೆ ಹಾಗೂ ಕೈಗಾರಿಕಾ ಪ್ರದೇಶದ ಎಲ್ಲ ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ ಬಾಕಿ ಇದೆ.
ಕಡೂರಿನ ಹೊರವಲಯದ ನಗದಿಯಾತ್ ಕಾವಲು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯು 236.95 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಂಡಿದೆ. ಈ ಪೈಕಿ ಬ್ಯಾಂಕ್ ಅಗ್ನಿಶಾಮಕ ಠಾಣೆ ಅಂಚೆ ಕಚೇರಿ ಮೊದಲಾದ ಸರ್ಕಾರಿ ವ್ಯವಸ್ಥೆಗೆ 7 ಎಕರೆ ಉದ್ಯಮಗಳು ಸ್ಥಾಪನೆಯಾದರೆ ಪಾರ್ಕಿಂಗ್ ಸೌಲಭ್ಯಕ್ಕೆ 11 ಎಕರೆ ರಾಷ್ಟ್ರೀಯ ಹೆದ್ದಾರಿಗೆ 32 ಎಕರೆ ಓವರ್ ಹೆಡ್‌ಟ್ಯಾಂಕ್ ತ್ಯಾಜ್ಯ ಸಂಗ್ರಹ ವಿಲೇವಾರಿ ಘಟಕಗಳು ಎಸ್‌ಟಿಪಿ ಘಟಕ ಹಸಿರು ವಲಯ (ಗ್ರೀನ್‌ಬೆಲ್ಟ್) ನಿರ್ಮಾಣಕ್ಕೆ ಸುಮಾರು 25 ಎಕರೆ ಭೂಮಿ ಬಳಕೆ ಆಗುತ್ತಿದೆ. ಉಳಿದಂತೆ 147.60 ಎಕರೆ ಭೂಮಿ ಕೈಗಾರಿಕೆಗಳ ಸ್ಥಾಪನೆಗೆ ಬಳಕೆಯಾಗಲಿದೆ. ‘ಉದ್ಯಮ ಆರಂಭ ಸಂಬಂಧ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 67 ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ 21 ಅರ್ಜಿಗಳು ಅನುಮೋದನೆಗೊಂಡಿವೆ. ಇವುಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ 57 ರಾಜ್ಯ ಮಟ್ಟದ ಸಮಿತಿಯಲ್ಲಿ 15 ಸೇರಿ 72 ನಿವೇಶನ ಹಂಚಿಕೆಯಾಗಿವೆ. ಉಳಿದಂತೆ 16 ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗುತ್ತಿದೆ’ ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 6 ಸಾವಿರ ಮಹಿಳೆಯರಿಗೆ ಕೆಲಸ: ‘ಚುನಾವಣಾ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರವಸೆ ನೀಡಿದಂತೆ ನಗದಿಯಾತ್ ಕಾವಲಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳ ಮನವೊಲಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರ ಸಹಕಾರದಲ್ಲಿ ಬೃಹತ್ ಗಾರ್ಮೆಂಟ್ ಕಂಪೆನಿ ಆರಂಭವಾಗುತ್ತಿದೆ’ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.