
ಕೊಪ್ಪ: ಆಟೊ ಪಲ್ಟಿಯಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ, ಎನ್.ಆರ್.ಪುರ ತಾಲ್ಲೂಕಿನ ಬೆಳ್ಳೂರು ಸಮೀಪದ ಹಾತೂರು ಗ್ರಾಮದ ಕುಣಿಬೈಲ್ ನಿವಾಸಿ, ಆಟೊ ಚಾಲಕ ಮಂಜುನಾಥ್ ಶೆಟ್ಟಿ (35) ಅವರ ಅಂಗಾಂಗ ದಾನ ಪ್ರಕ್ರಿಯೆ ಗುರುವಾರ ನಡೆಯಿತು.
ಪಟ್ಟಣದ ಪ್ರಶಮನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಲಿವರ್, ಕಣ್ಣನ್ನು ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಗೆ ಹಾಗೂ ಕಿಡ್ನಿಯನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್‌ನಲ್ಲಿ ರವಾನಿಸಲಾಯಿತು. ಮಣಿಪಾಲ ಆಸ್ಪತ್ರೆ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು.
ಮಂಜುನಾಥ್ ಅವರು ಇತ್ತೀಚೆಗೆ ಆಟೊದಲ್ಲಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದರು. ನಂತರ ಕುಟುಂಬದವರು ಕೊಪ್ಪದ ಪ್ರಶಮನಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಂಗಾಂಗ ದಾನ ಮಾಡುವುದರಿಂದ ಸಮಾಜಕ್ಕೆ ಆಗುವ ಅನುಕೂಲದ ಬಗ್ಗೆ ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅವರು ಮಂಜುನಾಥ್ ಅವರ ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟರು. ದುಃಖದ ಸಂದರ್ಭದಲ್ಲೂ ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂಬ ಸಂಕಲ್ಪದೊಂದಿಗೆ ಪತ್ನಿ ಅಪೂರ್ವ ಶೆಟ್ಟಿ ಅವರು ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
ಮಣಿಪಾಲ ಆಸ್ಪತ್ರೆ ತಜ್ಞ ವೈದ್ಯರು ಬುಧವಾರ ರಾತ್ರಿಯಿಂದ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿದ್ದರು. ಗುರುವಾರ ಸಂಜೆ 5.45ರ ಸುಮಾರಿಗೆ ಕಾರ್ಯಪೂರ್ಣಗೊಳಿಸಿ, ಆಂಬುಲೆನ್ಸ್ ಮೂಲಕ ರವಾನಿಸಲಾಯಿತು. ಪ್ರಶಮನಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಉದಯಶಂಕರ್, ಡಾ.ರೇಖಾ ಉದಯಶಂಕರ್ ಸಹಕಾರ ನೀಡಿದ್ದರು.
ಶಾಸಕ ಟಿ.ಡಿ.ರಾಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಇದ್ದರು. ಅಂಗಾಂಗವನ್ನು ಬೇರೆಡೆ ಸಾಗಿಸುವ ವಿಚಾರ ತಿಳಿದ ಸಾರ್ವಜನಿಕರು ಆಸ್ಪತ್ರೆ ಎದುರು ಸೇರಿದ್ದರು. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮಂಜುನಾಥ್ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಆಸ್ಪತ್ರೆಯಿಂದ ಮನೆಗೆ ಸಾಗಿಸಲಾಯಿತು. ಪಟ್ಟಣದಲ್ಲಿ ನೂರಾರು ಆಟೊಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು.
ಅಂಗಾಂಗಗಳನ್ನು ಮಂಗಳೂರು, ಮಣಿಪಾಲಕ್ಕೆ ರವಾನಿಸಲು ಪೊಲೀಸರು ಸಹಕಾರ ನೀಡಿದರು. ಆಗುಂಬೆ ಮೂಲಕ ಆಂಬುಲೆನ್ಸ್ ತೆರಳಬೇಕಿದ್ದರಿಂದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಕಣ್ಣೀರಿನಲ್ಲಿ ಕುಟುಂಬ...
ಮಂಜುನಾಥ್, ಅಪೂರ್ವ ದಂಪತಿಗೆ 4 ವರ್ಷ ಹಾಗೂ 1 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಆಟೊ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಂಜುನಾಥ್ ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಆಸ್ಪತ್ರೆ ಬಳಿ ನೆರೆದಿದ್ದವರು 'ಮಂಜುನಾಥ್ ಅಮರ್ ರಹೇ..' ಎಂದು ಹೇಳಿದರು.
ಸರ್ಕಾರದ ‘ಜೀವ ಸಾರ್ಥಕತೆ’ ಅಭಿಯಾನದ ಅಡಿಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು. ಈ ಕಾರ್ಯದಲ್ಲಿ ಅಭಿಯಾನದ ಮಂಗಳೂರು ವಿಭಾಗದ ಸಂಯೋಜಕಿ ಪದ್ಮಾ ಭಾಗವಹಿಸಿದ್ದರು. ಮಣಿಪಾಲ ಆಸ್ಪತ್ರೆಯ ಡಾ.ಜಯಂತ್ ರೆಡ್ಡಿ, ಡಾ.ಭಾರತ್, ಡಾ.ಆದಿತ್ಯ, ಮಂಗಳೂರು ಎ.ಜೆ.ಆಸ್ಪತ್ರೆಯ ಡಾ.ರೋಷನ್ ನೇತೃತ್ವದ ತಂಡ ಶಸ್ತ್ರಕ್ರಿಯೆ ನಡೆಸಿದರು ಎಂದು ಪ್ರಶಮನಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಉದಯಶಂಕರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.