ADVERTISEMENT

ಸ್ಥಳೀಯ ಭಾಷೆಯ ಮೂಲೆಗುಂಪು ಸರಿಯಲ್ಲ: ಕುಂ.ವೀರಭದ್ರಪ್ಪ

ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪಕುಂ.ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:10 IST
Last Updated 31 ಜನವರಿ 2021, 2:10 IST
ತರೀಕೆರೆ ಪಟ್ಟಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಾಹಿತಿ ಕುಂ.ವೀರಭದ್ರಪ್ಪ ದೀಪ ಬೆಳಗಿದರು (ಎಡಚಿತ್ರ). ಸಮ್ಮೇಳನದಲ್ಲಿ ನುಡಿ ಪುಸ್ತಕ ಮನೆಯಲ್ಲಿ ಪುಸ್ತಕ ಖರೀದಿಯಲ್ಲಿ ಸಾಹಿತ್ಯಾಸಕ್ತರು ತೊಡಗಿರುವುದು.
ತರೀಕೆರೆ ಪಟ್ಟಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಾಹಿತಿ ಕುಂ.ವೀರಭದ್ರಪ್ಪ ದೀಪ ಬೆಳಗಿದರು (ಎಡಚಿತ್ರ). ಸಮ್ಮೇಳನದಲ್ಲಿ ನುಡಿ ಪುಸ್ತಕ ಮನೆಯಲ್ಲಿ ಪುಸ್ತಕ ಖರೀದಿಯಲ್ಲಿ ಸಾಹಿತ್ಯಾಸಕ್ತರು ತೊಡಗಿರುವುದು.   

ತರೀಕೆರೆ: ‘ಸ್ಥಳೀಯ ಭಾಷೆಗಳ ಮೇಲೆ ರಾಷ್ಟ್ರೀಯ ಭಾಷೆಗಳನ್ನು ಸರ್ಕಾರ ಬಲವಂತವಾಗಿ ಹೇರುತ್ತಿದೆ. ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯನ್ನು ಮೂಲೆಗುಂಪು ಮಾಡುವ ಕ್ರಮವನ್ನು ಬಿಡಬೇಕು’ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಪಟ್ಟಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾ ರೋಪದಲ್ಲಿ ಮಾತನಾಡಿದ ಅವರು, ‘ಸಮ್ಮೇಳನ ಎಂದರೆ ಕನ್ನಡಿಗರು ಭಾವ ಪರವಶರಾಗಬೇಕು. ಸರ್ಕಾರವು ಸಂವಿಧಾನದಲ್ಲಿರುವ 22 ಭಾಷೆಗಳನ್ನು ಮೂಲೆ ಗುಂಪು ಮಾಡುವ ಹುನ್ನಾರ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಧರ್ಮವಾಗಿದೆ. ದ್ರಾವಿಡ ಭಾಷೆಗಳ ಮೇಲೆ ಇನ್ನೊಂದು ಭಾಷೆಯ ಸವಾರಿ ಸಾಧ್ಯವಿಲ್ಲ. ಕನ್ನಡದಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಹಳ್ಳಿಗಳ ರಕ್ಷಣೆ ಆದರೆ ಮಾತ್ರ ಕನ್ನಡಿಗ, ಕನ್ನಡದ ಉಳಿವು ಸಾಧ್ಯ. ಕನ್ನಡದಲ್ಲಿ ವೈವಿಧ್ಯಯ ಸಂಬಂಧ ಸೂಚಕಗಳಿದ್ದು, ಭಾಷೆಯನ್ನು ಪ್ರೀತಿಸುವ ಕೆಲಸವಾಗಬೇಕು’ ಎಂದರು.

