ADVERTISEMENT

ಚಿಕ್ಕಮಗಳೂರು | ಟೌನ್‌ಶಿಪ್ ಅರಣ್ಯಕ್ಕೆ: ಸ್ಥಳೀಯರಲ್ಲಿ ಆತಂಕ

ಕಾರ್ಮಿಕ ಕಾಲೊನಿಗಳ ನಿವಾಸಿಗಳು ಇನ್ನೂ ಅತಂತ್ರ

ವಿಜಯಕುಮಾರ್ ಎಸ್.ಕೆ.
Published 3 ಸೆಪ್ಟೆಂಬರ್ 2025, 3:10 IST
Last Updated 3 ಸೆಪ್ಟೆಂಬರ್ 2025, 3:10 IST
ಕುದುರೆಮುಖ ಟೌನ್‌ಶಿಪ್‌ನಲ್ಲಿರುವ ನೆಹರು ವೃತ್ತ
ಕುದುರೆಮುಖ ಟೌನ್‌ಶಿಪ್‌ನಲ್ಲಿರುವ ನೆಹರು ವೃತ್ತ   

ಚಿಕ್ಕಮಗಳೂರು: ಕುದುರೆಮುಖ ಟೌನ್‌ಶಿಪ್ ಸಹಿತ 282 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಮುಂದಾಗಿದೆ. ಇದಕ್ಕೆ ಹೊಂದಿಕೊಂಡೇ ಇರುವ ಕಾರ್ಮಿಕರ ಕಾಲೊನಿ(ವಿನೋಭ ನಗರ) ನಿವಾಸಿಗಳು ಮತ್ತು ಸುತ್ತಮುತ್ತಲ ಸ್ಥಳೀಯರು  ಅತಂತ್ರಗೊಳ್ಳುವ ಆತಂಕದಲ್ಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಪಡೆಯಲು ಕೆಐಒಸಿಎಲ್ ತನ್ನ ಒಡೆತನದಲ್ಲಿರುವ ಕುದುರೆಮುಖ ಟೌನ್‌ಶಿಪ್ ಸಹಿತ 282 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿದೆ.

ಕುದುರೆಮುಖದಲ್ಲಿ ಗಣಿಗಾರಿಕೆ ಆರಂಭವಾದಾಗಿನಿಂದ ಟೌನ್‌ಶಿಪ್‌ಗೆ ಹೊಂದಿಕೊಂಡಂತೆ ಕಾರ್ಮಿಕ ಕಾಲೊನಿ ಇದೆ. ಈ ಕಾಲೊನಿ ಇರುವ ಜಾಗ ಕೆಐಒಸಿಎಲ್ ಒಡೆತನದಲ್ಲಿದೆಯೇ, ಅರಣ್ಯ ಜಾಗವೊ, ಕಂದಾಯ ಜಾಗವೊ ಎಂಬುದು ನಿವಾಸಿಗಳಿಗೆ ನಿಖರವಾಗಿ ಗೊತ್ತಿಲ್ಲ. 

ADVERTISEMENT

ಕಂಪನಿ ಕೆಲಸ ನಿಲ್ಲಿಸಿದ ಬಳಿಕ ಉದ್ಯೋಗ ಕಳೆದುಕೊಂಡವರು ಈಗ ಸುತ್ತಮುತ್ತ ತೋಟಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಸೇರಿ ಮೂಲಸೌಕರ್ಯವೇ ಇಲ್ಲದೆ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಾರ್ಮಿಕರು ನೆಲೆಸಿದ್ದ ವಿನೋಭನಗರ, ಹೊಸಮಕ್ಕಿಯಂತ ಲೇಬರ್ ಕಾಲೊನಿಗಳಲ್ಲಿ ನೆಲೆಸಿದ್ದಾರೆ.

ವಿನೋಭನಗರದಲ್ಲಿ 165ಕ್ಕೂ ಹೆಚ್ಚು ಕುಟುಂಬಗಳಿದ್ದು, ಸಣ್ಣ ಸಣ್ಣ ಜೋಪಡಿಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಈ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಆದರೆ, ಜಾಗ ಯಾರದ್ದು ಎಂಬುದೇ ಅಲ್ಲಿನ ನಿವಾಸಿಗಳಿಗೆ ಗೊತ್ತಿಲ್ಲ. ‘ಕಂದಾಯ ಜಾಗ ಎಂದು ಪೂರ್ವಿಕರು ಹೇಳಿದ್ದಾರೆ. ಆದರೆ, ಹಕ್ಕುಪತ್ರ ನೀಡುತ್ತಿಲ್ಲ’ ಎಂದು ನಿವಾಸಿಗಳು ಹೇಳುತ್ತಾರೆ.

‘ಈಗ ಕುದುರೆಮುಖ ಟೌನ್‌ಶಿಪ್ ಸೇರಿ ಕೆಐಒಸಿಎಲ್‌ಗೆ ಸೇರಿದ ಅಷ್ಟೂ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಸಿದ್ಧತೆ ನಡೆದಿದೆ. ಈ ಜಾಗ ಕೆಐಒಸಿಎಲ್‌ ಒಡೆತನದಲ್ಲಿದ್ದರೆ ಅರಣ್ಯ ಇಲಾಖೆ ಖಾಲಿ ಮಾಡಿಸಲಿದೆ. ಯಾರದೇ ಜಾಗವಾಗಿದ್ದೂ 55 ವರ್ಷಗಳಿಂದ ನೆಲೆಸಿರುವ ನಮಗೆ ಇಲ್ಲಿ ಬದುಕಲು ಬಿಡಬೇಕು’ ಎಂಬುದು ಅಲ್ಲಿನ ನಿವಾಸಿಗಳ ಆಗ್ರಹ.

‘ಹಕ್ಕುಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಿ ಕಾರ್ಮಿಕರೂ ಗೌರವಯುತ ಜೀವನ ನಡೆಸಲು ಅವಕಾಶ ಮಾಡಬೇಕು’ ಎಂದು ನಿವಾಸಿ ವಿಕ್ರಮ್ ಹೇಳುತ್ತಾರೆ.

ಟೌನ್‌ಶಿಪ್ ಉಳಿಸಿ; ಇಲ್ಲವೇ ರೈತರಿಗೆ ವಾಪಸ್ ನೀಡಿ

‘ಕುದುರೆಮುಖದಲ್ಲಿ ಇರುವ ಎಲ್ಲರೂ ಗಿರಿಜನರು ಕಾರ್ಮಿಕರು ಮತ್ತು ಸಣ್ಣ ರೈತರು. ಅವರ ಮೇಲೆ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ. ಕುದುರೆಮುಖ ಟೌನ್‌ಶಿಪ್ ಉಳಿಸಲೇಬೇಕು ಇಲ್ಲವೇ ರೈತರಿಗೆ ಭೂಮಿ ವಾಪಸ್ ನೀಡಬೇಕು’ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು. ‘ಕ್ರೀಡಾಂಗಣ ಆಸ್ಪತ್ರೆ ಶಾಲೆ ದೇವಸ್ಥಾನ ಎಲ್ಲವೂ ಇವೆ. ಅದನ್ನು ಉಳಿಸದಿದ್ದರೆ ಮಲೆನಾಡಿನ ಜನ ಬದುಕುವುದು ಹೇಗೆ ಎಲ್ಲವನ್ನೂ ಅರಣ್ಯಕ್ಕೆ ಸೇರಿಸಿದರೆ ನಿವಾಸಿಗಳು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು. ಸರ್ಕಾರ ಈ ಜನರ ಬಗ್ಗೆ ಕಾಳಜಿ ತೋರಿಸಬೇಕು. ಅರಣ್ಯ ಇಲಾಖೆಗೆ ಟೌನ್‌ಶಿಪ್ ವಹಿಸಿಸಿ ಕುದುರೆಮುಖ ಎಂಬ ಊರೇ ಇಲ್ಲದಂತೆ ಮಾಡಿದರೆ ಜನ ಧಂಗೆ ಏಳಲಿದ್ದಾರೆ. ಅದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದರು. ‘ಟೌನ್‌ಶಿಪ್ ನಿರ್ಮಾಣವಾಗಿರುವ ಜಾಗ ಅಲ್ಲಿನ ರೈತರಿಗೆ ಸೇರಿದ್ದು. ಮನೆಗೊಂದು ಕೆಲಸದ ಜತೆಗೆ ಪರಿಹಾರ ಕೊಡುವುದಾಗಿ ಹೇಳಿ ಭೂಮಿ ಪಡೆಯಲಾಗಿತ್ತು. ಈಗ ಆ ಜಾಗವನ್ನು ರೈತರಿಗೆ ವಾಪಸ್ ನೀಡಬೇಕು ಅಥವಾ ಟೌನ್‌ಶಿಪ್ ಉಳಿಸಬೇಕು. ಮಲೆನಾಡಿನ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ರಕ್ಷಣೆಗೆ ಸೇನೆ ನೇಮಿಸುವ ಸಂದರ್ಭವನ್ನು ಸರ್ಕಾರ ತಂದುಕೊಳ್ಳಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.