‘ರೈತನಿಗೆ ಭೂ ಮೇಲಿನ ಹಕ್ಕು ಗಳನ್ನು ಕಸಿಯಲು ಸರ್ಕಾರ ತರುತ್ತಿರುವ ಸುಗ್ರೀವಾಜ್ಞೆಗಳು ಸರಿಯಲ್ಲ. ಸರ್ಕಾರ ಹೇಳಿದಂತೆ ರೈತ ಬೆಳೆಯಬೇಕು ಹಾಗೂ ಮಾರಾಟ ಮಾಡಬೇಕು ಇದು ಫ್ಯಾಸಿಸಂನ ಇನ್ನೊಂದು ಮುಖ ವಾಗಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಪ್ರತಿಭಟಿಸದಿರುವ ಮೂಲಕ ನಿಷ್ಕ್ರೀಯ ವಾಗಿದೆ’ ಎಂದು ಆಕ್ಷೇಪಿಸಿದರು.

ADVERTISEMENT

‘ತಾಲ್ಲೂಕಿನಲ್ಲಿರುವ ಅಕ್ಕನಾಗ ಲಾಂಬಿಕೆ ಗದ್ದುಗೆಯನ್ನು ಕೂಡಲ ಸಂಗಮ ಕ್ಷೇತ್ರದಂತೆಯೇ ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದ ಅವರು ಅಕ್ಕನಾಗಲಾಂಬಿಕೆ ಜಯಂತಿಯನ್ನು ಸರ್ಕಾರ ಮಹಿಳಾ ದಿನಾಚರಣೆಯನ್ನಾಗಿ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಆಯ ನೂರು ಮಂಜುನಾಥ್ ಮಾತನಾಡಿ, ‘ಕನ್ನಡದ ನೆಲದಲ್ಲಿ ಭಾಷಾಂದೋಲನ ನಡೆದಷ್ಟು ಬೇರೆ ಯಾವ ರಾಜ್ಯದಲ್ಲಿಯೂ ನಡೆದಿಲ್ಲ. ಕನ್ನಡಿಗರ ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡುವ ವಾತಾವರಣ ಬೆಳೆಯಬೇಕು. ಭಾಷೆ ಬೆಳೆಯುವ ಮೂಲಕ ನಮ್ಮ ನೆಲದ ಹಿನ್ನೆಲೆ, ಪರಂಪರೆ ಹಾಗೂ ಹೋರಾಟವನ್ನು ನೆನಪಿಸಿಕೊಳ್ಳುತ್ತ ಮುಂದಿನ ಪೀಳಿಗೆಗೆ ಪರಿಚಯಿಸ ಬೇಕಾಗಿದೆ’ ಎಂದು ಹೇಳಿದರು.

‘ಸಮೃದ್ಧ ಭಾಷೆಯಾಗಿದ್ದ ವಚನ ಸಾಹಿತ್ಯವು ಇಂದು ಕೇವಲ ವೇದಿಕೆ ಮೇಲೆ ಉಲ್ಲೇಖಿಸುವ ವಾಕ್ಯಗಳಾಗಿ ಉಳಿದಿವೆ. ಕನ್ನಡದಲ್ಲಿ ಸಮೃದ್ಧ ಸಾಹಿತ್ಯವಿದೆ. ಇಂಗ್ಲಿಷ್ ನಮ್ಮನ್ನು ಆಳುತ್ತಿದ್ದು, ಕನ್ನಡ ಕೇವಲ ಸಾಂದರ್ಭಿಕ ಪ್ರತಿಭಟನೆಯ ರೂಪದಲ್ಲಿದೆ’ ಎಂದರು.

ಸಮ್ಮೇಳನಾಧ್ಯಕ್ಷ ಎನ್.ರಾಜು, ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಎಂ.ಎ.ಡಿ.ಬಿ.ಮಾಜಿ ಅಧ್ಯಕ್ಷ ಎನ್.ಮಂಜುನಾಥ್, ಸಾಹಿತಿ ಶಂಬೈನೂರು ಶಿವಮೂರ್ತಿ, ಮುಖ್ಯಾಧಿಕಾರಿ ಮಹಾಂತೇಶ್, ಮುಖಂಡರಾದ ಹಾಲ ವಜ್ರಪ್ಪ, ಜಿಲ್ಲಾ ಕಸಾಪ ಕಾರ್ಯದರ್ಶಿ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಸುರೇಶ್ಚಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.